ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಆರ್ಭಟ: ತಗ್ಗದ ಪ್ರವಾಹ ಸ್ಥಿತಿ

ಜಾರಿದ ಐತಿಹಾಸಿಕ ದೊಡ್ಡಹೊಟ್ಟೆ ಲಕ್ಷ್ಮಿರಂಗನಾಥಸ್ವಾಮಿ ಬೆಟ್ಟ
Last Updated 22 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ದಿನಗಳಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಭಾರಿ ಮಳೆ ಮಂಗಳವಾರವೂ ಮುಂದುವರಿದಿದೆ. ಮಳೆ ಅವಘಡಗಳಲ್ಲಿಮಂಡ್ಯ, ದಾವಣಗೆರೆ, ಕೊಪ್ಪಳ, ಹಾವೇರಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ.

ಆದರೆ, ಸರ್ಕಾರದ ಪ್ರಕಾರ ಎರಡು ದಿನಗಳಲ್ಲಿ 12 ಜನ ಮೃತಪಟ್ಟಿದ್ದಾರೆ.

ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು ದೊಡ್ಡಹೊಟ್ಟೆ ಲಕ್ಷ್ಮಿರಂಗನಾಥಸ್ವಾಮಿ ಬೆಟ್ಟ ಕುಸಿದಿದೆ. ಬಳ್ಳಾರಿ ಜಿಲ್ಲೆಯಲ್ಲಿ ತುಂಗ
ಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೆಲವು ಕಡೆ ಪರಿಹಾರ ಕೇಂದ್ರಗಳನ್ನೂ ತೆರೆಯಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ರೈತರೊಬ್ಬರು ಮಲಪ್ರಭಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ನವಲಗುಂದ ತಾಲ್ಲೂಕಿನ ಕುನ್ನೂರು ಗ್ರಾಮದಲ್ಲಿ ಮನೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ದಾವಣಗೆರೆ ತಾಲ್ಲೂಕಿನ ಪುಟಗನಾಳ್ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರದಲ್ಲಿ ಬುಡೇನ್‌ಬಿ (80) ಎಂಬುವವರು ಗೋಡೆ ಕುಸಿದು ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಗಂಜಿಗೆರೆ ಗ್ರಾಮದಲ್ಲಿ ಮನೆಯೊಂದು ಕುಸಿದು, ಕುಮಾರ್ (40) ಎಂಬುವವರು ಮೃತಪಟ್ಟಿದ್ದಾರೆ.

ಮಳೆಯಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣ ನೆಲಕಚ್ಚಿದೆ ಎಂದು ಹಾವೇರಿ ಜಿಲ್ಲೆಯ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಹಾಸಗಲ್ ಗ್ರಾಮದ ಬಾಲಕನೊಬ್ಬ ಕೆರೆಯಲ್ಲಿ ಆಟವಾಡಲು ಹೋಗಿ ಮುಳುಗಿ ಮೃತಪಟ್ಟಿದ್ದಾನೆ. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ.

ಹಲವೆಡೆ ಸಂಪರ್ಕ ಕಡಿತ: ಕಂಪ್ಲಿ– ಗಂಗಾವತಿ ಸೇತುವೆ ಮುಳುಗಿದ್ದು, ಬೀದರ್‌, ಕಲಬುರ್ಗಿ, ರಾಯಚೂರು, ಆಂಧ್ರ ಮತ್ತು ತೆಲಂಗಾಣದ ಅನೇಕ ನಗರಗಳಿಗೆ ಸಂಪರ್ಕ ಕಡಿತಗೊಂಡಿದೆ. ಭಾರಿ ಮಳೆಗೆ ಹೂವಿನಹಡಗಲಿಯ ಬೂದನೂರು ಕೆರೆ ಒಡೆದು ಹೋಗಿದೆ.

ಭೀಮಾ ನದಿಯ ಸೊನ್ನ ಬ್ಯಾರೇಜ್‌ನ ಹಿನ್ನೀರಿನಿಂದಾಗಿ ವಿಜಯಪುರ ಜಿಲ್ಲೆಯ ತಾರಾಪುರ- ಆಲಮೇಲ ರಸ್ತೆ ಸಂಪರ್ಕ ಕಡಿತಗೊಂಡಿದೆ. ಡೋಣಿ ನದಿಗೆ ಪ್ರವಾಹ ಬಂದು ತಾಳಿಕೋಟೆ– ಹಡಗಿನಾಳ ನಡುವೆ ಸಂಪರ್ಕ ಕಡಿತಗೊಂಡಿದೆ. ಬಾದಾಮಿ ಹಾಗೂ ಹುನಗುಂದ ತಾಲ್ಲೂಕುಗಳಲ್ಲಿ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಯಲ್ಲಾಪುರ–ಮುಂಡಗೋಡ ನಡುವೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ಆರು ಸೇತುವೆಗಳು ಜಲಾವೃತವಾಗಿವೆ.

ಮಳೆ ಕಡಿಮೆ, ಪ್ರವಾಹದಲ್ಲಿ ಏರಿಕೆ: ಕಲಬುರ್ಗಿ ಜಿಲ್ಲೆಯ ಅಫಜಲಪುರ, ಆಳಂದ ತಾಲ್ಲೂಕು ಸೇರಿದಂತೆ ಕೊಪ್ಪಳ,ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಂಗಳವಾರ ಮಳೆ ಕಡಿಮೆಯಾಗಿದೆ. ಆದರೆ, ಜಲಾಶಯಗಳಿಂದ ನಿರಂತರ ನೀರು ಬಿಡುತ್ತಿರುವ ಕಾರಣ, ಪ್ರವಾಹದಲ್ಲಿ ಮತ್ತಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT