ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಬೇಗುದಿ ಬಿಡಿ–ಬೇಸಿಗೆ ರಜೆಯಂತೆ ಸಂಭ್ರಮಿಸಿ

ಮನೆಯೊಳಗಿದ್ದು ಬೇಸರ, ಮನದೊಳಗೆ ದುಗುಡ, ಜತೆಗೆ ಭವಿಷ್ಯದ ಕಾರ್ಮೋಡ– ಹತ್ತು ಹಲವು ಆತಂಕಗಳಿಗೆ ಸಾಂತ್ವನ
Last Updated 9 ಏಪ್ರಿಲ್ 2020, 1:46 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಹೇರಿರುವ ಲಾಕ್‌ ಡೌನ್‌ ವೇಳೆ ಮನೆಯೊಳಗೇ ದಿನ ಕಳೆಯುತ್ತಿರುವ ಹಲವರಿಗೆ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮದ್ಯಪಾನ, ಧೂಮಪಾನದಂತಹ ವ್ಯಸನಿಗಳು ಕಂಗಾಲಾಗಿದ್ದಾರೆ. ಇಂತಹ ಹತ್ತು ಹಲವು ಕಿರಿಕಿರಿ ಅನುಭವಿಸುತ್ತಿರುವವರು ‘ಪ್ರಜಾವಾಣಿ’ ಬುಧವಾರ ಏರ್ಪಡಿಸಿದ ಫೋನ್ ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ನಿಮ್ಹಾನ್ಸ್ ನ ಮನೋರೋಗ ತಜ್ಞ ಡಾ.ಬಿ. ವಿನಯ್ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರೋಪಾಯಗಳನ್ನು ಸೂಚಿಸಿದರು.

* ಮೂರು ವರ್ಷಗಳಿಂದ ಕಂಪನಿಯ ಕೆಲಸದಲ್ಲಿದ್ದೆ. ಮನೆಯಲ್ಲಿ ದಿನ ಕಳೆಯಲು ಸಾಧ್ಯವಾಗುತ್ತಿಲ್ಲ. ಮಾನಸಿಕವಾಗಿ ಕುಗ್ಗುತ್ತಿದ್ದೇನೆ.

– ಬಸವ, ಬೀದರ್ ಮತ್ತು ಪ್ರದೀಪ್ ನಾಗರಾಜ್

ಡಾ.ಬಿ. ವಿನಯ್: ಕೆಲಸ ಇಲ್ಲ ಎಂದು ಮನೆಯಲ್ಲಿ ಖಾಲಿ ಕುಳಿತುಕೊಳ್ಳದಿರಿ. ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಿ. ಅಡುಗೆ ಮಾಡುವುದನ್ನು ಕಲಿಯಿರಿ. ಸಂಬಂಧಿಗಳು ಹಾಗೂ ಸ್ನೇಹಿತರೊಂದಿಗೆ ದೂರವಾಣಿ ಮೂಲಕ ಮಾತನಾಡಿ. ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಿ.

* ಲಾಕ್ ಡೌನ್‌ ಬಳಿಕ ಕಂಪನಿ ಬೀಗ ಹಾಕಿದೆ. ವೇತನವೂ ಕೈಸೇರಿಲ್ಲ. ಮುಂದೆ ಜೀವನ ನಡೆಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.

–ಟಿ. ಮಾರುತಿ, ಬೆಂಗಳೂರು

ವಿನಯ್‌: ಭವಿಷ್ಯದ ಚಿಂತೆ ಬಿಟ್ಟು, ಇಂದಿನ ದಿನವನ್ನು ಸಮರ್ಥವಾಗಿ ಎದುರಿಸುವುದನ್ನು ರೂಢಿಸಿಕೊಳ್ಳಿ. ಕೂಡಿಟ್ಟ ಹಣವನ್ನು ಮಿತವಾಗಿ ಖರ್ಚುಮಾಡಿ. ಸಂಕಷ್ಟದಲ್ಲಿರುವವರಿಗೆ ಕಾರ್ಮಿಕ ಇಲಾಖೆಯೂ ನೆರವು ನೀಡುತ್ತಿದ್ದು, ಸಹಾಯವಾಣಿಗೆ ಕರೆ ಮಾಡಿ.

* ಮಕ್ಕಳು ಸದಾ ಮೊಬೈಲ್ ಮತ್ತು ಟಿ.ವಿ ಮುಂದೆ ಕುಳಿತಿರುತ್ತಾರೆ. ಆಡಲು ಹೊರಗಡೆ ಕಳಿಸುವುದಕ್ಕೂ ಸಾಧ್ಯವಿಲ್ಲ. ಬೇರೇನು ಮಾಡಬಹುದು?

– ಬಸವರಾಜ್ ಬಂದಿಹಾಳ್

ಪಾಲಕರು ಮಕ್ಕಳ ಜೊತೆ ನಿರ್ದಿಷ್ಟವಾದ ಸಮಯವನ್ನು ವಿನಿಯೋಗಿಸಿ. ಅವರ ಅಭಿರುಚಿಗಳನ್ನು ತಿಳಿದುಕೊಳ್ಳಿ. ದೂರವಾಣಿ, ವಿಡಿಯೊ ಕಾಲ್ ಮೂಲಕ ಸ್ನೇಹಿತರ ಜತೆ ಬೆರೆಯಲು ಅವಕಾಶ ಮಾಡಿಕೊಡಿ. ಮನೆ ಕೆಲಸ ತಿಳಿಸಿಕೊಡಿ. ಅವರ ವಯಸ್ಸಿಗೆ ತಕ್ಕ ಮಾಹಿತಿ ಒದಗಿಸಿ. ನಿಮ್ಮ ಮನಸ್ಸಿನ ಭಾರವನ್ನು ಮಕ್ಕಳ ಮೇಲೆ ಹೇರದಿರಿ

* ಮನೆಯಲ್ಲಿ ಕುಳಿತು ಏನು ಮಾಡಬೇಕೆಂದೇ ತೋಚುತ್ತಿಲ್ಲ. ಇದರಿಂದ ಅಪರಾಧಿ ಭಾವನೆ ಕಾಡುತ್ತಿದೆ. ಏನು ಮಾಡಲಿ?

– ಐ.ಟಿ ಉದ್ಯೋಗಿ

ಕಂಪನಿಯ ಕೆಲಸದಲ್ಲಿದ್ದಾಗ ಮಾಡಲಾಗದ ಕಾರ್ಯಗಳಿಗೆ ಈಗ ಗಮನಕೊಡಿ. ಮನೆಮಂದಿಯೊಂದಿಗೆ ಸಮಯ ಕಳೆಯಿರಿ. ಸಂಬಂಧಿಗಳು, ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿದರೆ ಮನಸ್ಸು ಹಗುರವಾಗುತ್ತದೆ.

* ನಾನು ನಿರೂಪಣಾಕಾರನಾಗಿದ್ದು, ಈಗ ಉದ್ಯೋಗವಿಲ್ಲ. ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ಜೀವನ ಸಾಗಿಸುವುದೇ ಕಷ್ಟ.

–ಅಮರೇಶ್, ಕವಿತಾಳ

ಶಾಲಾ ಮಕ್ಕಳಂತೆ ನಮಗೂ ಬೇಸಿಗೆ ರಜೆ ಸಿಕ್ಕಿದೆ ಎಂದು ಸಂಭ್ರಮದಿಂದ ದಿನಗಳನ್ನು ಕಳೆಯಬೇಕು. ಚಿಂತಿಸುತ್ತಾ ಕುಳಿತಲ್ಲಿ ಮಾನಸಿಕವಾಗಿ ಇನ್ನಷ್ಟು ಕುಗ್ಗುವ ಅಪಾಯವಿದೆ.

* ಪ್ರತಿನಿತ್ಯ 180 ಎಂ.ಎಲ್ ಮದ್ಯ ಕುಡಿದರೆ ಮಾತ್ರ ನಿದ್ದೆ ಬರುತ್ತಿತ್ತು. ಮದ್ಯವಿಲ್ಲದೇ ಈಗ ರಾತ್ರಿ ಹೆಚ್ಚೆಂದರೆ ಒಂದು ಗಂಟೆ ಮಾತ್ರ ನಿದ್ದೆ ಬರುತ್ತಿದೆ.

– ರಾಜಶೇಖರ್, ಬೆಂಗಳೂರು

ಕುಡಿತ ಬಿಡುವುದಕ್ಕೆ ಇದು ಸಕಾಲ. ತುಂಬಾ ಸಮಯದಿಂದ ಕುಡಿತದ ಅಭ್ಯಾಸ ಇದ್ದವರಿಗೆ ನಿದ್ದೆ ಬರದಿರುವುದು, ಕೈ–ಕಾಲು ನಡುಗುವುದು, ಬೆವರುವುದು ಸಾಮಾನ್ಯ. ಇವು ಶಾಶ್ವತವಲ್ಲ. ಕೆಲವು ದಿನಗಳ ಬಳಿಕ ವ್ಯಸನದಿಂದ ಹೊರಬಂದು, ಸಾಮಾನ್ಯರಂತೆ ಇರಬಹುದು. ಗಂಭೀರ ಸಮಸ್ಯೆಕಾಣಿಸಿಕೊಂಡಲ್ಲಿ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ, ಸಲಹೆ ಪಡೆಯಿರಿ.

* ಮದ್ಯ, ತಂಬಾಕು ಇಲ್ಲದೆ ಜೀವನವೇ ಕಷ್ಟವಾಗಿದೆ. ಇವುಗಳನ್ನು ಬಿಟ್ಟು ಜೀವಿಸುವುದು ಹೇಗೆ?

– ಶಿವಾನಂದ್, ಶಿವಮೊಗ್ಗ

ಅಪರೂಪಕ್ಕೆ ಕುಡಿತ, ತಂಬಾಕು ಸೇವನೆ ಮಾಡುವರಿಗೆ ಯಾವುದೇ ಸಮಸ್ಯೆಯಾಗದು. ನಿತ್ಯ ಸೇವಿಸುವವರಿಗೆ ಸಮಸ್ಯೆಯಾಗುತ್ತದೆ. ಅತಿಯಾಗಿ ಕುಡಿತ, ತಂಬಾಕು ಸೇವನೆ ಚಟವಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅನಿವಾರ್ಯ.

* 38 ವರ್ಷಗಳಿಂದ ಉದ್ಯೋಗಿ. ಈಗ ಮನೆಯಲ್ಲೇ ಕುಳಿತು ಬೇಸರವಾಗುತ್ತಿದೆ. ಮನಸ್ಸು ಕೇಂದ್ರೀಕೃತವಾಗುತ್ತಿಲ್ಲ. ಹಗಲು ಮಲಗಿದರೆ ರಾತ್ರಿ ನಿದ್ದೆಯೇ ಬರುತ್ತಿಲ್ಲ.

– ಶಶಿಕುಮಾರ್, ಜಾಲಹಳ್ಳಿ

ಮನಸ್ಸಿನ ಯೋಚನಾ ಲಹರಿಯನ್ನೇ ಬದಲಾಯಿಸಿಕೊಳ್ಳಬೇಕು. ಈ ಸೋಂಕು ನಿರ್ಮೂಲನೆಗೆ ನೆರವಾಗುತ್ತಿದ್ದೇನೆ ಎಂದು ಭಾವಿಸಿ. ಮಕ್ಕಳು–ಮೊಮ್ಮಕ್ಕಳ ಜತೆ ಹೇಗೆ ಬೆರೆಯಿರಿ. ಬೆಳಿಗ್ಗೆ ಮಲಗಬೇಡಿ.

* ಮೂರು ವರ್ಷಗಳ ಹಿಂದೆ ಖಿನ್ನತೆಯ ಔಷಧಿ ತೆಗೆದುಕೊಳ್ಳುತ್ತಿದ್ದೆ. ಈಗ ಪುನಃ ಖಿನ್ನತೆಗೆ ಒಳಗಾಗುತ್ತಿದ್ದೇನೆ.

–ಬಸವರಾಜ್, ಬಾಗಲಕೋಟೆ

ಈಗಾಗಲೇ ಚಿಕಿತ್ಸೆ ನೀಡಿರುವ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಅವರ ಭೇಟಿ ಸಾಧ್ಯವಾಗದಿದ್ದರೆ ದೂರವಾಣಿ ಮೂಲಕವಾದರೂ ಸಲಹೆ ಕೇಳಿ. ಅದೂ ಆಗದಿದ್ದರೆ
ಸಹಾಯವಾಣಿಗಳಿಗೆ ಕರೆ ಮಾಡಿ, ನೆರವು ಪಡೆಯಿರಿ.

* ಸ್ನೇಹಿತನಿಗೆ ಕುಡಿತದ ಚಟ ಅತಿಯಾಗಿದೆ. ಸ್ವಲ್ಪ ದಿನ ತ್ಯಜಿಸಿದ್ದರು. ಆದರೆ, ಈಗ ಸಾಧ್ಯವಾಗದೆ ಕಂಗಾಲಾಗಿದ್ದಾರೆ.

– ವಿನಯ್, ಬಳ್ಳಾರಿ

ಕುಡಿತ ಬಿಡಬೇಕು ಎಂಬುದು ಅವರ ಮನಸ್ಸಿಗೆ ಬರಬೇಕು. ಕುಡಿತ ಬಿಡುವಂತೆ ನೇರವಾಗಿ ಹೇಳುವ ಬದಲಿಗೆ ಅದರ ದುಷ್ಪರಿಣಾಮ, ಬಿಟ್ಟರೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ. ಸಹಾಯವಾಣಿ ಅಥವಾ ಮನೋತಜ್ಞರ ನೆರವು ಪಡೆಯಿರಿ.

* ಪರೀಕ್ಷೆಗೆಗಳನ್ನು ಮುಂದೂಡಿರುವುದರಿಂದ ಮಕ್ಕಳು ಗೊಂದಲಕ್ಕೆ ಒಳಗಾಗಿದ್ದಾರೆ.

–ಹನುಮಂತು, ಹುಬ್ಬಳ್ಳಿ

ಮಕ್ಕಳು ಆತಂಕ ಪಡಬೇಕಾಗಿಲ್ಲ. ದಿನ ಪೂರ್ತಿ ಓದುವುದನ್ನು ಬಿಟ್ಟು, ಬೇರೆ ಚಟುವಟಿಕೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು.

‘ಜಗದ ಚಿಂತೆ ಬಿಡಿ’

* ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ. ಮನೆಯಲ್ಲಿ ಇದ್ದುಕೊಂಡು ಆರೋಗ್ಯ ಕಾಪಾಡುವ ಬಗ್ಗೆ ಯೋಚಿಸಿ

* ದೇಶದ, ವಿಶ್ವದ ವಿದ್ಯಮಾನಗಳ ಬಗ್ಗೆ ಅನಗತ್ಯ ಚಿಂತೆ ಬೇಡ. ದುಶ್ಚಟಗಳಿಂದ ದೂರವಿದ್ದು, ಸಕಾರಾತ್ಮಕ ಭಾವನೆಗಳನ್ನು ಬೆಳಸಿಕೊಳ್ಳಿ. ನಾಳೆ ಏನಾಗಲಿದೆಯೋ ಎಂಬ ಆತಂಕ ಬಿಡಿ. ಈಗಿನ ಬಗ್ಗೆ ಮಾತ್ರ ಯೋಚಿಸಿ, ಕಾರ್ಯಪ್ರವೃತ್ತರಾಗಿ.

* ಮನೆಯೊಳಗೇ ಇದ್ದರೂ ಸ್ನೇಹಿತರ, ಸಂಬಂಧಿಕರ ಜತೆ ಆನ್‌ಲೈನ್ ಮೂಲಕ ಬೆರೆಯಬಹುದು. ದೈಹಿಕವಾಗಿ ದೂರವಿದ್ದರೂ ಮಾನಸಿಕವಾಗಿ ಹತ್ತಿರವಾಗಬಹುದು. ನಿಮ್ಮವರಿಗೆ ಸಮಯಕೊಡಿ. ನೀವೂ ಖುಷಿಯಾಗಿರಿ.

* ಪತಿ–ಪತ್ನಿ ನಡುವೆ ಸಾಮರಸ್ಯ ಅತೀ ಅಗತ್ಯ. ಇಬ್ಬರೂ ಪರಸ್ಪರ ಸಮಯ ಕೊಟ್ಟು ಹೊಂದಾಣಿಕೆಯಿಂದ ಬಾಳಿರಿ.

* ಚೆನ್ನಾಗಿ ನಿದ್ದೆ ಮಾಡಿ. ಜಂಕ್ ಫುಡ್‌ ಸೇವಿಸಬೇಡಿ. ಹಿತ–ಮಿತವಾದ ಮತ್ತು ಸರಿಯಾಗಿ ಆಹಾರ ಸೇವಿಸಿ.

‘ಹಗಲು ಹೊತ್ತು ನಿದ್ರಿಸಬೇಡಿ’

ಕಳೆದ 8 ತಿಂಗಳುಗಳಿಂದ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಈಗ ಮಾತ್ರೆಗಳು ಖಾಲಿಯಾಗಿದ್ದು, ರಾತ್ರಿ ನಿದ್ದೆ ಬರುತ್ತಿಲ್ಲ ಎಂದು ಚಿಕ್ಕಮಗಳೂರಿನ ಮನೋಜ್ ಬೇಸರ ವ್ಯಕ್ತಪಡಿಸಿದರು. ಕೋರಮಂಗಲದ ತ್ಯಾಗರಾಜ್‌ ಅವರೂ ನಿದ್ರಾಹೀನತೆ ಬಗ್ಗೆ ಹೇಳಿಕೊಂಡರು.

‘ಹಿಂದಿನಿಂದಲೂ ಮಾನಸಿಕ ಸಮಸ್ಯೆ ಇದ್ದರೆ ಇಂತಹ ಸ್ಥಿತಿಯಲ್ಲಿ ಅದು ಉಲ್ಬಣಿಸುತ್ತದೆ. ನಿರ್ದಿಷ್ಟ ಸಮಯದಲ್ಲಿ ರಾತ್ರಿ ನಿದ್ದೆಗೆ ತೆರಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಹಗಲು ಹೊತ್ತು ಮಲಗಿದಲ್ಲಿ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ’ ಎಂದು ಡಾ.ವಿನಯ್ ಸಲಹೆ ನೀಡಿದರು.

ಸಹಾಯವಾಣಿಗೆ ಕರೆ ಮಾಡಿ

ನಿಮ್ಹಾನ್ಸ್ ಸಹಾಯವಾಣಿ - 080 46110007

ದುಶ್ಚಟಗಳ ನಿವಾರಣೆಗೆ – 1800112356/ 01122901701

ಆರೋಗ್ಯ ಸಹಾಯವಾಣಿ -104

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT