ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಟವರ್‌ ಏರಿ ಸಂಬಂಧಿಕರ ಪ್ರತಿಭಟನೆ

‘ರಣಂ’ ಸಿನಿಮಾ ಶೂಟಿಂಗ್ ವೇಳೆ ಸ್ಫೋಟ ಪ್ರಕರಣ l ಪೊಲೀಸರು, ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ
Last Updated 1 ಏಪ್ರಿಲ್ 2019, 0:09 IST
ಅಕ್ಷರ ಗಾತ್ರ

ಬೆಂಗಳೂರು: ‘ರಣಂ’ ಸಿನಿಮಾ ಶೂಟಿಂಗ್ ವೇಳೆ ಸಂಭವಿಸಿದ್ದ ಸ್ಫೋಟದಲ್ಲಿ ತಾಯಿ– ಮಗು ಮೃತಪಟ್ಟ ಪ್ರಕರಣದ ಆರೋಪಿಗಳನ್ನು ತ್ವರಿತವಾಗಿ ಬಂಧಿಸುವಂತೆ ಒತ್ತಾಯಿಸಿ ಮೃತರ ಸಂಬಂಧಿಕರು ಬಾಗಲೂರು ಠಾಣೆ ಬಳಿಯ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದರು.

ಠಾಣೆ ಎದುರು ಭಾನುವಾರ ಸೇರಿದ್ದ ಸಂಬಂಧಿಕರು, ‘ಘಟನೆ ನಡೆದು ಮೂರು ದಿನಗಳಾಗಿವೆ. ಪ್ರಕರಣದ ಆರೋಪಿಗಳನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ತನಿಖೆಯೂ ತ್ವರಿತವಾಗಿ ನಡೆಯುತ್ತಿಲ್ಲ’ ಎಂದು ದೂರಿದರು.

ಸ್ಥಳದಲ್ಲಿದ್ದ ಪೊಲೀಸರಿಂದ ಸ್ಪಂದನೆ ಸಿಗದಿದ್ದಾಗ ಮೊಬೈಲ್ ಟವರ್‌ ಏರಿ ಕುಳಿತ ಸಂಬಂಧಿಕರಾದ ಮೆಹಬೂಬ, ಮುನಾವರ್, ಮನ್ಸೂರ ಹಾಗೂ ವಹೀದ್, ‘ಕೂಡಲೇ ಆರೋಪಿಗಳನ್ನು ಬಂಧಿಸಿ ಮೃತರ ಸಾವಿಗೆ ನ್ಯಾಯ ಒದಗಿಸಬೇಕು. ಅಲ್ಲಿಯವರೆಗೂ ನಾನು ಕೆಳಗೆ ಇಳಿಯುವುದಿಲ್ಲ’ ಎಂದು ಪಟ್ಟು ಹಿಡಿದರು.

‘ಶೂಟಿಂಗ್ ವೇಳೆ ಸಂಭವಿಸಿರುವ ಅವಘಡದ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯವರು ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಮೃತರ ಕುಟುಂಬದವರಿಗೂ ಸಾಂತ್ವನ ಹೇಳಿಲ್ಲ. ಚಿತ್ರತಂಡದ ವಿರುದ್ಧವೂ ಕ್ರಮ ಕೈಗೊಂಡಿಲ್ಲ’ ಎಂದು ಸಂಬಂಧಿಕರು ದೂರಿದರು.

ನಾಲ್ವರೂ ಸಂಬಂಧಿಕರನ್ನು ಟವರ್‌ನಿಂದ ಇಳಿಸುವ ಪೊಲೀಸರ ಪ್ರಯತ್ನ ವಿಫಲವಾಯಿತು. ಸ್ಥಳಕ್ಕೆ ಬಂದ ಸಂಪಿಗೇಹಳ್ಳಿ ಉಪವಿಭಾಗದ ಎಸಿಪಿ ಮೊಹಮ್ಮದ್ ನಾಗ್ಟೆ, ‘ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದು, 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು. ಚಲನಚಿತ್ರ ವಾಣಿಜ್ಯ ಮಂಡಳಿಯವರ ಜೊತೆ ಮಾತುಕತೆಗೆ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು. ಅದಕ್ಕೆ ಒಪ್ಪಿದ ಸಂಬಂಧಿಕರು, ಟವರ್‌ನಿಂದ ಇಳಿದು ಪ್ರತಿಭಟನೆ ಅಂತ್ಯಗೊಳಿಸಿದರು.

ಉಪವಾಸ ಸತ್ಯಾಗ್ರಹಕ್ಕೆ ತೀರ್ಮಾನ: ‘ಚಿತ್ರತಂಡದ ನಿರ್ಲಕ್ಷ್ಯದಿಂದಾಗಿ ಸುಮೇರಾ ಬಾನು (28) ಹಾಗೂ ಅವರ ಮಗಳು ಆಯೇರಾ ಬಾನು (5) ಪ್ರಾಣ ಹೋಗಿದೆ. ಕೋಲಾರದ ಆಜಾದ್ ನಗರದಲ್ಲಿ ಶನಿವಾರ ಅವರಿಬ್ಬರ ಅಂತ್ಯಕ್ರಿಯೆ ನಡೆಸಲಾಗಿದೆ. ಅವರಿಬ್ಬರ ಸಾವಿಗೆ ನ್ಯಾಯ ಸಿಗಬೇಕಾಗಿದೆ. ಹೀಗಾಗಿ ಉಪವಾಸ ಸತ್ಯಾಗ್ರಹ ನಡೆಸಲು ಸಂಬಂಧಿಕರೆಲ್ಲರೂ ತೀರ್ಮಾನಿಸಿದ್ದೇವೆ’ ಎಂದು ಸಂಬಂಧಿ ಮೆಹಬೂಬ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕರಣದ ಬಗ್ಗೆ ಪೊಲೀಸರಿಂದ ಗಂಭೀರ ತನಿಖೆ ನಡೆಯುತ್ತಿಲ್ಲ.ಮಾನವೀಯತೆ ದೃಷ್ಟಿಯಿಂದಲೂ ವಾಣಿಜ್ಯ ಮಂಡಳಿಯವರು ಕುಟುಂಬದ ನೋವಿಗೆ ಸ್ಪಂದಿಸಿಲ್ಲ. ಇಂಥ ವರ್ತನೆಯು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

‘ಮಾಸ್ತಿಗುಡಿ’ ಸಿನಿಮಾ ಚಿತ್ರೀಕರಣದ ವೇಳೆಯಲ್ಲೂ ಇಬ್ಬರು ಕಲಾವಿದರು ಮೃತಪಟ್ಟಿದ್ದರು. ಆ ಘಟನೆಯಿಂದಾಗಿ ಸುರಕ್ಷತೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈಗ ಮತ್ತೊಂದು ಅವಘಡ ಸಂಭವಿಸಿದ್ದು, ಸಿನಿಮಾದವರಿಗೆ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ’ ಎಂದು ಕಿಡಿಕಾರಿದರು.

‘ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಚಿತ್ರತಂಡದವರು ಕಾರು ಸ್ಫೋಟಿಸುವ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು. ಅವರ ಬೇಜವಾಬ್ದಾರಿ ನಡೆಯಿಂದಲೇ ಸ್ಫೋಟ ಸಂಭವಿಸಿದ್ದು, ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಈ ಸಾವಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

ರಸ್ತೆಯಲ್ಲಿ ಚೆಲ್ಲಿದ್ದ ಡೀಸೆಲ್: ತಪ್ಪಿದ ಅನಾಹುತ
‘ಶೂಟಿಂಗ್ ನಡೆಯುವ ವೇಳೆ ಸ್ಫೋಟಗೊಂಡಿದ್ದ ಸಿಲಿಂಡರ್, ಸುಮೇರಾ ಬಾನು ಹಾಗೂ ಆಯೇರಾ ಬಾನು ಅವರಿಗೆ ಬಡಿದಿತ್ತು. ಅವರಿಬ್ಬರು ಸ್ಥಳದಲ್ಲೇ ಮೃತಪಟ್ಟರು. ಅದೇ ಸಿಲಿಂಡರ್‌ ರಸ್ತೆಯಲ್ಲಿ ನಿಂತಿದ್ದ ಡೀಸೆಲ್‌ ಟ್ಯಾಂಕರ್‌ಗೆ ಬಡಿದಿದ್ದರಿಂದ, ಅದರ ಟ್ಯಾಂಕ್‌ ಜಖಂಗೊಂಡು ಅದರಲ್ಲಿದ್ದ ಡೀಸೆಲ್‌ ರಸ್ತೆಯಲ್ಲೆಲ್ಲ ಚೆಲ್ಲಿತ್ತು’ ಎಂದು ಸಂಬಂಧಿ ಮೆಹಬೂಬ್ ತಿಳಿಸಿದರು.

‘ಶೂಟಿಂಗ್‌ ನಡೆಯುತ್ತಿದ್ದ ರಸ್ತೆಗೆ ಹೊಂದಿಕೊಂಡೇ ಶೆಲ್ ಕಂಪನಿಯ ಕಾರ್ಖಾನೆ ಇದೆ. ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಹಾಗೂ ಭಾರಿ ಗಾತ್ರದ ವಿದ್ಯುತ್‌ ತಂತಿಗಳೂ ಇವೆ. ಆಕಸ್ಮಾತ್ ರಸ್ತೆಯಲ್ಲಿ ಚೆಲ್ಲಿದ್ದ ಡೀಸೆಲ್‌ಗೆ ಬೆಂಕಿ ಹೊತ್ತಿಕೊಂಡಿದ್ದರೇ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು’ ಎಂದು ಅವರು ವಿವರಿಸಿದರು.

‘ಪ್ರಕರಣದ ಆರೋಪಿಗಳಿಗೆ ಕಠಿಣಶಿಕ್ಷೆ ಆಗಬೇಕು. ಶೂಟಿಂಗ್ ವೇಳೆ ಸುರಕ್ಷತೆ ಕೈಗೊಳ್ಳುವ ಬಗ್ಗೆ ಕಠಿಣ ನಿಯಮಗಳನ್ನು ರೂಪಿಸಬೇಕು.ನಮ್ಮ ಕುಟುಂಬದವರಿಗೆ ಬಂದ ಸ್ಥಿತಿ ಬೇರೆ ಯಾವ ಕುಟುಂಬದವರಿಗೂ ಬರಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT