ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಕಣ್ಣೀರಿನಿಂದ ರೈತರ ಆತ್ಮಹತ್ಯೆ ಹೆಚ್ಚಳ: ಆರ್‌.ಅಶೋಕ್‌

Last Updated 31 ಅಕ್ಟೋಬರ್ 2018, 11:13 IST
ಅಕ್ಷರ ಗಾತ್ರ

ಪಾಂಡವಪುರ: ‘ವಿಧಾನಸಭೆ ಚುನಾವಣೆಗೂ ಮೊದಲು ಅಧಿಕಾರಕ್ಕಾಗಿ ಕಣ್ಣೀರು ಹಾಕುತ್ತಾ ಸಾಯುವ ಮಾತುಗಳನ್ನಾಡುತ್ತಿದ್ದಿರಿ. ಮುಖ್ಯಮಂತ್ರಿಯಾದ ಮೇಲೂ ಏಕೆ ಕಣ್ಣೀರು ಹಾಕುವಿರಿ? ನಿಮ್ಮ ಕಣ್ಣೀರಿನಿಂದ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳವಾಗಿದೆ’ ಎಂದು ಶಾಸಕ ಆರ್‌.ಅಶೋಕ್‌ ಆರೋಪಿಸಿದರು.

ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಬುಧವಾರ ಲೋಕಸಭೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.

‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ ಮಂಡ್ಯ ಜಿಲ್ಲೆಯೊಂದರಲ್ಲೇ 30 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮನ್ನಾ ಮಾಡುವುದಾಗಿ ಸುಳ್ಳು ಹೇಳಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರು. ಜನರು ಅವರ ಮಾತು ನಂಬಿ ಮತ ಹಾಕಿದರು. ಆದರೆ ಸಾಲ ಮನ್ನಾ ಮಾಡುವಾಗ ಗೊಂದಲ ಸೃಷ್ಟಿಸಿದರು. ಉಪ ಚುನಾವಣೆ ಬಂದಾಗ ಈಗ ಮತ್ತೆ ಅಳುತ್ತಾ ಮತಯಾಚನೆ ಮಾಡುತ್ತಿದ್ದಾರೆ. ಜನರು ಈ ನಾಟಕವನ್ನು ನಂಬಬೇಕಾ’ ಎಂದು ಪ್ರಶ್ನಿಸಿದರು.

‘ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಧೀರನೂ ಅಲ್ಲ. ಮುಖ್ಯಮಂತ್ರಿಗಳು ಕೊಟ್ಟ ಮಾತು ಈಡೇರಿಸಲಾಗದೇ ಕಣ್ಣೀರು ಸುರಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಇನ್ನು ಹೆಚ್ಚು ದಿನ ಉಳಿಯುವುದಿಲ್ಲ ಎಂಬುದರ ಮುನ್ಸೂಚನೆ ಇದು. ಜೆಡಿಎಸ್‌–ಕಾಂಗ್ರೆಸ್‌ ಪಕ್ಷಗಳು ಬೇರೆ ಬೇರೆ ಗುಂಪಿನ ರಕ್ತವಾಗಿದ್ದು, ಒಂದುಗೂಡಲು ಸಾಧ್ಯವಿಲ್ಲ. ಎರಡೂ ಪಕ್ಷಗಳ ಆಂತರಿಕ ಭಿನ್ನಾಭಿಪ್ರಾಯದಿಂದ ನಮ್ಮ ಅಭ್ಯರ್ಥಿಗೆ ಲಾಭವಾಗುತ್ತದೆ. ಮೈತ್ರಿ ಪಕ್ಷಗಳು ಹಾಗೂ ಬಿಜೆಪಿ ನಡುವೆ ನೇರಹಣಾಹಣಿ ಇದ್ದು 25 ಸಾವಿರ ಮತಗಳಿಂದ ಸೋಲು–ಗೆಲುವು ಆಗುತ್ತದೆ’ ಎಂದು ಭವಿಷ್ಯ ನುಡಿದರು.

ಕೆ.ಎಸ್‌.ಪುಟ್ಟಣ್ಣಯ್ಯ ಸಮಾಧಿಗೆ ಪೂಜೆ:ಕ್ಯಾತನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆ.ಎಸ್‌.ಪುಟ್ಟಣ್ಣಯ್ಯ ಸಮಾಧಿಗೆ ಬಿಜೆಪಿ ಮುಖಂಡರು ನಮನ ಸಲ್ಲಿಸಿದರು. ನಂತರ ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಅವರನ್ನು ಭೇಟಿಯಾಗಿ ಬೆಂಬಲ ಕೋರಿದರು. ‘ಮುಖ್ಯಮಂತ್ರಿಗಳು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ದರ್ಶನ್‌ ಪುಟ್ಟಣ್ಣಯ್ಯ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಹೀಗಾಗಿ ರೈತ ಸಂಘದ ಮುಖಂಡರು ಎಲ್‌.ಆರ್‌.ಶಿವರಾಮೇಗೌಡರಿಗೆ ಛೀಮಾರಿ ಹಾಕಿದ್ದಾರೆ. ರೈತಸಂಘದ ಸದಸ್ಯರು ನಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವ ವಿಶ್ವಾಸವಿದೆ’ ಎಂದು ಅಶೋಕ್‌ ಹೇಳಿದರು.

ವೈಯಕ್ತಿಕ ಟೀಕೆ ತಪ್ಪು:‘ಯಾರೇ ಆಗಲಿ ವೈಯಕ್ತಿಕ ಟೀಕೆ ಮಾಡಬಾರದು. ಮುಖ್ಯಮಂತ್ರಿ ಕುಮಾರಸ್ವಾಮಿ– ಶಾಸಕ ಕುಮಾರ್‌ ಬಂಗಾರಪ್ಪ, ಸಿದ್ದರಾಮಯ್ಯ– ಜನಾರ್ಧನ ರೆಡ್ಡಿ ಅವರು ವೈಯಕ್ತಿಕ ವಿಚಾರಗಳ ಬಗ್ಗೆ ಟೀಕೆ ಮಾಡಿರುವುದು ತಪ್ಪು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT