ಸೋಮವಾರ, ಜೂನ್ 1, 2020
27 °C
ಏ.9ರ ಶಾಬ್‌–ಇ–ಬರಾತ್‌ ಕಾರ್ಯಕ್ರಮಕ್ಕೂ ನಿರ್ಬಂಧ: ರಾಜ್ಯ ವಕ್ಫ್‌ ಮಂಡಳಿ

ಮಸೀದಿಯಲ್ಲಿ ಪ್ರಾರ್ಥನೆ: ನಿಷೇಧದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದಾಗಿ ಮಸೀದಿಗಳಲ್ಲಿ ಅಥವಾ ಖಬ್ರಸ್ತಾನ್‌
ಗಳಲ್ಲಿ ಯಾವುದೇ ಸಭೆ ಅಥವಾ ಪ್ರಾರ್ಥನೆಗೆ ಅವಕಾಶ ನೀಡಬಾರದು ಎಂದು ರಾಜ್ಯ ವಕ್ಫ್‌ ಮಂಡಳಿ ಎಚ್ಚರಿಕೆ ನೀಡಿದೆ.

ಇದೇ 9ರಂದು ನಡೆಯುವ ಶಾಬ್‌–ಇ–ಬರಾತ್‌ ಸಂದರ್ಭದಲ್ಲೂ ಮಸೀದಿ ಭೇಟಿಯನ್ನು ಮಂಡಳಿ ನಿರ್ಬಂಧಿಸಿದ್ದು, ಈ ಸಂಬಂಧ ಎಲ್ಲ
ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದೆ.

ಖಬ್ರಸ್ತಾನ್‌ಗಳು/ದರ್ಗಾಗಳಲ್ಲಿ ಧಾರ್ಮಿಕ ವಿಧಿಗಳ ಆಚರಣೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ದ್ವಾರಗಳನ್ನು ಮುಚ್ಚಬೇಕು ಎಂದು ತಾಕೀತು ಮಾಡಲಾಗಿದೆ.

ನವದೆಹಲಿಯ ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ತಬ್ಲೀಗ್ ಜಮಾತ್‌ ಧರ್ಮಸಭೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ರಾಜ್ಯ ಆರೋಗ್ಯ ಇಲಾಖೆಯ ಸಹಾಯವಾಣಿಗೆ (080–29711171) ಕರೆ ಮಾಡಬೇಕು. ಕೋವಿಡ್‌–19 ಸಂಬಂಧಿತ ಎಲ್ಲಾ ಮಾಹಿತಿಗೆ  ಸಹಾಯವಾಣಿ 104 ಅಥವಾ ಹೊಸ ಮೊಬೈಲ್ ಸಂಖ್ಯೆ 9745697456 ಸಂಪರ್ಕಿಸಬಹುದು ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ನಿಯಮ ಉಲ್ಲಂಘನೆ: ಮನೆ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಗಳು ನಿಯಮ ಉಲ್ಲಂಘಿಸಿದ ಆರೋಪ ಸಾರ್ವಜನಿಕರಿಂದ ಕೇಳಿಬಂದಿದ್ದು, ಭಾನುವಾರ ಇಂತಹ 15 ಮಂದಿಯನ್ನು ಸಂಸ್ಥೆಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಇದುವರೆಗೆ ಇಂತಹ 386 ಮಂದಿ ನಿಯಮ ಉಲ್ಲಂಘಿಸಿದ್ದು ಪತ್ತೆಯಾಗಿದೆ.

1,981 ಮಂದಿಯ ತಪಾಸಣೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ 31 ಜ್ವರ ಚಿಕಿತ್ಸಾಲಯಗಳಲ್ಲಿ ಇದುವರೆಗೆ 1,981 ಮಂದಿಗೆ ತಪಾಸಣೆ ನಡೆಸಲಾಗಿದೆ.

ಆಯುಷ್‌ ಇಲಾಖೆ ಸ್ಪಷ್ಟನೆ

ಕೋವಿಡ್‌–19 ಮಹಾಮಾರಿಯನ್ನು ಗುಣಪಡಿಸುವ ನಿರ್ದಿಷ್ಟ ಔಷಧಿ ಯಾವುದೇ ವೈದ್ಯ ಪದ್ಧತಿಯಲ್ಲೂ ಇಲ್ಲ. ಗಿಡಮೂಲಿಕೆಗಳಿಂದ ಇದಕ್ಕೆ ಔಷಧ ಕಂಡುಹಿಡಿಯಲಾಗಿದೆ ಎಂದು ಕೆಲವರು ಹೇಳಿಕೊಳ್ಳುತ್ತಿರುವುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಆಯುಷ್‌ ಇಲಾಖೆ ಸ್ಪಷ್ಟಪಡಿಸಿದೆ.

‘ಆಯುಷ್ ಪದ್ಧತಿಯಲ್ಲಿ ಹೆಚ್ಚಾಗಿ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಆಯುರ್ವೇದ, ಯೋಗ, ಸಿದ್ಧ, ಯುನಾನಿಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಹಲವಾರು ರಸಾಯನಗಳು, ಗಿಡಮೂಲಿಕೆ ಕಷಾಯಗಳಿವೆ. ಹೋಮಿಯೋಪಥಿಯಲ್ಲೂ ಶ್ವಾಸಕೋಶಗಳ ಸದೃಢ ಆರೋಗ್ಯಕ್ಕಾಗಿ ಔಷಧ ಲಭ್ಯ ಇವೆ. ಆದರೆ ಯಾವುದನ್ನೂ ಕೋವಿಡ್‌–19ಗೆ ನಿರ್ದಿಷ್ಟ ಚಿಕಿತ್ಸಾ ಕ್ರಮವೆಂದು ಕರೆಯಲಾಗದು’ ಎಂದು ಇಲಾಖೆಯ ಆಯುಕ್ತರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತಾಂಧ ಧರ್ಮಗುರುಗಳನ್ನು ಜೈಲಿಗೆ ಕಳುಹಿಸಿ: ಸಾಣೇಹಳ್ಳಿ ಶ್ರೀ

ಹೊಸದುರ್ಗ: ‘ಲಾಕ್‌ಡೌನ್‌ ಇರುವುದರಿಂದ ಆಯಾ ಧರ್ಮಗಳ ಗುರುಗಳು ಭಕ್ತರಿಗೆ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತೆ ಎಚ್ಚರಿಕೆ ನೀಡಬೇಕು. ಆದರೆ ಕೆಲವು ಧರ್ಮಗುರುಗಳು ಭಕ್ತ ಸಮೂಹ ಸೇರಿಸಿಕೊಂಡು ಪ್ರಾರ್ಥನೆ ಮಾಡುತ್ತಿದ್ದಾರೆ. ಇವರೆಂಥ ಧರ್ಮ ಗುರುಗಳು? ಇವರೂ ಮತಾಂಧರೇ. ಅಂಥವರ ಮೇಲೆ ಸರ್ಕಾರ ಶಿಸ್ತುಕ್ರಮ ಕೈಗೊಂಡು ಜೈಲಿಗೆ ಕಳುಹಿಸಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

‘ದೇಶದಲ್ಲಿ ಎಲ್ಲ ಧರ್ಮೀಯರೂ ವಾಸಿಸುತ್ತಿದ್ದೇವೆ. ಯಾವುದೇ ಜಾತಿ, ಧರ್ಮ, ಭಾಷೆ, ಪಕ್ಷ, ಪಂಗಡ ಎನ್ನದೆ ಪ್ರತಿಯೊಬ್ಬರೂ ಮನೆಯಲ್ಲಿಯೇ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಬೇಕು. ನಾವೂ ಉಳಿಯಬೇಕು, ನಮ್ಮವರನ್ನೂ ಉಳಿಸಬೇಕು. ಸ್ವಯಂ ದಿಗ್ಬಂಧನ ಹಾಕಿಕೊಂಡರೆ ನಾವೂ, ನಮ್ಮ ಜನರೂ, ನಮ್ಮ ನಾಡೂ ಕ್ಷೇಮವಾಗಿರುತ್ತದೆ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು