ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಗು ಗಟ್ಟಿ ಹಿಡ್ಕೊಂಡರೆ ಬಾಯಿ ಬಿಡುತ್ತವೆ’

Last Updated 11 ಡಿಸೆಂಬರ್ 2018, 20:14 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದ ರೈತರ ನೆರವಿಗೆ ನಿಲ್ಲದ ವಾಣಿಜ್ಯ ಬ್ಯಾಂಕುಗಳಿಗೆ ಬುದ್ಧಿ ಕಲಿಸಬೇಕಾದರೆ, ಅಲ್ಲಿ ಸರ್ಕಾರ ಠೇವಣಿ ಇಟ್ಟಿರುವ ಕೋಟ್ಯಂತರ ಮೊತ್ತವನ್ನು ಹಿಂತೆಗೆದುಕೊಂಡು ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕುಗಳಲ್ಲಿಡಬೇಕು’ ಎಂದು ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್‌ ಸಲಹೆ ನೀಡಿದರು.

ಬರದ ಮೇಲಿನ ಚರ್ಚೆಯ ವೇಳೆ ವಿಧಾನಸಭೆಯಲ್ಲಿ ಮಾತನಾಡಿದ ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ, ರೈತರಿಗೆ ಬೆಳೆ ಸಾಲ ನೀಡಲು ವಾಣಿಜ್ಯ ಬ್ಯಾಂಕುಗಳು ಹಿಂದೇಟು ಹಾಕುತ್ತಿರುವ ಬಗ್ಗೆ ಪ್ರಸ್ತಾಪಿಸಿದರು.

ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ‘ಸಹಕಾರಿ ಬ್ಯಾಂಕುಗಳು, ಡಿಸಿಸಿ ಬ್ಯಾಂಕುಗಳ ಮೇಲೆ ರಾಜ್ಯ ಸರ್ಕಾರಕ್ಕೆ ಹಿಡಿತವಿರುತ್ತದೆ. ಹೀಗಾಗಿ, ಈ ಬ್ಯಾಂಕುಗಳಲ್ಲಿ ಸರ್ಕಾರದ ಹಣವನ್ನು ಠೇವಣಿ ಇಡಬೇಕು. ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಹಣ
ವಾಪಸು ಪಡೆದುಕೊಳ್ಳಬೇಕು. ಮೂಗು ಗಟ್ಟಿಯಾಗಿ ಹಿಡಿದುಕೊಂಡರೆ ಅವು ಬಾಯಿ ಬಿಡುತ್ತವೆ’ ಎಂದರು.

ನಾಲ್ಕು ಮಸೂದೆಗಳ ಮಂಡನೆ

ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಜನರಿಗೆ ಋಣದಿಂದ (ಸಾಲದಿಂದ) ಪರಿಹಾರ ಒದಗಿಸಲು ರೂಪಿಸಿದ ‘ಕರ್ನಾಟಕ ಋಣ ಪರಿಹಾರ ಮಸೂದೆ–2018’ ಅನ್ನು ವಿಧಾನಸಭೆಯಲ್ಲಿ ಸಂಸದೀಯ ಮತ್ತು ಕಾನೂನು ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ಮಂಡಿಸಿದರು.

ಅಲ್ಲದೆ, ದುರಂತಕ್ಕೀಡಾದ ವ್ಯಕ್ತಿಗೆ ನೆರವಾಗುವ ಸಂದರ್ಭದಲ್ಲಿ ಜೀವರಕ್ಷಕನಿಂದ ಆಗುವ ಲೋಪದಿಂದ ರಕ್ಷಿಸಲು ‘ಕರ್ನಾಟಕ ಜೀವರಕ್ಷಕ ಮತ್ತು ವೈದ್ಯಕೀಯ ವೃತ್ತಿನಿರತರ (ತುರ್ತು ಸನ್ನಿವೇಶಗಳಲ್ಲಿ ರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ’ಗೆ ತಿದ್ದುಪಡಿ ಮಸೂದೆ ಮತ್ತು ಬಗರ್‌ಹುಕುಂ ಜಮೀನುಗಳ ಅಕ್ರಮ ಸಕ್ರಮಕ್ಕೆ ಸಲ್ಲಿಕೆಯಾಗಿ ವಿಲೇವಾರಿಯಾಗದೆ ಉಳಿದಿರುವ ಅರ್ಜಿಗಳ ವಿಲೇ ಅವಧಿ ವಿಸ್ತರಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಭೂ ಕಂದಾಯ ಕಾಯ್ದೆಗೆ ಎರಡನೇ ತಿದ್ದುಪಡಿ ಮಸೂದೆಯನ್ನೂ ಇದೇ ಸಂದರ್ಭದಲ್ಲಿ ಮಂಡಿಸಲಾಯಿತು.

ಇ– ಟೆಂಡರ್‌ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ–1999ಕ್ಕೂ ತಿದ್ದುಪಡಿ ತರಲು ಮಸೂದೆ ಮಂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT