ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ನಿಂತ ಮೇಲೆ ‘ಕಾಯಕ’ದ ನೆರವು

ಮುರಿದ ಮನೆಗೆ ಮರುಜೀವ ನೀಡಿದ 80 ಸ್ವಯಂ ಸೇವಕರು
Last Updated 18 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಶಿರಸಿ: ಆರ್ಭಟಿಸಿದ್ದ ಗಂಗಾವಳಿ ಈಗ ಶಾಂತವಾಗಿ ತನ್ನ ಹರಿವನ್ನು ಮುಂದುವರಿಸಿದ್ದಾಳೆ. ಆದರೆ, ಆಕೆಯ ಆರ್ಭಟಕ್ಕೆ ನಲುಗಿದ ನದಿ ತಟದ ನಿವಾಸಿಗಳು ಇನ್ನೂ ಆತಂಕದ ಕರಿನೆರಳಿನಿಂದ ಹೊರಬಂದಿಲ್ಲ. ಅವರಲ್ಲಿ ಹೊಸ ಭರವಸೆ ಚಿಗುರಿಸುವ ಕೆಲಸಕ್ಕೆಹಲವರು ಕೈಜೋಡಿಸಿದ್ದಾರೆ.

ಅಂಕೋಲಾ ತಾಲ್ಲೂಕಿನ ಹೆಗ್ಗಾರ ಗ್ರಾಮವು ಗಂಗಾವಳಿ ನದಿಯ ಪ್ರವಾಹದಿಂದ ಅಕ್ಷರಶಃ ನಲುಗಿದೆ. ಇಲ್ಲಿನ 11 ಮನೆಗಳು ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಅರ್ಧ ಮುಳುಗಿದ್ದ ಮನೆಗಳಲ್ಲಿ ನೀರಿಳಿದ ಮೇಲೆ, ಒಳಗಿದ್ದ ಸಾಮಗ್ರಿಗಳೆಲ್ಲ ದುರ್ನಾತ ಬೀರುತ್ತಿವೆ. ಕುಸಿದ ಮನೆಗಳನ್ನು ಕಟ್ಟುವ, ಒಳಕೋಣೆ ಸೇರಿದ್ದ ಹೂಳು ಹೊರಹಾಕುವ ಕೆಲಸ ನಡೆಯುತ್ತಿದೆ.

ಶಿರಸಿ ತಾಲ್ಲೂಕಿನ ಮೇಲಿನ ಓಣಿಕೇರಿ ಮತ್ತು ಸಾಲ್ಕಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 80 ಸ್ವಯಂ ಸೇವಕರು ಭಾನುವಾರ ಹೆಗ್ಗಾರ, ಕೋನಾಳ ಭಾಗಕ್ಕೆ ಬಂದು, ಅಲ್ಲಿನ ಮನೆ, ಕೊಟ್ಟಿಗೆ ಕಟ್ಟುವ ಕಾಯಕಕ್ಕೆ ನೆರವಾದ ದೃಶ್ಯ ‘ಪ್ರಜಾವಾಣಿ’ ಭೇಟಿ ನೀಡಿದಾಗ ಕಂಡುಬಂತು. ‘ನೆರೆ ಸಂತ್ರಸ್ತರಿಗೆ ಧವಸ–ಧಾನ್ಯ, ಸಾಮಗ್ರಿಗಳನ್ನು ಅನೇಕರು ತಂದುಕೊಡಬಹುದು. ಆದರೆ, ಅವರಿಗೆ ಈಗ ಹೆಚ್ಚು ಅಗತ್ಯವಿರುವುದು ಮಾನವಶಕ್ತಿ. ಇದನ್ನು ಮನಗಂಡು, ಶ್ರಮದಾನದ ನೆರವು ಒದಗಿಸಲು ತಟ್ಟೀಸರ ಸೇವಾ ಸಹಕಾರಿ ಸಂಘ ಹಾಗೂ ಓಣಿಕೇರಿ ಪಂಚಾಯ್ತಿ ನಿರ್ಧರಿಸಿತು’ ಎನ್ನುತ್ತಾರೆ ಪಂಚಾಯ್ತಿ ಸದಸ್ಯ ಜಿ.ವಿ.ಹೆಗಡೆ.

‘12 ವಾಹನಗಳಲ್ಲಿ ಬಂದ ನಾವು ಗುದ್ದಲಿ, ಹಾರೆ, ಪಿಕಾಸು, ಕತ್ತಿ, ಹಗ್ಗ, ಚಾವಣಿಗೆ ಜೋಡಿಸುವ ಕಬ್ಬಿಣದ ಮೊಳೆ ಎಲ್ಲವನ್ನೂ ತಂದಿದ್ದೆವು. ಕೃಷಿಕರು, ಬಡಿಗರು, ಕಾರ್ಮಿಕರು ಎಲ್ಲರನ್ನು ಒಳಗೊಂಡ ನಮ್ಮ ತಂಡದಲ್ಲಿ 20ರಿಂದ 65 ವರ್ಷ ವಯೋಮಾನದವರು ಇದ್ದರು. ಹೀಗಾಗಿ, ಕುಸಿದ ಮನೆ, ಕೊಟ್ಟಿಗೆಯ ಚಾವಣಿ ದುರಸ್ತಿ ಮಾಡಲು ಅನುಕೂಲವಾಯಿತು’ ಎಂದು ಸೊಸೈಟಿಯ ಕಾರ್ಯದರ್ಶಿ ಜಿ.ವಿ.ಭಟ್ಟ ಪ್ರತಿಕ್ರಿಯಿಸಿದರು.

*

'ನಾವು ಇಂತಹುದೇ ನಿರ್ದಿಷ್ಟ ಕೆಲಸ ಮಾಡುವ ಯೋಚನೆಯಲ್ಲಿ ಬಂದಿಲ್ಲ. ಊರವರಿಗೆ ಅಗತ್ಯವಿರುವ, ಅವರು ಹೇಳಿದ ಕೆಲಸವನ್ನು ಮಾಡಿ, ಅವರ ಹೊಸ ಬದುಕಿಗೆ ನೆರವಾಗುವುದು ನಮ್ಮ ಉದ್ದೇಶ'

-ವೆಂಕಟರಮಣ ಹೆಗಡೆ, ಸ್ವಯಂ ಸೇವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT