ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಸೂರು ಒದಗಿಸಲು ಒತ್ತಾಯ: ಹೋರಾಟಕ್ಕೆ ಸ್ಪಂದಿಸದಿದ್ದರೆ ಕೊಡಗು ಬಂದ್‌

ಸಿದ್ದಾಪುರದಲ್ಲಿ ನಿಲ್ಲದ ಆಹೋರಾತ್ರಿ ಹೋರಾಟ; ಉಗ್ರ ಹೋರಾಟದ ಎಚ್ಚರಿಕೆ
Last Updated 17 ಫೆಬ್ರುವರಿ 2020, 14:20 IST
ಅಕ್ಷರ ಗಾತ್ರ

ಸಿದ್ದಾಪುರ: ಶಾಶ್ವತ ಸೂರು ಒದಗಿಸಲು ಒತ್ತಾಯಿಸಿ ಪ್ರವಾಹ ಸಂತ್ರಸ್ತರು ನಡೆಸುತ್ತಿರುವ ಅಹೋರಾತ್ರಿ 8 ನೇ ದಿನ ಪೂರೈಸಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ.

ಫೆ.10 ರಿಂದ ಆರಂಭವಾದ ಅಹೋರಾತ್ರಿ ಹೋರಾಟ ಸೋಮವಾರವೂ ಮುಂದುವರಿದಿದ್ದು, ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಹೋರಾಟದಲ್ಲಿ ಪಾಲ್ಗೊಂಡಿವೆ. ಕೊಡಗು ಜಿಲ್ಲಾ ಎ.ಐ.ಟಿ.ಯು.ಸಿ ಜಿಲ್ಲಾ ಅಧ್ಯಕ್ಷ ಸೋಮಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳ ತಂಡ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ಈ ಸಂದರ್ಭ ಮಾತನಾಡಿದ ಸೋಮಪ್ಪ, ಸಂತ್ರಸ್ತರ ಸಮಸ್ಯೆಗೆ ಸರಕಾರ ಮತ್ತು ಜಿಲ್ಲಾಡಳಿತ ಸ್ಪಂದಿಸದೇ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ. ಹೋರಾಟದ ಮೂಲಕ ನ್ಯಾಯವನ್ನು ಪಡೆಯಬೇಕು. ಶಾಂತಿಯುತ ಅಹೋರಾತ್ರಿ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂಧಿಸದಿದ್ದಲ್ಲಿ ಕೊಡಗು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರಿ ಒತ್ತುವರಿ ಭೂಮಿ ಇದ್ದರೂ ಒತ್ತುವರಿ ತೆರವುಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಲವೇ ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಸಂತ್ರಸ್ತರು ಏನು ಮಾಡಬೇಕೆಂಬುದನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಸಂತ್ರಸ್ತರು ಮಾತನಾಡಿ, ನ್ಯಾಯಕ್ಕಾಗಿ ಹೋರಾಟ ಕೈಗೊಂಡಿದ್ದು, ನ್ಯಾಯ ದೊರಕುವವರೆಗೂ ಹೋರಾಟ ಕೈಬಿಡುವುದಿಲ್ಲ. ಮನೆ ಇಲ್ಲದೇ ಪ್ರತಿದಿನ ಸಂಕಷ್ಟದಲ್ಲಿ ದಿನ ದೂಡುತ್ತಿರುವ ತಮಗೆ ಶಾಶ್ವತ ಸೂರು ಒದಗಿಸಬೇಕು ಎಂದು ಅಳಲನ್ನು ತೋಡಿಕೊಂಡರು. 8ನೇ ದಿನವೂ ಹೋರಾಟ ಮುಂದುವರೆಸಿದ್ದು, ಸ್ಥಳದಲ್ಲೇ ಅಡುಗೆ ತಯಾರಿಸಿ, ಊಟ ಮಾಡುತ್ತಿದ್ದಾರೆ.

8 ನೇ ದಿನದ ಹೋರಾಟದಲ್ಲಿ ಸಿ.ಪಿ.ಐ.ಎಂ ಗ್ರಾಮಸಮಿತಿ ಕಾರ್ಯದರ್ಶಿ ಎನ್.ಡಿ ಕುಟ್ಟಪ್ಪ, ಸಿ.ಐ.ಟಿ.ಯು ಮುಖಂಡ ರಮೇಶ್, ಆಟೋ ಚಾಲಕರ ಸಂಘದ ಸಲೀಂ, ಸಿದ್ದಾಪುರ ಗ್ರಾ.ಪಂ ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಪೂವಮ್ಮ, ದೇವಜಾನು, ಪ್ರೇಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕೇಂದ್ರ ಸಮಿತಿ ಭೇಟಿ: ದಿಡ್ಡಳ್ಳಿ ಆದಿವಾಸಿಗಳ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೇಂದ್ರ ಸಮಿತಿ ಪ್ರಮುಖರು ಫೆ.18ರಂದು ಸಂತ್ರಸ್ತರ ಅಹೋರಾತ್ರಿ ಹೋರಾಟದಲ್ಲಿ ಪಾಲ್ಗೊಂಡರು. ಕೇಂದ್ರ ಸಮಿತಿಯ ಪ್ರಮುಖರಾದ ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಕಂದೆಗಾಲ ಶ್ರೀನಿವಾಸ್, ನೇಮಿಚಂದ್, ಪದ್ಮ, ಮಲ್ಲಿಗೆ ಸೇರಿದಂತೆ ಇನ್ನಿತರರು ಸಂತ್ರಸ್ತರನ್ನು ಭೇಟಿ ಮಾಡಲಿದ್ದು, ಶಾಶ್ವತ ಸೂರಿನ ಬಗೆಗೆ ಚರ್ಚೆ ನಡೆಸಲಿದ್ದಾರೆ ಎಂದು ಹೋರಾಟ ಸಮಿತಿಯ ಪ್ರಮುಖರಾದ ಕೃಷ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT