ಮುಖ್ಯಮಂತ್ರಿ ಜೊತೆ ಕಾಣಿಸಿಕೊಳ್ಳದ ರಮೇಶ ಜಾರಕಿಹೊಳಿ

7
ದಿನವಿಡೀ ಜೊತೆಯೇ ಕಾಣಿಸಿಕೊಂಡ ಲಕ್ಷ್ಮಿ ಹೆಬ್ಬಾಳಕರ

ಮುಖ್ಯಮಂತ್ರಿ ಜೊತೆ ಕಾಣಿಸಿಕೊಳ್ಳದ ರಮೇಶ ಜಾರಕಿಹೊಳಿ

Published:
Updated:
Deccan Herald

ಬೆಳಗಾವಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಂತರ ಕಾಯ್ದುಕೊಂಡು, ನನ್ನ ಬೇಸರ ಕಡಿಮೆಯಾಗಿಲ್ಲ ಎಂಬ ಸಂದೇಶ ರವಾನಿಸಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶನಿವಾರ ಇಲ್ಲಿಗೆ ಬಂದ ಮುಖ್ಯಮಂತ್ರಿಯನ್ನು ಬರಮಾಡಿಕೊಂಡಿದ್ದು ಬಿಟ್ಟರೆ, ಬೇರಾವುದೇ ಕಾರ್ಯಕ್ರಮಗಳಲ್ಲಿ ಸಚಿವರು ಕಾಣಿಸಿಕೊಳ್ಳಲಿಲ್ಲ. ಇದು ಹಲವು ಅನುಮಾನಗಳಿಗೆ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬೆಳಿಗ್ಗೆ ಆರ್‌.ಎಲ್‌. ಕಾನೂನು ಕಾಲೇಜಿನ ಅಮೃತ ಮಹೋತ್ಸವ, ಕನ್ನಡ ಭವನದ ಉದ್ಘಾಟನೆ ಹಾಗೂ ಕುಮಾರಸ್ವಾಮಿ ಬಡಾವಣೆಯ ನಿವಾಸಿಗಳು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಪ್ರಮುಖ ಮುಖಂಡರ ಜೊತೆ ಚರ್ಚೆ ನಡೆಸಿದರು.

ಶಾಸಕರಾದ ಸತೀಶ ಜಾರಕಿಹೊಳಿ, ಗಣೇಶ ಹುಕ್ಕೇರಿ, ಸಂಸದರಾದ ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ಬಾಬಾಗೌಡ ಪಾಟೀಲ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರಾಜಕೀಯ ವಿಷಯಗಳು ಚರ್ಚೆಗೆ ಬರಲಿಲ್ಲ. ನಗರದ ಮಧ್ಯಭಾಗದಲ್ಲಿರುವ ಸಗಟು ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಯಲ್ಲಿ ಹೊಸದಾಗಿ ನಿರ್ಮಿಸಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು ಎಂದು ತಿಳಿದುಬಂದಿದೆ.

ಸಂಜೆ ಸುವರ್ಣ ವಿಧಾನಸೌಧದಲ್ಲಿ ಜನತಾ ದರ್ಶನ ನಡೆಸಿದರು. ಇಲ್ಲೆಲ್ಲೂ ಉಸ್ತುವಾರಿ ಸಚಿವರು ಕಾಣಿಸಿಕೊಳ್ಳಲಿಲ್ಲ.

ಖಾಸಗಿ ವಾಹನ ಬಳಕೆ

ಶಿಷ್ಟಾಚಾರದಂತೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಬರಮಾಡಿಕೊಳ್ಳಲು ಬೆಳಿಗ್ಗೆ ರಮೇಶ ಜಾರಕಿಹೊಳಿ ಅವರು ತಮ್ಮ ಖಾಸಗಿ ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಕುಮಾರಸ್ವಾಮಿ ಅವರು ಬಂದಿಳಿದಾಗ, ಆತ್ಮೀಯವಾಗಿ ಸ್ವಾಗತಿಸಿದರು. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಅವರು ರಮೇಶ ಅವರ ಗಲ್ಲವನ್ನು ಸವರಿದರು.

ಕರ್ನಾಟಕ ಲಾ ಸೊಸೈಟಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ ತೆರಳಿದ ನಂತರ, ರಮೇಶ ಅವರು ಕೂಡ ಹೊರಟು ಹೋದರು. ಆ ನಂತರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಭದ್ರತಾ ಸಿಬ್ಬಂದಿ ಹಾಗೂ ಸರ್ಕಾರಿ ಕಾರನ್ನು ಬಿಟ್ಟು ಹೋಗಿದ್ದರಿಂದ ಸಚಿವರು ಎಲ್ಲಿಗೆ ತೆರಳಿದರು ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ.

ಎಲ್ಲೆಡೆ ಲಕ್ಷ್ಮಿ ಹಾಜರ್‌

ಇನ್ನೊಂದೆಡೆ, ಪಿಎಲ್‌ಡಿ ಚುನಾವಣೆ ಹಿನ್ನೆಲೆಯಲ್ಲಿ ಸಚಿವರ ಜೊತೆ ಮುನಿಸಿಕೊಂಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ದಿನವಿಡೀ ಕುಮಾರಸ್ವಾಮಿ ಜೊತೆ ಕಾಣಿಸಿಕೊಂಡರು. ವಿಮಾನ ನಿಲ್ದಾಣದಲ್ಲಿ ಸಚಿವರ ಜೊತೆ ಮುಖಾಮುಖಿಯಾದರೂ ಮಾತನಾಡಲಿಲ್ಲ. ಕಾಲೇಜಿನ ಸಮಾರಂಭಕ್ಕೆ ಮುಖ್ಯಮಂತ್ರಿ ಅವರ ಜೊತೆ ಕಾರಿನಲ್ಲೇ ತೆರಳಿದರು. ಈ ವೇಳೆ ಜಿಲ್ಲೆಯ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !