ಶನಿವಾರ, ಜುಲೈ 31, 2021
27 °C

ಶಾಲೆಗಳನ್ನು ತೆರೆಯಲು ತರಾತುರಿ ಇಲ್ಲ, ನಿರ್ಧಾರ ಕೈಗೊಂಡಿಲ್ಲ: ಸುರೇಶ್‌ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಬೆಂಗಳೂರು: ದೇಶದಾದ್ಯಂತ ಕೊರೊನಾ ವೈರಸ್‌ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲೂ ಪ್ರಕರಣಗಳ ಓಟ ಮುಂದುವರಿದಿದೆ. ಈ ನಡುವೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಶಾಲೆಗಳನ್ನು ಪುನರಾರಂಭ ಮಾಡುವ ಕುರಿತು ಚರ್ಚೆ ಕಾವೇರಿದೆ. ಗುರುವಾರ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, 'ಶಾಲೆಗಳನ್ನು ತೆರೆಯಲು ತರಾತುರಿ ಇಲ್ಲ' ಎಂದಿದ್ದಾರೆ.

'ಶಾಲೆಗಳು ಎಂದಿನಿಂದ ಪ್ರಾರಂಭಿಸಬೇಕು ಹಾಗೂ ಹೇಗೆ ನಡೆಸಬೇಕು ಎಂಬಂತಹ ಚರ್ಚೆಗಳು ನಡೆಯುತ್ತಿವೆ. ಶಿಕ್ಷಣ ಇಲಾಖೆ ಯಾವುದೇ ಶಾಲೆ, ತರಗತಿಗಳನ್ನು ತರಾತುರಿಯಲ್ಲಿ ತೆರೆಯಲು ನಿರ್ಧಾರ ಮಾಡಿಲ್ಲ. ತರಾತುರಿಯಲ್ಲಿ ಮಾಡುವುದೂ ಇಲ್ಲ.

ಜೂನ್ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗುತ್ತಿದ್ದು, ಜುಲೈ 4ಕ್ಕೆ ಪೂರ್ಣಗೊಳ್ಳುತ್ತೆ.' ಎಂದು ಹೇಳಿದ್ದಾರೆ. 

ಈ ಸಂಬಂಧ ಅವರು ಫೇಸ್‌ಬುಕ್‌ ಪುಟದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಯಾವಾಗ ತರಗತಿಗಳನ್ನು ಆರಂಭಿಸಬೇಕು ಎಂದು ನನ್ನ ಫೇಸ್‌ಬುಕ್‌ ಪುಟದಲ್ಲಿ ಪ್ರಶ್ನೆ ಕೇಳಿದ್ದೆ.  ಬಹುತೇಕರು ಸದ್ಯಕ್ಕೆ ಬೇಡ, ನಮಗೆ ಆತಂಕ ಇದೆ ಎಂದಿದ್ದಾರೆ. ಇನ್ನೂ ಕೆಲವರು ಇತರೆ ಚಟುವಟಿಕೆಗಳಂತೆ ತರಗತಿಗಳೂ ನಡೆಯಲಿ ಆರಂಭಿಸಿ ಎಂದು ಪ್ರತಿಕ್ರಿಯಿಸಿದ್ದಾರೆ.

‘ಎಲ್‌ಕೆಜಿ, ಯುಕೆಜಿ ಸೇರಿದಂತೆ ಪ್ರಾಥಮಿಕ ತರಗತಿಗಳನ್ನು ಆರಂಭಿಸಬಾರದು ಎಂದು ಹೆಚ್ಚಿನ ಸಂಖ್ಯೆಯಲ್ಲಿ ಆಗ್ರಹಿಸಿದ್ದಾರೆ.

ವಿಧಾನಸೌಧಕ್ಕೆ ಹೊರಟಿದ್ದೆ. ಪುಟ್ಟ ಹುಡುಗಿಯೊಬ್ಬಳು ನಿಂತಳು. ಹೆಸರು ಮಹನ್ಯಾ. "ನಿಮ್ಮನ್ನು ಟಿವಿ ಯಲ್ಲಿ ನೋಡಿದ್ದೇನೆ" ಎಂದಳು.

"ಸ್ಕೂಲ್ ಯಾವಾಗ ಪ್ರಾರಂಭ ಮಾಡುತ್ತೀರಾ" ಎಂದು ಕೇಳಿದಳು.

" ಯಾವಾಗ ಶುರು ಮಾಡಬೇಕು?" ಎಂದು ನಾನು ಪ್ರಶ್ನಿಸಿದೆ. "ಕೊರೋನಾ ಹೋದ ಮೇಲೆ" ಎಂದಳು First Std ಓದುತ್ತಿರುವ ಈ ಚಿನ್ನಾರಿ.

"ತುಂಬಾ ದಿನ ಕೊರೋನಾ ಹೋಗದಿದ್ದರೆ" ಎಂದು ನಾನು ಪ್ರಶ್ನಿಸಿದ್ದಕ್ಕೆ "ಇಲ್ಲ. ಕೊರೋನಾ ಹೋದ ಮೇಲೆಯೇ ಓಪನ್ ಮಾಡಿ" ಎಂದಳು.

"ಶಾಲೆ ಓಪನ್ ಮಾಡದಿದ್ದರೆ ನೀನು ಏನು ಮಾಡ್ತೀ" ಎಂಬ ನನ್ನ ಪ್ರಶ್ನೆಗೆ "ಮನೇಲೇ ಇರುತ್ತೇನೆ. ಟಿವಿ ನೋಡ್ತೀನಿ. ಆಟ ಆಡುತ್ತೇನೆ" ಎಂದು ಬೀಗುತ್ತಾ ನುಡಿದಳು.' ಎಂದು ಶಾಲೆ ತೆರೆಯುವ ಬಗ್ಗೆ ಮಗುವಿನ ಪ್ರತಿಕ್ರಿಯೆಯನ್ನು ಸುರೇಶ್ ಕುಮಾರ್‌ ಬರೆದುಕೊಂಡಿದ್ದಾರೆ.

ಮೇ 30ರಂದು ಕೇಂದ್ರ ಸರ್ಕಾರದಿಂದ ನಿರ್ದೇಶನ ಬಂದಿದ್ದು, ಶಾಲೆಗಳನ್ನು ಆರಂಭಿಸಲು ರಾಜ್ಯದ ಪೋಷಕರ, ಶಿಕ್ಷಣ ವ್ಯವಸ್ಥೆಯಲ್ಲಿರುವವರು ಹಾಗೂ ಆಸಕ್ತರ ಅಭಿಪ್ರಾಯ ಕೇಳಬೇಕು ಎಂದು ತಿಳಿಸಲಾಗಿದೆ. ಜುಲೈ ಒಳಗೆ ಅಭಿಪ್ರಾಯ ಸಂಗ್ರಿಹಿಸಿ ಕಳುಹಿಸಬೇಕಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಎಲ್ಲ ಶಾಲೆಗಳಿಗೆ ಜೂನ್‌ 1ರಂದು ಸುತ್ತೋಲೆ ಕಳುಹಿಸಲಾಗಿದೆ.

ಅದರ ಉದ್ದೇಶ; ಎಲ್ಲ ಶಾಲೆಗಳಲ್ಲಿ ‍ಪೋಷಕರ ಸಭೆ ನಡೆಯಬೇಕು. ಸರ್ಕಾರಿ ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರನ್ನೂ ಒಳಗೊಂಡತೆ ರಾಜ್ಯ ಎಲ್ಲ ಶಾಲೆಗಳಲ್ಲಿ ಸಭೆ ನಡೆಸಬೇಕು. ಜೂನ್‌ 10, 11 ಮತ್ತು 12ರಂದು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಬೇಕೆಂದು ನಿಗದಿ ಪಡಿಸಲಾಗಿದೆ.

ಶಾಲೆಗಳನ್ನು ಯಾವಗಿನಿಂದ ಆರಂಭಿಸಬೇಕು? ಅದರ ದಿನಾಂಕ ನಿಗದಿ ಪಡಿಸಿಕೊಳ್ಳಲು ಪ್ರಸ್ತಾವನೆ ರಚಿಸಲಾಗಿತ್ತು. ಆದರೆ, ಅವು ನಿರ್ಧಾರಿತ ದಿನಾಂಕಗಳಲ್ಲ.

ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಜೂನ್ 15ಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅದನ್ನು ಆಧರಿಸಿ ಕೇಂದ್ರ ಸರ್ಕಾರ ನೀಡುವ ನಿರ್ದೇಶನದ ಅನ್ವಯ ಶಾಲೆಗಳನ್ನು ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುರೇಶಕುಮಾರ್ ತಿಳಿಸಿದ್ದಾರೆ.

ಕಲಿಕೆಗಾಗಿಯೇ ಪ್ರತ್ಯೇಕ ಚಾನೆಲ್‌:

ಶಿಕ್ಷಣ ಇಲಾಖೆಗಾಗಿಯೇ ಪ್ರತ್ಯೇಕ ಚಾನೆಲ್‌ ತೆಗೆದುಕೊಳ್ಳುವ ಪ್ರಯತ್ನ ನಡೆದಿದೆ. ಚಂದನ ವಾಹಿನಿಯಲ್ಲಿ ಎಸ್‌ಎಸ್‌ಎಲ್‌ಸಿ ತರಗಳಿ ಪುನರ್‌ಮನನ ಪಾಠ ಯಶಸ್ವಿಯಾಗಿದೆ. ಮತ್ತೆ ಹತ್ತು ದಿನ ನಡೆಸಲಾಗುತ್ತಿದೆ. ಪ್ರತ್ಯೇಕ ಚಾನೆಲ್‌ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವುದು ಹಾಗೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯೋಚನೆ ಇರುವುದಾಗಿ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಪರಿಹಾರ ಕಂಡುಕೊಳ್ಳಬೇಕಿರುವ ಪ್ರಶ್ನೆಗಳು:

* ಅಂತರ ಕಾಯ್ದುಕೊಂಡು ಹೇಗೆ ತರಗತಿಗಳನ್ನು ನಡೆಸುವುದು. ತರಗತಿ ಒಳಗೆ ಮತ್ತು ಹೊರಗೆ ಪರಿಸ್ಥಿತಿ ನಿಯಂತ್ರಿಸುವುದು ಹೇಗೆ?
* ಶಾಲೆ ಆರಂಭಿಸುವುದು ನಿಧಾನವಾರದರೆ, ಮಕ್ಕಳಿಗೆ ಪಾಠ ಮಾಡುವುದು ಹೇಗೆ? ಕಲಿಕೆ ನಿರಂತರವಾಗಿರುವಂತೆ ಮಾಡುವುದು ಹೇಗೆ?

ಪ್ರಸ್ತುತ ಪಾಲಕರ ಅಭಿಪ್ರಾಯ:

* ಕೊರೊನಾ ಹೋಗುವವರೆಗೂ ಶಾಲೆ ಆರಂಭಿಸುವುದು ಬೇಡ.
* ಕೊರೊನಾ ಹೆಚ್ಚು ಕಾಲ ಉಳಿಯುವಂತಿದೆ, ನಾವು ಅದರೊಂದಿಗೆ ಮುಂದುವರಿಯುವುದನ್ನು ಕಲಿತುಕೊಳ್ಳಬೇಕು. ಶಾಲೆ ಆರಂಭವಾಗಲಿ.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಪ್ರಕ್ರಿಯೆ ಶೀಘ್ರವೇ ಆರಂಭಿಸಬೇಕಿದೆ. ಬಡವರೂ ಸಹ ಆಕರ್ಷಣೆ ಅಥವಾ ಇನ್ನಾವುದೋ ಕಾರಣಗಳಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಅವರ ಗಳಿಕೆಯ ಶೇ 40ರಷ್ಟು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದಾರೆ. ಯೋಗ್ಯ ಶಿಕ್ಷಣ ನೀಡುತ್ತೇವೆ ಎಂಬ ಭರವಸೆಯೊಂದಿಗೆ ಅವರನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತ ಮಾಡಬೇಕು. ಸರ್ಕಾರಿ ಶಾಲೆಗಳಿಗೆ ದಾಖಲಾತಿ ಆರಂಭಿಸಬೇಕು ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು