ಗುರುವಾರ , ಡಿಸೆಂಬರ್ 5, 2019
25 °C
ದಕ್ಷಿಣ ಒಳನಾಡಿನಲ್ಲಿ ಇಂದು ಭಾರಿ ಮಳೆ ಸಾಧ್ಯತೆ

ಕರಾವಳಿ, ಮಲೆನಾಡು ಸೇರಿ ರಾಜ್ಯದ ವಿವಿಧೆಡೆ ಅಕಾಲಿಕ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾನುವಾರ ಮಳೆಯಾಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ. ಭತ್ತ ಕಟಾವು ಮಾಡಿ ಗದ್ದೆಯಲ್ಲಿ ಒಣಗಲು ಬಿಟ್ಟಿರುವ ರೈತರಿಗೆ ತೀವ್ರ ತೊಂದರೆ ಆಗಿದೆ. ಜತೆಗೆ ಅಡಿಕೆ ಬೆಳೆಗಾರರಿಗೂ ಸಮಸ್ಯೆಯಾಗಿದೆ.

ಮಂಗಳೂರು ನಗರ, ಉಳ್ಳಾಲ, ಸುರತ್ಕಲ್‌, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಸಂಜೆ ಕೆಲವು ಸಮಯ ಮಳೆ ಸುರಿಯಿತು. ಉಡುಪಿ ಜಿಲ್ಲೆಯ ಕೆಲವೆಡೆ ಸಂಜೆಯ ವೇಳೆಗೆ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಮೂರು ಬಾರಿ ಮಳೆ ಸುರಿದಿದೆ.

ಕೊಡಗು ಜಿಲ್ಲೆಯಲ್ಲಿ ಭಾನುವಾರ ಇಡೀ ದಿನ ಉತ್ತಮ ಮಳೆಯಾಗಿದೆ. ಬೆಳಿಗ್ಗೆಯಿಂದ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ, ಮಧ್ಯಾಹ್ನದ ಬಳಿಕ ಬಿರುಸು ಪಡೆದುಕೊಂಡಿತು. ಶನಿವಾರ ರಾತ್ರಿಯೂ ಜಿಲ್ಲೆಯ ಕೆಲವೆಡೆ ಉತ್ತಮ ಮಳೆ ಸುರಿದಿತ್ತು.

ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ಕಾಫಿ ಬೆಳೆಗಾರರು ಆತಂಕಗೊಂಡಿದ್ದಾರೆ. ಅರೇಬಿಕಾ ಕಾಫಿ ಹಣ್ಣಾಗಿದ್ದು ಮಳೆಯಿಂದ ಉದುರುವ ಆತಂಕ ಎದುರಾಗಿದೆ.

ಮೈಸೂರು ನಗರದಲ್ಲಿ ಸಂಜೆಯಿಂದ ಸಾಧಾರಣ ಮಳೆ ಸುರಿಯಿತು. ಮಂಡ್ಯ, ಹಾಸನದಲ್ಲಿ ಮೋಡಕವಿದ ವಾತಾವರಣವಿತ್ತು.

ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಭಾನುವಾರ ತುಂತುರು ಮಳೆ ಸುರಿಯಿತು.

ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ತೀರ್ಥಹಳ್ಳಿ, ಹೊಸನಗರ, ರಿಪ್ಪನ್‌ಪೇಟೆ, ಭದ್ರಾವತಿಯಲ್ಲಿ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ನಗರ, ಕೋಣಂದೂರು ಸುತ್ತಮುತ್ತ ತುಂತುರು ಮಳೆಯಾಗಿದೆ.

ಚಿತ್ರದುರ್ಗದ ಹಲವೆಡೆ ಭಾನುವಾರ ಇಡೀ ದಿನ ಸಾಧಾರಣ ಮಳೆ ಸುರಿದಿದೆ.

ಬಳ್ಳಾರಿ ನಗರ ಮತ್ತು ಜಿಲ್ಲೆಯ ವಿವಿಧೆಡೆ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೂ ನಿರಂತರವಾಗಿ ಮಳೆ ಸುರಿಯಿತು.

ದಕ್ಷಿಣ ಒಳನಾಡು: ಇಂದು ಭಾರಿ ಮಳೆ ಸಾಧ್ಯತೆ

ರಾಜ್ಯದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್‌’ ಘೋಷಿಸಲಾಗಿದ್ದು, ಡಿ.2ರಂದು ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿರುವ ಹಿನ್ನೆಲೆ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಕಡಿಮೆ ಇರಲಿದೆ.

ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯಲ್ಲಿ 4 ಸೆಂ.ಮೀ.ಮಳೆಯಾಗಿದೆ. ಅಜ್ಜಂಪುರ, ಕಡೂರು, ಶ್ರೀರಾಂಪುರ, ಚಿತ್ರದುರ್ಗ, ರಾಯಲ್ಪಾಡು 2, ತುಮಕೂರು, ಕೋಲಾರ, ಮಧುಗಿರಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲಾ 1 ಸೆಂ.ಮೀ.ಮಳೆಯಾಗಿದೆ.

ಗೂಳೂರು ಗಣೇಶ ವಿಸರ್ಜನೆ ಮುಂದಕ್ಕೆ

ತುಮಕೂರು: ಶನಿವಾರ ನಡುರಾತ್ರಿ ಆರಂಭವಾದ ಮಳೆ ಭಾನುವಾರವೂ ಮುಂದುವರಿದ ಕಾರಣ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಗೂಳೂರು ಗಣೇಶ ಜಾತ್ರೆಯನ್ನು ಡಿ.14 ಮತ್ತು 15ಕ್ಕೆ ಮುಂದೂಡಲಾಗಿದೆ.

ಶನಿವಾರ ರಾತ್ರಿ 10ಕ್ಕೆ ಗಣೇಶಮೂರ್ತಿಯನ್ನು ದೇವಾಲಯದ ಹೊಸ್ತಿಲು ದಾಟಿಸಿ ಮುಂಭಾಗದ ಗೋಪುರ ಅಡಿ ಕೂರಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸಂಜೆ ಕೆರೆಯಲ್ಲಿ ವಿಸರ್ಜಿಸಬೇಕಿತ್ತು.

ಆದರೆ ನಡುರಾತ್ರಿ ಆರಂಭವಾದ ಮಳೆ ಭಾನುವಾರ ಸಹ ಮುಂದುವರಿಯಿತು. ಗ್ರಾಮಸ್ಥರು ಸಭೆ ಸೇರಿ ಜಾತ್ರೆ ಮುಂದೂಡಲು ನಿರ್ಣಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು