ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕೃಷಿ ವಿಶ್ವವಿದ್ಯಾಲಯ: ನಿಖರ ಕೃಷಿಗೆ ಐಐಟಿ ತಂತ್ರಜ್ಞಾನ

ಐಐಟಿ ಧಾರವಾಡ, ಸಿಎಸ್‌ಐಆರ್ ಜತೆಗೂಡಿ ಅಧ್ಯಯನ
Last Updated 31 ಡಿಸೆಂಬರ್ 2019, 20:43 IST
ಅಕ್ಷರ ಗಾತ್ರ

ಧಾರವಾಡ: ಕೃಷಿಯಲ್ಲಿನ ಅನಗತ್ಯ ಖರ್ಚು ತಗ್ಗಿಸಿ, ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಸಣ್ಣ ಹಿಡುವಳಿದಾರರರಿಗೂ ನೆರವಾಗಲು ನಿಖರ ಕೃಷಿ ಸಂಶೋಧನೆಯನ್ನು ಕೃಷಿ ವಿಶ್ವವಿದ್ಯಾಲಯ ಆರಂಭಿಸಿದೆ.

ಇದಕ್ಕೆ ಧಾರವಾಡ ಐಐಟಿ, ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಮಿತಿ (ಸಿಎಸ್‌ಐಆರ್‌)ಮತ್ತು ರಾಷ್ಟ್ರೀಯ ವೈಮಾಂತರಿಕ್ಷಪ್ರಯೋಗಾಲಯ (ಎನ್‌ಎಎಲ್‌) ಕೈಜೋಡಿಸಿವೆ.

ವಿದೇಶಗಳಲ್ಲಿ ನಿಖರ ಕೃಷಿಗೆ ಉಪಗ್ರಹ, ದತ್ತಾಂಶ ಆಧಾರಿತ ದುಬಾರಿ ಸೆನ್ಸರ್‌ಗಳನ್ನು ಬಳಸಲಾಗುತ್ತಿದೆ. ಇದೇ ತಂತ್ರಜ್ಞಾನವನ್ನು ಭಾರತದಲ್ಲಿನ ಸಣ್ಣ ಹಿಡುವಳಿದಾರರೂ ಬಳಸುವಂತೆ ಅಗ್ಗದ ದರದಲ್ಲಿನ ಸೆನ್ಸರ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಧಾರವಾಡ ಕೃಷಿ ವಿಶ್ವವಿದ್ಯಾಲಯವು ಐಐಟಿ ನೆರವು ಕೋರಿತ್ತು. ಈ ಉದ್ದೇಶದಿಂದ ಎರಡೂ ಸಂಸ್ಥೆಗಳ ನಡುವೆ ಒಪ್ಪಂದವೂ ಆಗಿದೆ.

ಕ್ಷೇತ್ರದಲ್ಲಿನ ಮಣ್ಣು, ಬೆಳೆ ಮತ್ತು ಅದರ ಬೆಳವಣಿಗೆಯ ಗುಣಲಕ್ಷಣಗಳನ್ನು ಆಧರಿಸಿ ಸೂತ್ರ ಸಿದ್ಧಪಡಿಸಲು ಸಿಎಸ್‌ಐಆರ್‌ನ ಫೋರ್ಥ್ ಪ್ಯಾರಾಡೈಮ್‌ ಸಂಸ್ಥೆ ಅಧ್ಯಯನ ನಡೆಸುತ್ತಿದೆ.ಸಂಶೋಧನೆಗಾಗಿ ಮೀಸಲಿಟ್ಟಿರುವ 40 ಎಕರೆ ಪ್ರದೇಶದಲ್ಲಿ ಬೆಳೆದಿರುವ ಕಬ್ಬು, ಜೋಳ, ಹತ್ತಿ ಬೆಳೆಗಳ ಗುಣಲಕ್ಷಣಗಳನ್ನು ಅರಿಯಲು ಎನ್ಎಎಲ್‌ ತಂತ್ರಜ್ಞರು ಡ್ರೋನ್ ಮೂಲಕ ನಿಗಾವಹಿಸಿದ್ದಾರೆ.

ಕೃಷಿ ಭೂಮಿಯೊಳಗೆ ನಿಗದಿತ ಅಳತೆಯ ಚೌಕಗಳಂತೆ ಗ್ರಿಡ್‌ಗಳನ್ನಾಗಿ ಗುರುತಿಸಲಾಗಿದೆ. ಸುಮಾರು 40 ಮೀ ಎತ್ತರದಲ್ಲಿ ಹಾರುವ ಡ್ರೋನ್‌ ಆರುಅತ್ಯಾಧುನಿಕ ಕ್ಯಾಮೆರಾಗಳಿಂದ ಬೆಳೆಯ ಎಲೆಗಳ ಬಣ್ಣದಲ್ಲಿನ ಸಣ್ಣ ಬದಲಾವಣೆಯನ್ನೂ ಗ್ರಹಿಸಿ ಮಾಹಿತಿ ನೀಡಲಿದೆ.

ಗಿಡಗಳಲ್ಲಿ ಬದಲಾಗುವ ಬಣ್ಣಗಳಿಗೆ ಕಾರಣಗಳೇನು, ಕೀಟ ಬಾಧೆಯೇ, ಪೋಷಕಾಂಶದ ಕೊರತೆಯೇ ಅಥವಾ ಬೇರೆ ಯಾವುದೇ ಸಮಸ್ಯೆಗಳಿಂದ ಬದಲಾವಣೆ ಆಗುತ್ತಿದೆಯೇ ಎಂಬುದನ್ನು ಕೃಷಿ ವಿಜ್ಞಾನಿಗಳು ಮಾಹಿತಿ ನೀಡುತ್ತಾರೆ.ಈ ಮಾಹಿತಿಯನ್ನು ಆಧರಿಸಿ ಸಿಎಸ್‌ಐಆರ್‌ ತಂಡ ಸೂತ್ರಗಳನ್ನು ಸಿದ್ಧಪಡಿಸುತ್ತಿದೆ. ಐಐಟಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ಸೆನ್ಸರ್ ಸಿದ್ಧಪಡಿಸುವ ಯೋಜನೆ ರೂಪಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಬಿ.ಚೆಟ್ಟಿ, ‘ಒಂದೆರೆಡು ಗಿಡಗಳಲ್ಲಿ ರೋಗ ಕಾಣಿಸಿಕೊಂಡರೆ ಅಥವಾ ಪೋಷಕಾಂಶ ಕೊರತೆ ಎದುರಾದರೆ ಆರೋಗ್ಯವಂತ ಸಸಿಗಳಿಗೂ ಕೀಟನಾಶಕ, ರಸಗೊಬ್ಬರ ನೀಡುವ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಇದು ರೈತನಿಗೆ ಹೆಚ್ಚುವರಿ ಹೊರೆಯ ಜತೆಗೆ, ಬಳಕೆದಾರನ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಜತೆಗೆ ಮಣ್ಣಿನ ಪೋಷಕಾಂಶವೂ ನಾಶವಾಗುವ ಸಾಧ್ಯತೆ ಹೆಚ್ಚು. ಸಮಸ್ಯೆಯಯನ್ನು ತಕ್ಷಣ ಗ್ರಹಿಸಿ, ಆ ಗಿಡಗಳಿಗೆ ಮಾತ್ರ ಔಷಧ, ಗೊಬ್ಬರ ನೀಡುವ ನಿಖರ ಕೃಷಿ ಪ್ರತಿಯೊಬ್ಬರಿಗೂ ಲಭ್ಯವಾಗಬೇಕುಎಂಬ ದೃಷ್ಟಿಯಿಂದ ಈ ಸಂಶೋಧನೆ ನಡೆಸಲಾಗುತ್ತಿದೆ’ ಎಂದರು.

*
ಐದು ವರ್ಷಗಳ ಒಪ್ಪಂದ ಇದಾಗಿದ್ದು,ಡ್ರೋನ್ ಮೂಲಕ ಕ್ಷೇತ್ರದ ಮೇಲೆ ವಿವಿಧ ಬೆಳಕಿನ ಹಂತಗಳಲ್ಲಿ ಚಿತ್ರಗಳನ್ನು ತೆಗೆದು ವಿಶ್ಲೇಷಿಸಲಾಗುತ್ತಿದೆ.
-ಡಾ. ಎಂ.ಬಿ.ಚೆಟ್ಟಿ, ಕುಲಪತಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT