ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನ: ಮಠಾಧೀಶರು ಒತ್ತಾಯಿಸುವುದು ಒಳ್ಳೆಯದಲ್ಲ: ರಂಭಾಪುರಿ ಸ್ವಾಮೀಜಿ

ಮೌಲ್ಯಗಳ ಉಳಿವಿಗಾಗಿ ಸಂಸ್ಕೃತಿ ಪುನಶ್ಚೇತನ ಚಿಂತನ ಸಮಾವೇಶ ಇಂದಿನಿಂದ
Last Updated 15 ಜನವರಿ 2020, 19:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಂಪುಟದಲ್ಲಿ ಯಾರಿಗೆ ಮಂತ್ರಿ ಸ್ಥಾನ ಕೊಡಬೇಕು, ಬಿಡಬೇಕು ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಗೊತ್ತಿದೆ. ಅವರಿಗೆ ಅಂಥ ಪರಮಾಧಿಕಾರ ಇದೆ. ಅವರನ್ನು ಒತ್ತಾಯಿಸುವ ಕೆಲಸ ಯಾವುದೇ ಮಠಾಧೀಶರು ಮಾಡುವುದು ಒಳ್ಳೆಯದಲ್ಲ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಕಿವಿ ಮಾತು ಹೇಳಿದರು.

ನಗರದಲ್ಲಿ ಜ.16ರಿಂದ ಪ್ರಾರಂಭಗೊಳ್ಳಲಿರುವ ಶಿವಾಚಾರ್ಯ ಸಂಸ್ಕೃತಿ ಪುನಶ್ಚೇತನ ಚಿಂತನ ಸಮಾವೇಶದಲ್ಲಿ ಪಾಲ್ಗೊಳ್ಳಲು ಬುಧವಾರ ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಕಾವಿಧಾರಿಗಳಾದವರು ಧರ್ಮ ಸಂಸ್ಕೃತಿ ಆದರ್ಶಗಳನ್ನು ಬೆಳೆಸುವ ಕೆಲಸ ಮಾಡುವುದು ಒಳಿತು’ ಎಂದು ಸಲಹೆ ನೀಡಿದರು.

ಯಡಿಯೂರಪ್ಪ ಅವರು ಜನ ನಾಯಕರಿದ್ದಾರೆ. ಅವರು ಎಲ್ಲ ವರ್ಗದ ಜನರ ಹಿತ ಮತ್ತು ಬೆಳವಣಿಗೆಯ ಗುರಿಯೊಂದಿಗೆ ಶ್ರಮಿಸುತ್ತಿದ್ದಾರೆ ಎಂದರು.

ಎಲ್ಲ ರಂಗಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಧರ್ಮ, ಸಂಸ್ಕೃತಿ, ಆದರ್ಶ ಮೌಲ್ಯಗಳ ಪುನರುತ್ಥಾನಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಸಕಲರಿಗೂ ಹಿತವನ್ನು ಬಯಸಿದ ವೀರಶೈವ ಧರ್ಮದಲ್ಲಿ ಉದಾತ್ತ ಮೌಲ್ಯಗಳನ್ನು ಕಾಣುತ್ತೇವೆ. ಒಂದು ಧರ್ಮದ ಬಗ್ಗೆ ಹೇಳುವುದು ಬಲು ಸುಲಭ. ಆದರೆ, ಆಚರಿಸಿಕೊಂಡು ಬರುವುದು ಅಷ್ಟು ಸುಲಭವಲ್ಲ ಎಂದರು.

ಮನುಷ್ಯ ಭೌತಿಕವಾಗಿ ಸಂಪತ್ತು, ಅಧಿಕಾರ ಗಳಿಸಿದ್ದರೂ ಸಂಸ್ಕಾರದ ಕೊರತೆ ಬಹಳಷ್ಟಿದೆ. ಸಂಸ್ಕಾರ, ಸಂಸ್ಕೃತಿ ಇಲ್ಲದ ಕಾರಣ ಕೆಲವರಿಂದ ಅವಘಡಗಳು ಸಂಭವಿಸುತ್ತವೆ. ಈ ನಾಡಿನ ಮಠಾಧೀಶರ ಮೇಲೆ ಬಹಳಷ್ಟು ಜವಾಬ್ದಾರಿಯಿದೆ. ಅದನ್ನು ಅರಿತು ಆಚರಿಸಿ ಬಾಳಿದಾಗ ಸಮಾಜದ ಎಲ್ಲ ರಂಗಗಳಲ್ಲಿ ಉತ್ತಮ ವಾತಾವರಣ ನಿರ್ಮಾಣಗೊಳ್ಳಲು ಸಾಧ್ಯ ಎಂದು ಹೇಳಿದರು.

ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಜನವರಿ 16, 17 ಮತ್ತು 18 ರಂದು ಮೂರು ದಿನಗಳ ಕಾಲ ಚಿಂತನ ಸಮಾವೇಶ ಜರುಗಲಿದೆ ಎಂದು ಸ್ಚಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT