ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

62 ವರ್ಷಗಳಿಂದ ರತಿ–ಮನ್ಮಥರನ್ನು ನಗಿಸಲಾಗದೆ ಪೇಚಿಗೆ ಸಿಲುಕುವವರೇ ಹೆಚ್ಚು!

Last Updated 9 ಮಾರ್ಚ್ 2020, 4:49 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಏ ಪೈಲ್ವಾನ್‌ ಕಾಮಣ್ಣ ನಿನ್ನ ರತಿಗೆ ಮುತ್ತು ಕೊಡಲಾ? ನೀ ಇವತ್ತು ನಕ್ಕರೆ ನಿನ್ನ ಮದುವೆಗೆ ಸಿನೆಮಾ ನಟರೆಲ್ಲ ಬರುತ್ತಾರಂತೆ, ಕೇಂದ್ರ ಗೃಹ ಸಚಿವ ಹಾಗೂ ಪ್ರಧಾನಿ ಮೋದಿ ಬರುತ್ತಾರಂತೆ, ಆಗರ ಸ್ವಲ್ಪ ನಗಪಾ, ಅವರು ಬಂದಾಗ ಗಂಟು ಮಾರಿ ಹಾಕಿಕೊಂಡು ಕೂಡಬೇಡ.ಅವರಿಗೆ ಹೇಳಿ ನಿನಗ ಯಡಿಯೂರಪ್ಪ ಸರ್ಕಾರದಾಗ ಇಬ್ಬರಿಗೂ ನೌಕರಿ ಕೊಡಸ್ತೇನಿ.’

‘ಇಂಥಾ ಗಂಡು ಬೀರಿ ಕಟ್ಟಿಕೊಂಡು ಹೆಂಗ್ ಸಂಸಾರ ಮಾಡತೀಯಪಾ... ಮುಸುಡಿ ಮಾರಿಯೊಳಗ ಏನ್ ಚಂದ ಅದಾಳ ಅಂತಾ ಬಗಲಾಗ ಕೂಡಿಸಿಕೊಂಡಿ ..? ಆತನ ಮೀಸಿಗೆ ಮಳ್ಳ ಆಗೀಯೇನು?’

‘ಛೀ! ಕಾಮಣ್ಣ ನಿನ್ನ ರತಿಗೆ ಪಪ್ಪಿ ಕೊಡ್ಲಾ, ಎಂತ ಫಿಗರು ಕಾಮಣ್ಣಂದು, ಕಾಮಣ್ಣ ನಿನ್ನ ಮೀಸೆಯ ಎರಡು ಕಡೆ ಜೋತು ಬೀಳಲಿ ಏನ, ಛೀ ಕಳ್ಳಿ, ಹನಿಮೂನ್ ನಗರದ ದೊಡ್ಡ ಕೆರೆಯೊಳಗ? ಊಟಿಯೊಳಗ? ಬಾರಪ್ಪಾ...ಕಾಮಣ್ಣಂದು ದೊಡ್ಡ ಧಿಮಾಕಾತಪಾ ಒಂದ ಸ್ವಲ್ಪ ನಗಾಕ ಹೆಂಗ ಮಾಡತೀಯಪಾ, ಒಂದು ಚೂರ ನಗು, ನಿನಗ ಬರ ಬಹುಮಾನದಾಗ ಇಬ್ಬರು ಬೈಟು ಮಾಡನ...’

–ಹೀಗೆ ಹತ್ತು ಹಲವು ಸಂಭಾಷಣೆಗಳು, ದ್ವಂದಾರ್ಥದ ಮಾತುಗಳು...ಆದರೆ ರತಿ–ಕಾಮಣ್ಣರು ಮಾತ್ರ ನಗುವುದಿಲ್ಲ. ಇವೆಲ್ಲ ಕಾಣುವುದು ಇಲ್ಲಿ ಪ್ರತಿವರ್ಷ ಆಯೋಜಿಸುವ ಜೀವಂತ ರತಿ ಕಾಮಣ್ಣರ ನಗಿಸುವ ಸ್ಪರ್ಧೆಯಲ್ಲಿ ಕೇಳಿ ಬರುತ್ತವೆ.

ವಯೋವೃದ್ಧರಿಂದ ಹಿಡಿದು ಪ್ರೇಕ್ಷಕರು ಸಾಲುಗಟ್ಟಿ ನಿಂತು ಜೀವಂತ ರತಿ ಕಾಮಣ್ಣನ್ನು ವೀಕ್ಷಿಸಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ.ಈ ಭಾಗದ ಜನರಿಗೆ ಹೋಳಿ ಕಾಮಣ್ಣನ ಗುಂಗು ಹಿಡಿದು ಬಿಟ್ಟಿದೆ.

ಇಲ್ಲಿ ನಗಿಸಲು ಹೋಗಿ ಜಿದ್ದು ಕಟ್ಟಿ ಸೋತು ಸುಣ್ಣವಾಗಿ ಹೋದ ಪ್ರಸಂಗಳೇ ಹೆಚ್ಚು. ಮಕ್ಕಳು, ಮಹಿಳೆಯರು ತಾಸುಗಟ್ಟಲೆ ಕುಳಿತು ಇದನ್ನು ನೋಡುತ್ತಾರೆ. ವಯಸ್ಸು, ಜಾತಿ, ಭೇದ ಭಾವ, ಹಿಂದೂ ಮುಸ್ಲಿಂ ಎನ್ನದೇ ಸರ್ವರೂ ಪಾಲ್ಗೊಳ್ಳುತ್ತಾರೆ.

ಹಿನ್ನೆಲೆ: ಜೀವಂತ ಕಾಮ ರತಿ ಕೂಡಿಸುವುವುದು 1958 ರಿಂದ ಪ್ರಾರಂಭವಾಗಿದ್ದು ಕಳೆದ 62 ವರ್ಷದಿಂದ ನಗಿಸುವುದು ನಡೆಯುತ್ತಿದೆ. ಈವರೆಗೂ ನಗಿಸಿದ ಉದಾಹರಣೆಗಳಿಲ್ಲ. ಕಳೆದ 28 ವರ್ಷಗಳಿಂದ ಕಾಮನ ವೇಷವನ್ನು 49 ವರ್ಷದ ಗದಿಗೆಪ್ಪ ರೊಡ್ಡನವರ ಹಾಗೂ ರತಿ ವೇಷವನ್ನು 38 ವರ್ಷದ ಕುಮಾರ ಹಡಪದ ‘ಕಾಮರತಿ’ಯಾಗಿ ಕೂಡುತ್ತಾರೆ.‘ಬಣ್ಣ ಹಚ್ಚುವಾಗ ಕೀಟಲೆ ಮಾಡುತ್ತಾರೆ, ಇಬ್ಬರು ಹಾಸ್ಯ ಮಾಡುತ್ತಲೇ ಇರುತ್ತಾರೆ. ಜೀವಂತ ಕಾಮರತಿಯಾಗಿ ಕುಳಿತ ಮೇಲೆ ಗಪ್‌ಚುಪ್‌. ಯಾರಪ್ಪ ಬಂದರೂ ನಗುವುದಿಲ್ಲ. ಜೀವಂತ ಕಾಮರತಿಯಾಗಿ ಕೂಡುವಾಗ ಇವರ ಶಿಸ್ತು, ಸಂಯಮ, ಗಾಂಭೀರ್ಯ, ಕಣ್ಣುಪಿಳುಕಿಸುವ ನೋಟ, ಕುಳಿತುಕೊಳ್ಳುವ ಭಂಗಿ, ಜನರಿಗೆ ಅಚ್ಚರಿ ಮೂಡಿಸಿದೆ’ ಎನ್ನುತ್ತಾರೆ ಕಪ್ಪತಪ್ಪ ಚಕ್ರಸಾಲಿ ಹಾಗೂ ಸಿ.ಆರ್‌.ಅಸುಂಡಿ.

‘ಜೀವಂತ ಕಾಮ ರತಿ ಪ್ರಸಂಗ ಮುಗಿದ ಮರುದಿನ ಗೆಳೆಯರು, ಮಹಿಳೆಯರು ಜನರು ಹೆಂಗ ಮನಸ್ಸು ಗಟ್ಟಿ ಮಾಡಿ ಕೂಡುತ್ತೀರಿ ಎಂದು ಅವರ ಪತ್ನಿಯರೇ ಮನೆಯಲ್ಲಿ ಪ್ರಶ್ನಿಸುತ್ತಾರೆ. ಅದು ನಿರಂತರ ಸಾಧನೆ, ಆತ್ಮವಿಶ್ವಾಸ, ಗುರು ಹಿರಿಯರ ಮಾರ್ಗದರ್ಶನ, ದೇವರ ದಯೆ’ ಎನ್ನುತ್ತಾರೆ ಜೀವಂತ ರತಿ ಕಾಮರಾದ ಗದಿಗೆಪ್ಪ ರೊಡ್ಡನವರ ಮತ್ತು ಕುಮಾರ ಹಡಪದ.

‘ಈ ಇಬ್ಬರು ಕಲಾವಿದರು ಯಾವ ಸಂಭಾವನೆಯನ್ನು ಪಡೆಯುವುದಿಲ್ಲ. ತಮ್ಮ ಕಲೆಯನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಹೆಚ್ಚು ಹೆಚ್ಚು ಪ್ರದರ್ಶನ ಮಾಡಿ ರಾಣೆಬೆನ್ನೂರಿಗೆ ಕೀರ್ತಿ ತಂದಿದ್ದಾರೆ’ ಎನ್ನುತ್ತಾರೆ ಸಮಿತಿ ಸದಸ್ಯ ಮಲ್ಲಿಕಾರ್ಜುನ ಪೂಜಾರ ಹಾಗೂ ಚಂದ್ರಶೇಖರ ರೊಡ್ಡನವರ.

‘ಈ ಕಲೆ ರಾಣೆಬೆನ್ನೂರಿಗೆ ಸೀಮಿತವಾಗಬಾರದು. ನಾಡಿನುದ್ದಕ್ಕೂ ಪ್ರಚಾರಗೊಳಿಸಬೇಕು. ಕಳೆದ 63 ವರ್ಷಗಳಿಂದ ಜೀವಂತ ರತಿ ಮನ್ಮಥ ಕಾಮಣ್ಣನ ಕಲೆಯನ್ನು ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದ್ದು ಹೆಮ್ಮೆಯ ಸಂಗತಿ. 26 ವರ್ಷಗಳಿಂದ ಜೀವಂತ ರತಿ ಮನ್ಮಥರಾಗಿ ಕುಳಿತುಕೊಳ್ಳುವ ಇಬ್ಬರು ಕಲಾವಿದರಿಗೆ ಸರ್ಕಾರದಿಂದ ಮಾಸಾಶನ ಕೊಡಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎನ್ನುತ್ತಾರೆ ಶಾಸಕ ಅರುಣಕುಮಾರ ಪೂಜಾರ.

ಚಂದ್ರು ರೊಡ್ಡನವರ, ಮಲ್ಲಿಕಾರ್ಜುನ ಪೂಜಾರ, ಎ.ಬಿ. ಪಾಟೀಲ, ಲಿಂಗರಾಜ ನವಲೆ, ಪ್ರಶಾಂತ ಕೊಪ್ಪದ, ದೇವೆಂದ್ರಪ್ಪ, ಅನಿಲ ಸಿದ್ದಾಳಿ, ಬಸವರಾಜ ಮಜ್ಜಗಿ, ರಮೇಶ ಹಿರೇತನದ, ಶಿವಕುಮಾರ, ಸಿದ್ದು ಚಿಕ್ಕಬಿದರಿ, ಮಲ್ಲಿಕಾರ್ಜುನ ಅಂಗಡಿ ಮತ್ತಿತರರು ಈ ಕಾರ್ಯಕ್ರಮ ನಿರ್ವಹಣೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT