ಬುಧವಾರ, ಅಕ್ಟೋಬರ್ 16, 2019
28 °C
ಭಾವನೆಗಳೇ ಬಂಡವಾಳ l ಎಲ್ಲೆ ಮೀರಿದ ಶೋಷಣೆ l ಮಾರ್ಗಸೂಚಿಗಿಲ್ಲ ಬೆಲೆ

ಒಳನೋಟ| ಮಕ್ಕಳಿಲ್ಲದ ದಂಪತಿಗಳ ಅಸಹಾಯಕತೆಯೇ ಬಂಡವಾಳ: ಐವಿಎಫ್‌ಗೆ ಬೇಕಿದೆ ಕಡಿವಾಣ

Published:
Updated:

ಬೆಂಗಳೂರು : ಮಕ್ಕಳಿಲ್ಲದ ದಂಪತಿಗಳ ಅಸಹಾಯಕತೆಯನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಬಹುತೇಕ ಐವಿಎಫ್ ಕೇಂದ್ರಗಳು ಸುಲಿಗೆ ಕೇಂದ್ರ ಗಳಾಗಿ ಮಾರ್ಪಟ್ಟಿರುವ ಆರೋಪಕ್ಕೆ ಗುರಿಯಾಗಿವೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪ್ರಮುಖ ನಗರಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಇವುಗಳ ನಿಯಂತ್ರಣ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ವೃತ್ತಿಧರ್ಮ ಮರೆತಂತಿರುವ ಬಹುತೇಕ ವೈದ್ಯರು ಐಷಾರಾಮಿ ಐವಿಎಫ್ ಕೇಂದ್ರಗಳನ್ನು ತೆರೆದು ಮಕ್ಕಳಿಲ್ಲದ ದಂಪತಿಗಳನ್ನುಶೋಷಿಸುತ್ತಿದ್ದಾರೆ.

‘ಐವಿಎಫ್‌’ ತಂತ್ರಜ್ಞಾನಕ್ಕೆ ಈಗ 41ರ ಹರೆಯ. 1978ರ ಅ.3ರಂದು ಈ ತಂತ್ರಜ್ಞಾನದ ಮೊದಲ ಕೂಸು ಕನುಪ್ರಿಯಾ ಜನಿಸಿತು. ಆ ನಂತರ, ಕೃತಕ ಗರ್ಭಧಾರಣೆ ತಂತ್ರಜ್ಞಾನ ತಾಯ್ತನದ ಪರಿಭಾಷೆಯನ್ನೇ ಬದ ಲಿಸಿತು. ಲಕ್ಷಾಂತರ ದಂಪತಿಗಳ ಮಡಿಲು ತುಂಬಿದ ಧನ್ಯತೆಯ ಬೆನ್ನಲ್ಲೇ ಉದ್ಯಮವಾಗಿ ಪರಿವರ್ತನೆಯಾದ ಅಪ ಕೀರ್ತಿಗೂ ಗುರಿಯಾಗಿದೆ. ಈ ಬೆಳವಣಿಗೆಯನ್ನು ಹತ್ತಿಕ್ಕಬೇಕು ಎಂಬ ಪ್ರಯತ್ನಗಳಿಗೆ ಯಶ ಸಿಕ್ಕಿಲ್ಲ. ಐವಿಎಫ್‌ ಕೇಂದ್ರಗಳ ಮೇಲೆ ನಿಯಂತ್ರಣ ಹೇರುವ ಎಆರ್‌ಟಿ ಮಸೂದೆ 2014ಕ್ಕೆ ಅಂಗೀಕಾರದ ಮುದ್ರೆ ಬಿದ್ದಿಲ್ಲ.

ಇತ್ತೀಚಿನ ದಿನಗಳಲ್ಲಿ ಐವಿಎಫ್‌ ಕೇಂದ್ರಗಳ ಬಾಗಿಲು ಬಡಿಯುವವರ ಸಂಖ್ಯೆ ಹೆಚ್ಚಿದೆ. ಈ ದಂಪತಿಗಳಿಗೆ ಸಹಜ ಗರ್ಭಧಾರಣೆ ಸಾಧ್ಯತೆಗಳನ್ನು ಪರೀಕ್ಷಿಸದೇ, ಸಣ್ಣಪುಟ್ಟ ನ್ಯೂನತೆಗಳನ್ನು ಸರಿಪಡಿಸುವ ಬದಲಿಗೆ ಐವಿಎಫ್‌ ಚಿಕಿತ್ಸೆ ಆರಂಭಿಸುವ ವೈದ್ಯರು, ಮಕ್ಕಳು ಬಯಸಿ ಬರುವವರನ್ನು ಸುಲಿಗೆ ಮಾಡುತ್ತಿದ್ದಾರೆ. ಇಂತಹ ಬಂಜೆತನ ನಿವಾರಣಾ ಕ್ಲಿನಿಕ್‌ ಗಳು, ಎಆರ್‌ಟಿ ಕೇಂದ್ರಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲವಾದ್ದರಿಂದ ತಂತ್ರಜ್ಞಾನದ ದುರ್ಬಳಕೆ ಮೇರೆಮೀರಿದೆ.

ಐವಿಎಫ್‌–ಐಯುಐ ಸಹಿತ ಬಂಜೆ ತನಕ್ಕೆ ಪರಿಹಾರ ನೀಡುವ ಎಆರ್‌ಟಿ ಕ್ಲಿನಿಕ್‌ಗಳು – ಎಆರ್‌ಟಿ ಬ್ಯಾಂಕ್‌ಗಳು ಹೇಗಿರಬೇಕು? ಯಾವ ಸೌಲಭ್ಯ ಹೊಂದಿರಬೇಕು? ತಜ್ಞ ವೈದ್ಯರ–ತಂತ್ರ ಜ್ಞರ ಸಂಖ್ಯೆ ಎಷ್ಟಿರಬೇಕು? ಅವರ ಅರ್ಹತೆ ಏನಿರಬೇಕು ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾರ್ಗಸೂಚಿ ನಿಗದಿಗೊಳಿಸಿದೆ. ನೋಂದಣಿ ಸಂದರ್ಭ ದಲ್ಲಿ ಈ ಎಲ್ಲಾ ವಿವರ ನೀಡಬೇಕು. ಹೆಚ್ಚಿನ ಕೇಂದ್ರಗಳು ಮಾರ್ಗಸೂಚಿ ಪಾಲಿಸದ ಕಾರಣಕ್ಕೆ ನೋಂದಣಿಗೆ ಮಾಡಿಸುವ ಗೋಜಿಗೆ ಹೋಗುವುದಿಲ್ಲ.

ಭಾರತದಲ್ಲಿ ಶೇ 10 ರಿಂದ 14ರಷ್ಟು ದಂಪತಿಗಳು ಸಂತಾನಹೀನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ಆರು ದಂಪತಿಗಳಲ್ಲಿ ಒಬ್ಬರು ಗರ್ಭಧಾರಣೆಯ ಸಮಸ್ಯೆಗೆ ಗುರಿ ಯಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಧನ ದಾಹಿಗಳು ಗಲ್ಲಿಗೊಂದರಂತೆ ಐವಿಎಫ್‌ ಕೇಂದ್ರಗಳನ್ನು ತೆರೆಯುತ್ತಿದ್ದಾರೆ. ಸದ್ಯ ದೇಶದಾದ್ಯಂತ 402 ಕೇಂದ್ರಗಳು ಮಾತ್ರ ನೋಂದಾಯಿಸಿಕೊಂಡಿವೆ. ಉಳಿದಂತೆ ಸಾವಿರಾರು ಕ್ಲಿನಿಕ್‌ಗಳಿಗೆ ನೋಂದಣಿಯೂ ಇಲ್ಲ.‌

ನಿಯಂತ್ರಣವಿಲ್ಲದೆ ಹುಟ್ಟಿಕೊಂಡ ಐವಿಎಫ್ ಕೇಂದ್ರಗಳನ್ನು ನಿಯಂತ್ರಣಕ್ಕೆ ತರಬೇಕೆಂದು ಐಸಿಎಂಆರ್ ಕರಡು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ(2002ರಲ್ಲಿ). ಆರೋಗ್ಯ ಸಚಿವಾಲಯವು ಅದನ್ನು ಪರಿಶೀಲಿಸಿ, ಕೆಲ ಬದಲಾವಣೆ ತರುವಾಯ 2005ರಲ್ಲಿ ಅದನ್ನು ಪ್ರಕಟಿಸಿದೆ. ಸಂಬಂಧಿಸಿದ ವಿಧೇಯಕಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ.

ಸುಳ್ಳು ಭರವಸೆ : ಕೆಲ ಹೈಟೆಕ್‌ ಕೇಂದ್ರಗಳು ತಮ್ಮ ವೆಬ್‌ಸೈಟ್‌ನಲ್ಲೇ ಸುಳ್ಳು ಭರವಸೆ ನೀಡಿವೆ. ಯಶಸ್ಸಿನ ಪ್ರಮಾಣವನ್ನು ಶೇ 70ರಿಂದ 80ರಷ್ಟು ಎಂದು ಹೇಳಿಕೊಂಡಿವೆ. ಯಶಸ್ಸಿನ ಪ್ರಮಾಣವನ್ನು ದಾಖಲೆ ಸಮೇತ ನೋಂದಾಯಿಸುವುದು ಕಡ್ಡಾಯವಲ್ಲ. ಹೀಗಾಗಿ ಇಂತಹ ಅವಾಸ್ತವ ಭರವಸೆಗಳನ್ನು ತಡೆಯಲು, ಶಿಸ್ತು ಕ್ರಮ ಕೈಗೊಳ್ಳಲು ಆಗುತ್ತಿಲ್ಲ.

ಜಾಗತಿಕ ಮಟ್ಟದಲ್ಲಿ ಐವಿಎಫ್‌ ಯಶಸ್ಸಿನ ದರ ಶೇ 35 ರಿಂದ 40ರಷ್ಟಿದೆ. ಇದನ್ನು ಎರಡು ರೀತಿ ಅಳೆಯಲಾಗುತ್ತದೆ. ಗರ್ಭಧಾರಣೆಯ ಯಶಸ್ಸು ಹಾಗೂ ಆರೋಗ್ಯವಂತ ಮಗುವಿನ ಯಶಸ್ವಿ ಜನನ. ಈ ಪ್ರಕ್ರಿಯೆಗೆ ಒಳಗಾಗುವ ಮಹಿಳೆಯರ ಗರ್ಭಧಾರಣೆಯ ಪ್ರಮಾಣ ಶೇ 50-60ರಷ್ಟಿದೆ. ಆದರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡುವಲ್ಲಿ ಯಶಸ್ವಿಯಾಗುವವರ ಸಂಖ್ಯೆ ಶೇ 35 ರಿಂದ 40ರಷ್ಟು ಮಾತ್ರ. ಅಂದರೆ, 100 ಜನರಲ್ಲಿ 35ರಿಂದ 40 ಜೋಡಿಗಳು ಮಾತ್ರ ಮಡಿಲು ತುಂಬಿಕೊಂಡು ಹೋಗುತ್ತಾರೆ. ಉಳಿದವರು ಕೈಯಲ್ಲಿರುವ ಹಣ, ಮೈಯಲ್ಲಿರುವ ಕಸುವನ್ನೂ, ಕಣ್ಣಲ್ಲಿನ ಕನಸನ್ನೂ ಕಳೆದುಕೊಂಡು ಬರಿದಾಗಿ ಮನೆಗೆ ಮರಳುತ್ತಾರೆ.

ಇದು ಉದ್ಯಮ ರೂಪ ಪಡೆಯುತ್ತಿದ್ದಂತೆ ಏಜೆಂಟರು ಹುಟ್ಟಿಕೊಂಡಿದ್ದಾರೆ. ಪ್ರತಿಷ್ಠಿತ ಕೇಂದ್ರಗಳಿಗೆ ಒಬ್ಬರನ್ನು ಕರೆದುಕೊಂಡು ಹೋದರೆ ಶೇ 10ರಷ್ಟು, ಅದು ‘ಕ್ಲೈಂಟ್’ ಆಗಿ ಮಾರ್ಪಟ್ಟರೆ ಶೇ 20ರಷ್ಟು ಕಮಿಶನ್‌ ಸಿಗುತ್ತದೆ. ನೀಡಲಾದ ಚಿಕಿತ್ಸೆ, ವೆಚ್ಚದ ಮೇಲೆ ಏಜೆಂಟರಿಗೆ ಕಮಿಷನ್ ಹಣ ಇತ್ಯರ್ಥವಾಗುತ್ತದೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ವೈದ್ಯಕೀಯ ಕ್ಯಾಂಪ್‌ಗಳು, ತಾಲ್ಲೂಕು ಪ್ರದೇಶಗಳ ಕ್ಲಿನಿಕ್‌ಗಳು ಸಹಜ ಗರ್ಭಧಾರಣೆ ಸಮಸ್ಯೆ ಇರುವವರನ್ನು ಐವಿಎಫ್ ಕೇಂದ್ರಗಳಿಗೆ ಪರಿಚಯಿಸುತ್ತಿವೆ.

ಮೇಲ್ನೋಟಕ್ಕೆ ಸುಲಭ ಅನ್ನಿಸುವ ಈ ಪ್ರಕ್ರಿಯೆಯಲ್ಲಿ ಅಪಾಯದ ಅಂಚುಗಳೂ ಇವೆ. ಹೆಚ್ಚು ಅಂಡಾಣುಗಳನ್ನು ಬೆಳೆಸಲು ನೀಡಲಾಗುವ ಇಂಜೆಕ್ಷನ್‌ನಲ್ಲಿ ಸಣ್ಣ ವ್ಯತ್ಯಾಸವಾದರೂ ಅಪಾಯದ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಅಂಡಾಣುಗಳು ನಿಯಂತ್ರಣ ಮೀರಿ ಬೆಳೆಯಬಹುದು. ಇದರಿಂದ ಅಂಡಾಶಯದ ಗಾತ್ರ ಹೆಚ್ಚಾಗಬಹುದು. ರಕ್ತಸ್ರಾವ, ನೋವಿನ ಯಾತನೆ ಇದ್ದುದೇ. ಇಂತಹ ತೊಡಕುಗಳನ್ನು ನಿರ್ವಹಿಸಲು ಸುಸಜ್ಜಿತ ಚಿಕಿತ್ಸಾಲಯಗಳು, ಸಕಲ ಸೌಲಭ್ಯಗಳು, ಅತ್ಯುತ್ತಮ ತಜ್ಞರ–ತಂತ್ರಜ್ಞರ ತಂಡದ ಅಗತ್ಯವಿರುತ್ತದೆ. ಅವೈಜ್ಞಾನಿಕವಾಗಿ ಕಾರ್ಯನಿರ್ವಹಿಸುವ ಕುಶಲವಲ್ಲದ ವೈದ್ಯರ ಕೈಯಲ್ಲಿ ಸಿಕ್ಕರೆ ಎರಡೂ ಜೀವಗಳಿಗೆ ಕುತ್ತು.

ಖರ್ಚು–ವೆಚ್ಚ

ಐವಿಎಫ್‌ ಚಿಕಿತ್ಸಾ ವೆಚ್ಚಕ್ಕೆ ಮಿತಿ ಇಲ್ಲ. ವಯಸ್ಸು, ಚಿಕಿತ್ಸೆ, ಅಗತ್ಯ ಸೇವೆ ಆಧರಿಸಿ ದರ ನಿಗದಿಯಾಗುತ್ತದೆ. ಐವಿಎಫ್‌ನ ಮೊದಲ ಸೈಕಲ್‌ನಲ್ಲೇ ಗರ್ಭಕಟ್ಟಿದರೆ ಕಡಿಮೆ ಖರ್ಚು (₹ 2 ಲಕ್ಷ). ಮತ್ತೆ ಮತ್ತೆ ಪ್ರಯತ್ನಿಸಬೇಕಾದಾಗ ಒಂದೊಂದು ಪಟ್ಟು ವೆಚ್ಚ ಹೆಚ್ಚಾಗುತ್ತಾ ಹೋಗುತ್ತದೆ. ಫಲವತ್ತತೆ ಔಷಧಗಳ ಬೆಲೆ, ಮೇಲ್ವಿಚಾರಣೆ, ಅಲ್ಟ್ರಾಸೌಂಡ್, ಲ್ಯಾಬ್‌ ಶುಲ್ಕ ಗಳು ಪ್ರತಿ ಸೈಕಲ್‌ಗೆ ಹೆಚ್ಚುತ್ತ ಹೋಗುತ್ತವೆ. ಟ್ಯೂಬ್‌ಗಳು ಬ್ಲಾಕ್‌ ಆಗಿದ್ದರೆ ಅಥವಾ ಹಾನಿಗೊಳಗಾಗಿದ್ದರೆ, ಅಂಡೋತ್ಪತ್ತಿಗೆ ಸಂಬಂ ಧಿಸಿದ ಸಮಸ್ಯೆಗಳಿದ್ದರೆ, ವೀರ್ಯಾ ಣುಗಳ ಸಂಖ್ಯೆ ಕಡಿಮೆ ಇದ್ದರೆ ಅಥವಾ ವೀರ್ಯ ಸಂಬಂಧಿತ ಇತರ ಕಾಯಿಲೆಗಳಿದ್ದರೆ ಇತರರ ಅಂಡಾಣು–ವೀರ್ಯಾಣು ಪಡೆಯಬೇಕಾಗುತ್ತದೆ. ಆಗ ಸಹಜವಾಗಿಯೇ ಹೆಚ್ಚು ವೆಚ್ಚ ಬರುತ್ತದೆ. ಬಾಡಿಗೆ ತಾಯಿಯ ಸೇವೆಗೆ ದುಪ್ಪಟ್ಟು ಖರ್ಚು. ಕೆಲವು ಚಿಕಿತ್ಸಾಲಯಗಳು ವೈದ್ಯಕೀಯ ಸೇವೆ, ವಿಶೇಷ ಕಾಳಜಿ, ವಸತಿ ಸೇರಿದಂತೆ ಪ್ಯಾಕೇಜ್‌ ರೂಪದಲ್ಲಿ ದರ ನಿಗದಿಪಡಿಸುತ್ತವೆ. ಅದು ₹10ಲಕ್ಷದಿಂದ 12 ಲಕ್ಷದವರೆಗೂ ಇರುತ್ತದೆ.

Post Comments (+)