ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಗೆರೆ ಗ್ರಾಮದಲ್ಲಿ ಶೋಕಸಾಗರ: ಆಕ್ರಂದನ, ಗುರು ಪತ್ನಿ ರೋದನಕ್ಕೆ ಕಣ್ಣೀರಾದ ಜನ

ತಮ್ಮಂದಿರ ಗೋಳಿಗೆ ಕೊನೆ ಇಲ್ಲ
Last Updated 15 ಫೆಬ್ರುವರಿ 2019, 14:31 IST
ಅಕ್ಷರ ಗಾತ್ರ

ಮುಖ್ಯಾಂಶಗಳು
* ಯೋಧ ಎಚ್‌.ಗುರು ಸಾವಿಗೆ ಕಂಬನಿ ಮಿಡಿದ ಜನರು

* ಗುರು ಪತ್ನಿ, ತಂದೆ–ತಾಯಿ, ಸಹೋದರರ ಗೋಳು

* ಹೊರ ಜಿಲ್ಲೆಗಳಿಂದಲೂ ಜನರು ಗುಡಿಗೆರೆ ಗ್ರಾಮಕ್ಕೆ ಭೇಟಿ

ಮಂಡ್ಯ: ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಸಿಆರ್‌ಪಿಎಫ್‌ ಯೋಧ ಎಚ್‌.ಗುರು ಹುಟ್ಟೂರು ಗುಡಿಗೆರೆ ಕಾಲೊನಿಯಲ್ಲಿ ನೀರವ ಮೌನ ಆವರಿಸಿದೆ. ಉತ್ಸಾಹಿ, ಮಾದರಿ ಯೋಧನನ್ನು ಕಳೆದುಕೊಂಡ ಗ್ರಾಮದ ಜನರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಮನೆಯ ಆಧಾರವಾಗಿದ್ದ ಗುರುವನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಒಂದು ತಿಂಗಳು ಊರಿನಲ್ಲಿದ್ದು ಫೆ.10ರಂದು ಕರ್ತವ್ಯಕ್ಕೆ ಮರಳಿದ್ದ ಗುರು ಸಾವಿನ ಸುದ್ದಿ ಕುಟುಂಬ ಸದಸ್ಯರಿಗೆ ಬರಸಿಡಿಲು ಬಡಿದಂತಾಗಿದೆ. ಎಂಟು ತಿಂಗಳ ಹಿಂದಷ್ಟೇ ಗುರುವಿನ ಕೈಹಿಡಿದಿದ್ದ ಕಲಾವತಿ ಅವರನ್ನು ಸಂತೈಸುವುದು ಸಾಧ್ಯವಾಗದೆ ಸಂಬಂಧಿಕರು, ಗ್ರಾಮದ ಮಹಿಳೆಯರು ಕಣ್ಣೀರಿಡುತ್ತಿದ್ದಾರೆ. ತಾಯಿ ಚಿಕ್ಕಹೊಳ್ಳಮ್ಮ ಎದೆ ಬಡಿದುಕೊಂಡು ಅಳುವಾಗ ಜನರ ಆಕ್ರಂದನ ಮುಗಿಲು ಮುಟ್ಟುತ್ತಿದೆ. ಪ್ರೀತಿಯ ಅಣ್ಣನನ್ನು ಕಳೆದುಕೊಂಡ ತಮ್ಮಂದಿರಾದ ಮಧು, ಆನಂದ್‌ ಅವರ ಗೋಳಿಗೆ ಸ್ನೇಹಿತರು, ಯುವಕರು ಕಣ್ಣೀರಾಗಿದ್ದಾರೆ.

ಶುಕ್ರವಾರ ರಾತ್ರಿ ‘ಗುರು ಇನ್ನಿಲ್ಲ’ ಎಂಬ ಸುದ್ದಿ ಬಂದೊಡನೆ ಕುಟುಂಬ ಸದಸ್ಯರ ಮೇಲೆ ಆಕಾಶವೇ ಕುಸಿದು ಬಿದ್ದಂತಾಯಿತು. ಸಂಬಂಧಿಕರು ಗ್ರಾಮಕ್ಕೆ ಬಂದು ಅವರನ್ನು ಸಂತೈಸುತ್ತಿದ್ದಾರೆ. ಶನಿವಾರ ಬೆಳಿಗ್ಗೆಯಿಂದಲೂ ಸುತ್ತಮುತ್ತಲ ಗ್ರಾಮಗಳ ಜನರು, ಹೊರ ಜಿಲ್ಲೆಗಳಿಂದಲೂ ತಂಡೋಪತಂಡವಾಗಿ ಬಂದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ. ಗುರು ಸ್ನೇಹಿತರು, ಸಹಪಾಠಿಗಳು ಸ್ಥಳಕ್ಕೆ ಬಂದು ಗುರು ಸಹೋದರರನ್ನು ಸಂತೈಸುತ್ತಿದ್ದಾರೆ.

ಗುರು ಪತ್ನಿ ಕಲಾವತಿ ಅವರನ್ನು ಸಂತೈಸುತ್ತಿರುವುದು
ಗುರು ಪತ್ನಿ ಕಲಾವತಿ ಅವರನ್ನು ಸಂತೈಸುತ್ತಿರುವುದು

ಶುಕ್ರವಾರ ಬೆಳಿಗ್ಗೆ ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಸೂಚನೆಯಂತೆ ಕುಟುಂಬ ಸದಸ್ಯರಿಗೆ ಸಹಾಯ ಮಾಡಲಾಗುವುದು. ಯೋಧ ಗುರು ಅವರ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು’ ಎಂದು ಹೇಳಿದರು.

ಸಂಸದ ಭೇಟಿ: ಸಂಸದ ಎಲ್‌.ಆರ್‌.ಶಿವರಾಮೇಗೌಡ ಭೇಟಿ ನೀಡಿ ಗುರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ‘ಕೇಂದ್ರದ ಗುಪ್ತಚರ ವೈಫಲ್ಯದಿಂದ ಘಟನೆ ನಡೆದಿದೆ. ಮೃತ ಯೋಧರಿಗೆ ಮೋದಿ ಅವರು ನ್ಯಾಯ ಕೊಡಿಸಬೇಕು. ರಾಜ್ಯ ಸರ್ಕಾರದಿಂದ ಮೃತ ಯೋಧನ ಕುಟುಂಬಕ್ಕೆ ನೆರವು ನೀಡಲಾಗುವುದು’ ಎಂದು ಹೇಳಿದರು. ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದರ್ಶನ್‌ ಪುಟ್ಟಣ್ಣಯ್ಯ ಭೇಟಿ ನೀಡಿದ್ದರು. ‘ಉಗ್ರರ ಹೀನ ಕೃತ್ಯದಿಂದಾಗಿ ಯೋಧರು ಜೀವ ಕಳೆದುಕೊಂಡಿದ್ದಾರೆ. ಸರ್ಕಾರ ಗುಡಿಗೆರೆ ಯೋಧನ ಕುಟುಂಬಕ್ಕೆ ನೆರವು ನೀಡಬೇಕು’ ಎಂದು ದರ್ಶನ್‌ ಆಗ್ರಹಿಸಿದರು.

ಗುರು ತಂದೆ ಹೊನ್ನಯ್ಯ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಯಿತು
ಗುರು ತಂದೆ ಹೊನ್ನಯ್ಯ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಯಿತು

ಗುರು ತಂದೆ ಅಸ್ವಸ್ಥ: ಆಸ್ಪತ್ರೆಗೆ

ಶುಕ್ರವಾರ ರಾತ್ರಿಯಿಂದಲೂ ದುಃಖದಲ್ಲಿ ಮುಳುಗಿದ್ದ ಯೋಧ ಗುರು ತಂದೆ ಹೊನ್ನಯ್ಯ ಅಸ್ವಸ್ಥರಾದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಜಿಲ್ಲಾ ಗೃಹರಕ್ಷಕ ಪಡೆಯ ಜಿಲ್ಲಾ ಕಮಾಂಡೆಂಟ್‌ ಕೆ.ಎಂ.ಮಹೇಶ್‌ ಗ್ರಾಮಕ್ಕೆ ಆಂಬುಲೆನ್ಸ್‌ ಕರೆಸಿ ಆಸ್ಪತ್ರೆಗೆ ಕಳುಹಿಸಿದರು.

‘ಸಿಆರ್‌ಪಿಎಫ್‌ ಕೇಂದ್ರ ಕಚೇರಿಗೆ ಸಂಪರ್ಕ ಮಾಡಲಾಗಿದ್ದು ಶನಿವಾರ ಬೆಳಿಗ್ಗೆ ಪಾರ್ಥಿವ ಶರೀರ ಗುಡಿಗೆರೆಗೆ ಬರಲಿದೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲಿಯವರೆಗೂ ನಮ್ಮ ಗೃಹರಕ್ಷಕರ ತಂಡ ಜನರ ನಿಯಂತ್ರಣ, ಸಹಾಯ ಕಾರ್ಯದಲ್ಲಿ ತೊಡಗಲಿದೆ’ ಎಂದು ಕೆ.ಎಂ.ಮಹೇಶ್‌ ತಿಳಿಸಿದರು.

ದೇಶಭಕ್ತ ಕುಟುಂಬ

ಗುರು ಚಿಕ್ಕಂದಿನಲ್ಲೇ ಪೊಲೀಸ್‌ ಅಥವಾ ಯೋಧನಾಗುವ ಕನಸು ಕಟ್ಟಿದ್ದರು. ನಂತರ ಅವರು ಬಹಳ ಇಷ್ಟಪಟ್ಟು, ಹೆಮ್ಮೆಯಿಂದ ಸಿಆರ್‌ಪಿಎಫ್‌ನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಅವರ ತಮ್ಮ ಕೂಡ ಗೃಹರಕ್ಷಕ ಪಡೆಯಲ್ಲಿ ಗೃಹರಕ್ಷಕರಾಗಿದ್ದರು. ಅವರ ಇಡೀ ಕುಟುಂಬ ದೇಶ ಸೇವೆಯನ್ನು ಹೆಮ್ಮೆ ಎಂದೇ ಪರಿಗಣಿಸಿತ್ತು.

‘ಗುರು ಗ್ರಾಮದ ಯುವಜನರಿಗೆ ಸದಾ ಸ್ಫೂರ್ತಿ ತುಂಬುತ್ತಿದ್ದರು. ಕಳೆದ ವಾರವಷ್ಟೇ ಕಾಶ್ಮೀರಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದರು. ಈಗ ಅವರು ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮದ ಯುವಕ ಶಂಕರ್‌ ತಿಳಿಸಿದರು.

ಸಹೋದರರೊಂದಿಗೆ ಗುರು(ಎಡದಿಂದ ಮೊದಲನೆಯವರು)
ಸಹೋದರರೊಂದಿಗೆ ಗುರು(ಎಡದಿಂದ ಮೊದಲನೆಯವರು)

ಬಿ.ಎಸ್‌.ಯಡಿಯೂರಪ್ಪ ಭೇಟಿ:
ಬಿ.ಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಗಡಿ ಕಾಯಲು ಹೋದ ವೀರ ಪುತ್ರ ಗುರು. ಪಾಕಿಸ್ತಾನದ ನೀಚ ಕೃತ್ಯದಿಂದ ಯೋಧರು ವೀರ ಮರಣವನ್ನಪ್ಪಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಚರ್ಚೆ ನಡೆಯಲಿದೆ. ಕುಟುಂಬ ಸದಸ್ಯರು, ಗ್ರಾಮಸ್ಥರು ಹೇಳಿದ ಕಡೆ ಗುರು ಶವ ಸಂಸ್ಕಾರ ಕೈಗೊಳ್ಳಬೇಕು. ಗುರು ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ಘಟನೆಗೆ ಪ್ರಧಾನಿ ಮೋದಿಯೇ ಕಾರಣ ಎಂದು ಕೆಲ ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ. ಈ ಹೇಳಿಕೆ ಮೂರ್ಖತನದ್ದು’ ಎಂದು ತಿರುಗೇಟು ನೀಡಿದ್ದರು.

ಶಾಸಕ ಆರ್‌. ಅಶೋಕ್‌ ಮಾತನಾಡಿ ‘ಗುರು ದೇಶಕ್ಕಾಗಿ ವೀರಮರಣವನ್ನಪ್ಪಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳನ್ನು ನಿರ್ನಾಮ ಮಾಡುವ ನಿರ್ಧಾರ ಕೈಗೊಳ್ಳಬೇಕು. ನಮ್ಮ ಯೋಧ ಹುತಾತ್ಮನಾಗಿರುವ ಸಂದರ್ಭದಲ್ಲಿ ನಾವೆಲ್ಲರೂ ಅವರ ಕುಟುಂಬದ ಜೊತೆ ಇರಬೇಕು’ ಎಂದು ಹೇಳಿದರು.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ ‘ಪಾಕಿಸ್ತಾನದ ಪೈಶಾಚಿಕ ಕೃತ್ಯದಿಂದ ದೇಶದ ಜನರ ರಕ್ತ ಕುದಿಯುತ್ತಿದೆ. ಸೈನಿಕರ ಪ್ರಾಣ ತ್ಯಾಗಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಉಗ್ರರ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲೇಬೇಕು. ಗುರು ವೀರ ಮರಣ ಹೊಂದಿದ್ದು ಅವರ ಕುಟುಂಬ ಸದಸ್ಯರಿಗೆ ಸರ್ಕಾರ ಸಕಲ ಸೌಲಭ್ಯ ನೀಡಲಿದೆ’ ಎಂದರು.

ಕರ್ತವ್ಯ ನಿರ್ವಹಣೆ ವೇಳೆ ಸೆಲ್ಫಿ ತೆಗೆದು ಕಳಿಸಿದ್ದ ಗುರು
ಕರ್ತವ್ಯ ನಿರ್ವಹಣೆ ವೇಳೆ ಸೆಲ್ಫಿ ತೆಗೆದು ಕಳಿಸಿದ್ದ ಗುರು

ಚುಂಚಶ್ರೀ ಭೇಟಿ:
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಗ್ರಾಮಕ್ಕೆ ಭೇಟಿ ನೀಡಿ ‘ನಾವೆಲ್ಲರೂ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದರೆ ಅದಕ್ಕೆ ಗುರುವಿನಂತಹ ವೀರ ಯೋಧರೇ ಕಾರಣ. ಉಗ್ರರ ದಾಳಿಯಲ್ಲಿ ಯೋಧರು ಹುತಾತ್ಮರಾಗಿರುವುದು ದುಃಖದ ಸಂಗತಿ. ನಮ್ಮ ಮಣ್ಣಿನ ಮಗ ಉಗ್ರರ ದಾಳಿಗೆ ಪ್ರಾಣ ಬಿಟ್ಟಿದ್ದಾರೆ’ ಎಂದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT