ಮಂಗಳವಾರ, ಫೆಬ್ರವರಿ 25, 2020
19 °C
ರಮೇಶ ಜಾರಕಿಹೊಳಿ ಕಿಡಿ

ಕಾಂಗ್ರೆಸ್‌ ಡಿಕೆಶಿ ಕೈಲಿದೆ, ಇನ್ನೆಲ್ಲ ತನ್ನದೇ ಎಂದುಕೊಂಡಿದ್ದ ಲಕ್ಷ್ಮೀ: ರಮೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ‘ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ದ ಡಿ.ಕೆ. ಶಿವಕುಮಾರ್‌, ಸೀನಿಯರ್‌ ಆದ ನನ್ನ ತಲೆ ಮೇಲೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕೂರಿಸಿದ್ರೆ ಒಪ್ಪಲು ಹೇಗೆ ಸಾಧ್ಯ? ಹೀಗಾಗಿ ಕಾಂಗ್ರೆಸ್‌ನಿಂದ ಹೊರಬಂದೆ’ ಎಂದು ಅನರ್ಹ ಶಾಸಕ, ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಲಕ್ಷ್ಮಿ ಅವರಿಗೆ ಯಾವುದೇ ಸ್ಥಾನಮಾನ ನೀಡಬಾರದೆಂದು ನಾನು ಷರತ್ತು ಹಾಕಿದ್ದೆ. ಸಿದ್ದರಾಮಯ್ಯ, ಡಿಕೆಶಿ ಹಾಗೂ ದಿನೇಶ್‌ ಗುಂಡೂರಾವ್‌ ಅವರ ಸಮ್ಮುಖದಲ್ಲಿಯೇ ನಿರ್ಧಾರವಾಗಿತ್ತು. ಆದರೂ ಲಕ್ಷ್ಮಿಗೆ ಮೈಸೂರು ಮಿನರಲ್ಸ್‌ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು’ ಎಂದು ಸ್ಮರಿಸಿದರು.

‘ನಾನು ಸುಮ್ಮನೆ ಇದ್ದಿದ್ದರೆ ಮುಂದೊಂದು ದಿನ ಸಚಿವ ಸ್ಥಾನವನ್ನೂ ನೀಡುತ್ತಿದ್ದರು. ಇದರ ಬಗ್ಗೆ ಸತೀಶ ಹೋರಾಟ ಮಾಡಲಿಲ್ಲ. ಆತ ಹೋರಾಟಗಾರ ಅಲ್ಲ. ಅವಳ ಮನೆಗೆ ಹೋಗಿ ಚಹಾ ಕುಡಿಯುತ್ತಿದ್ದ. ಅನಿವಾರ್ಯವಾಗಿ ನಾನು ನಿರ್ಧಾರ ಕೈಗೊಳ್ಳುವ ಸ್ಥಿತಿ ನಿರ್ಮಾಣವಾಯಿತು’ ಎಂದರು.

‘ಲಕ್ಷ್ಮಿ ಪ್ರಭಾವಿಯಾಗಲು ಡಿಕೆಶಿ ಒಬ್ಬರೇ ಅಲ್ಲ, ನಾವೂ ಕಾರಣರಾಗಿದ್ದೇವೆ. ಅದನ್ನು ಅವರು ತಿಳಿದುಕೊಳ್ಳಬೇಕಿತ್ತು. ಅವರು ಸಚಿವರಾದರೆ ಹೊಟ್ಟೆ ಕಿಚ್ಚು ಪಡುವಷ್ಟು ಸಣ್ಣ ಮನುಷ್ಯ ನಾನಲ್ಲ. ಆಕೆಯ ಹಣೆಬರಹದಲ್ಲಿ ಬರೆದಿದ್ದರೆ ಮುಖ್ಯಮಂತ್ರಿಯೇ ಆಗಲಿ. ಆದರೆ, ಆಕೆಗಾಗಿ ದುಡಿದವರ ಬಗ್ಗೆಯೂ ಸ್ವಲ್ಪ ಯೋಚಿಸಬೇಕಿತ್ತು’ ಎಂದು ಹೇಳಿದರು. 

‘ಕಾಂಗ್ರೆಸ್‌ ಡಿಕೆಶಿ ಕೈಯಲ್ಲಿದೆ. ಇನ್ನು ನನ್ನದೇ ಎಲ್ಲ ಎಂದುಕೊಂಡರು ಲಕ್ಷ್ಮಿ. ಜಾರಕಿಹೊಳಿ ಅವರಲ್ಲಿ ಏನೂ ಇಲ್ಲ ಎಂದುಕೊಂಡು ನಮ್ಮನ್ನು ನಿರ್ಲಕ್ಷಿಸಿದರು. ರಾಜಕಾರಣದಲ್ಲಿ ಯಾರು ದೊಡ್ಡವರು, ಸಣ್ಣವರು ಎನ್ನುವುದನ್ನು ತಿಳಿದುಕೊಳ್ಳಲಿಲ್ಲ’ ಎಂದು ಹರಿಹಾಯ್ದರು.

‘ಬಿಜೆಪಿ ಸೇರುವ ಹಿಂದಿನ ದಿನ ರಾತ್ರಿ ನನಗೆ ಒಂದು ನಿಮಿಷ ಸಹ ನಿದ್ದೆ ಬರಲಿಲ್ಲ. ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಟ್ಟಾ ಅಭಿಮಾನಿ. ನನ್ನ ದುಖಃವನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ದುಖಃವನ್ನು ನುಂಗಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ನಾನು ಕಾಂಗ್ರೆಸ್‌ನಲ್ಲಿ ಉಳಿದಿದ್ದರೆ ನನ್ನನ್ನು ನಿರ್ನಾಮ ಮಾಡುತ್ತಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು