ಬುಧವಾರ, ಏಪ್ರಿಲ್ 1, 2020
19 °C

ಕಪ್ಪು ಪಟ್ಟಿ ಧರಿಸಿಯೇ ಪರೀಕ್ಷಾ ಕಾರ್ಯ ನಡೆಸಲಿದ್ದಾರೆ ಉಪನ್ಯಾಸಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ವಿಳಂಬ ಧೋರಣೆ ತಳೆದಿದ್ದು, ಬುಧವಾರದಿಂದ ಆರಂಭವಾಗುವ ದ್ವಿತೀಯ ಪಿಯು ಪರೀಕ್ಷಾ ಕಾರ್ಯವನ್ನು ಕಪ್ಪು ಪಟ್ಟಿ ಧರಿಸಿಯೇ ನಡೆಸುವುದಾಗಿ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹೇಳಿದೆ.

ಸೋಮವಾರ ಇಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್‌ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿಉಪನ್ಯಾಸಕರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಬೇಡಿಕೆಗಳ ಈಡೇರಿಕೆ ಕುರಿತು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರೂ ವಿಳಂಬ ಧೋರಣೆಗೆ ವಿರೋಧವಿದೆ ಎಂದು ಸಂಘದ ಅಧ್ಯಕ್ಷ ಎ.ಎಚ್‌.ನಿಂಗೇಗೌಡ ತಿಳಿಸಿದ್ದಾರೆ.

ಇನ್ನೊಂದು ಬುಕ್‌ಲೆಟ್‌ ಲಭ್ಯ: ಪರೀಕ್ಷೆಯಲ್ಲಿ 40 ಪುಟಗಳ ಒಂದು ಬುಕ್‌ಲೆಟ್‌ ಕೊನೆಗೊಂಡು ಇನ್ನೊಂದು ಬುಕ್‌ಲೆಟ್‌ ಬೇಕು ಎಂದಾದರೆ ಅದನ್ನು ಒದಗಿಸಲಾಗುವುದು. ಬಿಡಿ ಹಾಳೆಗಳ ಬದಲು ಇನ್ನೊಂದು ಬುಕ್‌ಲೆಟ್‌ ಅನ್ನೇ ನೀಡಲಾಗುವುದು. ಅದರಲ್ಲಿ ಒಂದು ಸಾಲು ಉತ್ತರ ಬರೆದರೂ, ವ್ಯರ್ಥವಾಗುವ ಇತರ ಪುಟಗಳನ್ನು ಗಣನೆಗೆ ತೆಗೆದುಕೊಳ್ಳದೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಪರೀಕ್ಷಾ ಕಾರ್ಯಗಳಲ್ಲಿ ತೊಡಗಿರುವವರಿಗೆ ತಿಳಿಸಲಾಗಿದೆ.

ಇತಿಹಾಸ ವಿಷಯದಲ್ಲಿ ಭೂಪಟಕ್ಕೆ ಉತ್ತರ ಪತ್ರಿಕೆಯ ಸೀರಿಯಲ್‌ ನಂಬರ್ ಅನ್ನೇ ನೀಡಲು ಸಹ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಯಾದ ಕಾಲೇಜುಗಳ ಉಪನ್ಯಾಸಕರು ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುವಂತಿಲ್ಲ.

1,100 ವಿದ್ಯಾರ್ಥಿಗಳಿಗೆ ಶೌಚಾಲಯ ಇಲ್ಲ!

ಬೆಂಗಳೂರು: ಬುಧವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದಾರೆ. ಆದರೆ ಕೆಲವೊಂದು ಕಡೆ ಪರೀಕ್ಷಾ ಕೇಂದ್ರಗಳಲ್ಲಿ ಶೌಚಾಲಯವೇ ಇಲ್ಲ ಎಂದು ಪೋಷಕರಿಂದ ದೂರುಗಳು ಬಂದಿವೆ.

ಕೊಪ್ಪಳ ನಗರದ ಅಶೋಕ ವೃತ್ತದ ಬಳಿ ಇರುವ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರವಾಗಿದ್ದು, 9 ಕಾಲೇಜುಗಳ 1,100ರಷ್ಟು ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಆದರೆ ಇವರಿಗೆ ಶೌಚಾಲಯವೇ ಇಲ್ಲ!

ಈ ಕಾಲೇಜು ಕಟ್ಟಡವನ್ನು 1939ರಲ್ಲಿ ನಿರ್ಮಿಸಲಾಗಿದ್ದು ನೆಪ ಮಾತ್ರಕ್ಕೆ ಶೌಚಾಲಯ ಇತ್ತು. ಆದರೆ, ನೀರಿನ ಸೌಲಭ್ಯ ಇಲ್ಲದ ಕಾರಣ ಶೌಚಾಲಯ ಬಳಸುವವರೇ ಇರಲಿಲ್ಲ. 2016–17ರಲ್ಲಿ ನಬಾರ್ಡ್‌ ಯೋಜನೆಯಡಿ ಶೌಚಾಲಯ ನಿರ್ಮಾಣವಾಗಿದ್ದರೂ, ನೀರಿನ ಸಂಪರ್ಕ ಇನ್ನೂ ನೀಡಿಲ್ಲ. ಹೀಗಾಗಿ ಅದರ ಉದ್ಘಾಟನೆಯೇ ಆಗಿಲ್ಲ.

ಪ್ರತಿ ವರ್ಷ ಇಲ್ಲಿ ಇದೇ ಪರಿಸ್ಥಿತಿ ಇದ್ದು, ಕಳೆದ ವರ್ಷವೂ ಶೌಚಾಲಯ ಇಲ್ಲದ ಬಗ್ಗೆ ಗಮನ ಸೆಳೆಯಲಾಗಿತ್ತು. ಆದರೆ ಪರಿಸ್ಥಿತಿ ಸುಧಾರಿಸಿಲ್ಲ. ಈ ಬಾರಿ ಸಹ ಬಾಲಕಿಯರು ಊರಿನ ಯಾವುದಾದರೂ ಮನೆಗೆ ಹೋಗಿ ದೇಹಬಾಧೆ ತೀರಿಸಿಕೊಳ್ಳಬೇಕು, ಬಾಲಕರು ಎಂದಿನಂತೆಯೇ ಕಾಂಪೌಂಡ್‌ ಹಿಂಬದಿಗೆ ತೆರಳಬೇಕು.

‘ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಏನೂ ಪ್ರಯೋಜನ ಆಗಿಲ್ಲ. ಕಾಲೇಜಿನಲ್ಲಿ ಶುಚಿತ್ವವೇ ಇಲ್ಲ. ವಿದ್ಯುತ್‌ ಸಂಪರ್ಕ ಸಹ ಇಲ್ಲ. ಹೀಗಾಗಿ ಕತ್ತಲೆ ಕೊಠಡಿಯಲ್ಲೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದೆ’ ಎಂದು ಪೋಷಕರು ಅಳಲು ತೋಡಿಕೊಂಡರು.

ಸಂಚಾರಿ ಶೌಚಾಲಯ ಸಾಧ್ಯ: ಸಂಚಾರಿ ಶೌಚಾಲಯಗಳ ಬಳಕೆ ಇದೀಗ ಸಾಮಾನ್ಯವಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಿಗೆ ಇಂತಹ ಶೌಚಾಲಯಗಳನ್ನು ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಪೋಷಕರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು