ಗುರುವಾರ , ನವೆಂಬರ್ 21, 2019
23 °C

ರಾಮಾಯಣ ದುರಂತ ಪ್ರಜ್ಞೆಯಿಂದ ಹೊಮ್ಮಿದ ಕಾವ್ಯ: ಲಕ್ಷ್ಮೀಶ ತೋಳ್ಪಾಡಿ

Published:
Updated:

ಸಾಗರ: ಸೃಷ್ಟಿಶೀಲತೆ ಉಂಟಾಗುವುದೇ ದುರಂತ ಪ್ರಜ್ಞೆಯ ಸಂದರ್ಭದಲ್ಲಿ. ಮಹಾಕವಿ ವಾಲ್ಮೀಕಿಯಲ್ಲಿ ಉಂಟಾದ ದುರಂತ ಪ್ರಜ್ಞೆಯೆ ರಾಮಾಯಣದಂತಹ ಮಹಾಕಾವ್ಯ ಹೊರಹೊಮ್ಮಲು ದಾರಿ ಮಾಡಿಕೊಟ್ಟಿತು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ವ್ಯಾಖ್ಯಾನಿಸಿದರು.

ಸಮೀಪದ ಹೆಗ್ಗೋಡಿನಲ್ಲಿ ಕಿನ್ನರಮೇಳ ಹಾಗೂ ಸಾಕೇತ ಕಲಾವಿದರು ಸಂಸ್ಥೆ ಶುಕ್ರವಾರ ಏರ್ಪಡಿಸಿದ್ದ ಕೆ.ಜಿ.ನಾರಾಯಣ ಸಂಸ್ಮರಣಾ ಕಾರ್ಯಕ್ರಮದಲ್ಲಿ ‘ರಾಮತ್ವ ಮತ್ತು ರಾಮರಾಜ್ಯ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ಜೋಡಿ ಕ್ರೌಂಚ ಪಕ್ಷಿಗಳು ಒಟ್ಟಿಗೆ ಇದ್ದಾಗ ಬೇಡ ತನ್ನ ಬಾಣದಿಂದ ಒಂದು ಪಕ್ಷಿಯನ್ನು ಹೊಡೆದು ಉರುಳಿಸಿದಾಗ ಮತ್ತೊಂದು ಪಕ್ಷಿಯಿಂದ ಹೊರಹೊಮ್ಮಿದ ಆರ್ತನಾದ ವಾಲ್ಮೀಕಿಯಲ್ಲಿ ಕಾರುಣ್ಯದ ಭಾವನೆ ಮೂಡಿಸುವ ಜೊತೆಗೆ ಸೃಷ್ಟಿಶೀಲ ಉದ್ವಿಗ್ನತೆ ಹುಟ್ಟಿಸಿತು. ಈ ಮೂಲಕ ಉಂಟಾದ ದುರಂತ ಪ್ರಜ್ಞೆ ರಾಮಾಯಣದ ಸೃಷ್ಟಿಗೆ ದಾರಿ ಮಾಡಿಕೊಟ್ಟಿತು’ ಎಂದು ಅವರು ವಿಶ್ಲೇಷಿಸಿದರು.

‘ಕ್ರೌಂಚ ಪಕ್ಷಿಗಳ ಘಟನೆಗಿಂತ ಮುಂಚಿತವಾಗಿ ಈ ಜಗತ್ತಿನಲ್ಲಿ ಅತ್ಯಂತ ಗುಣಶೀಲ ವ್ಯಕ್ತಿ ಯಾರು ಎಂದು ನಾರದ ಮುನಿಗಳನ್ನು ವಾಲ್ಮೀಕಿ ಪ್ರಶ್ನಿಸಿದ್ದರು. ನೀವು ಹೇಳುವಂತೆ ಶ್ರೀರಾಮ ಎಂಬ ಗುಣಶೀಲ ವ್ಯಕ್ತಿ ಇದ್ದಾನೆ ಎಂದು ಜನರು ಮಾತನಾಡಿಕೊಳ್ಳುತ್ತಿರುವುದಾಗಿ ನಾರದ ವಾಲ್ಮೀಕಿಗೆ ತಿಳಿಸಿದ್ದ. ಹೀಗಾಗಿ ರಾಮಾಯಣ ಮೂಲತಃ ಜನಪದೀಯ’ ಎಂದು ಅವರು ಅಭಿಪ್ರಾಯಪಟ್ಟರು.

‘ನಾಗರಿಕತೆ ಪತನಗೊಳ್ಳುತ್ತಿದೆ ಎಂಬ ಅರಿವು ವಾಲ್ಮೀಕಿಯಲ್ಲಿ ಮೂಡಿದ್ದು ಕೂಡ ರಾಮಾಯಣ ಸೃಷ್ಟಿಯಾಗಲು ಕಾರಣವಾಯಿತು. ನಾಗರಿಕತೆ ಹೆಸರಿನಲ್ಲಿ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಆತಂಕ ವಾಲ್ಮೀಕಿಯನ್ನು ಕಾಡಿತ್ತು. ಹೀಗಾಗಿ ರಾಮಾಯಣ ಆದಿ ಕಾವ್ಯವೇ ಹೊರತು ಆದಿಮ ಕಾವ್ಯವಲ್ಲ’ ಎಂದು ಅವರು ಪ್ರತಿಪಾದಿಸಿದರು.

ಶ್ರೀರಾಮನ ಆಸ್ಥಾನದಲ್ಲಿ ಆತನ ಮಕ್ಕಳಾದ ಲವಕುಶರು ಒಮ್ಮೆ ರಾಮಾಯಣ ಕಾವ್ಯವನ್ನು ವ್ಯಾಖ್ಯಾನ ಮಾಡುವಾಗ ಅದನ್ನು ಆಸ್ವಾದಿಸಲು ರಾಮ ಸಿಂಹಾಸನದಿಂದ ಕೆಳಗೆ ಇಳಿದು ಪ್ರೇಕ್ಷಕರ ಸಾಲಿನಲ್ಲಿ ಕುಳಿತ ಪ್ರಸಂಗವನ್ನು ಉಲ್ಲೇಖಿಸಿದ ಅವರು, ‘ಹೀಗೆ ಸಿಂಹಾಸನದಿಂದ ಕೆಳಗೆ ಇಳಿಯುವುದೇ ನಿಜವಾದ ರಾಮತ್ವ’ ಎಂದು ಅರ್ಥಪೂರ್ಣವಾಗಿ ನುಡಿದರು.

ಮಾತನ್ನು ಮತ್ತೊಂದು ಅನುಭವದೊಂದಿಗೆ ಜೋಡಿಸಿ ಆ ಮೂಲಕ ವಾಸ್ತವದ ಪಾತಳಿಯನ್ನು ಮೀರಿ ಮಾತಿನ ಅರ್ಥವಂತಿಕೆಯನ್ನು ಹೆಚ್ಚಿಸುವ ಕಲಾತ್ಮಕ ಗುಣ ರಾಮಾಯಣಕ್ಕೆ ಇದೆ. ಎಲ್ಲ ರೀತಿಯ ಪೂರ್ವಾಗ್ರಹಗಳನ್ನು ಉದ್ದೇಶಪೂರ್ವಕವಾಗಿ ಬದಿಗಿಟ್ಟು ಇದರ ಅಧ್ಯಯನ ಮಾಡಿದರೆ ಮಾತ್ರ ಅರ್ಥಪೂರ್ಣ ಸ್ಪಂದನೆ ಸಾಧ್ಯ ಎಂದರು.

ಕಿನ್ನರಮೇಳ ಸಂಸ್ಥೆಯ ಕೆ.ಜಿ.ಕೃಷ್ಣಮೂರ್ತಿ, ಸುಶೀಲಾ ಕೆಳಮನೆ, ಸಾಕೇತ ಕಲಾವಿದರು ಸಂಸ್ಥೆಯ ಕೆ.ಜಿ.ರಾಮರಾವ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)