ಕೊಡಗಿನ ಪ್ರಳಯಕ್ಕೆ ಅತೀ ಆಸೆಯ ಅಭಿವೃದ್ಧಿಯೇ ಕಾರಣ ಅಂತಾರೆ ತಜ್ಞರು

7

ಕೊಡಗಿನ ಪ್ರಳಯಕ್ಕೆ ಅತೀ ಆಸೆಯ ಅಭಿವೃದ್ಧಿಯೇ ಕಾರಣ ಅಂತಾರೆ ತಜ್ಞರು

Published:
Updated:

ಬೆಂಗಳೂರು: ಕೊಡಗಿನ ಬೆಟ್ಟಗಳನ್ನು ಮಹಾಮಳೆಯೇ ಕರಗಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿರುವ ಈ ಸಮಯದಲ್ಲಿ, ಮಳೆಯ ಹೊರತಾಗಿ ಮತ್ಯಾವ ಅಂಶಗಳು ಈ ದುರಂತಕ್ಕೆ ಕಾರಣವಾಗಿಯೇ ಎಂಬುದನ್ನು ತಿಳಿಸುವ ಪ್ರಯತ್ನವನ್ನು ವಿಜ್ಞಾನಿಗಳು ಮತ್ತು ಹವಾಮಾನ ತಜ್ಞರು ಆರಂಭಿಸಿದ್ದಾರೆ. 

ಕೊಡಗು ಜಿಲ್ಲೆಯಲ್ಲಿ 64 ವರ್ಷಗಳಲ್ಲೆ ಹೆಚ್ಚು ಮಳೆ ಈ ಬಾರಿ ಸುರಿದಿದೆ ಎಂದು ಹವಾಮಾನ ಇಲಾಖೆ ಹೇಳುತ್ತಿದೆ. ಇದೆ ವೇಳೆ, ನಾಲ್ಕು ದಶಕಗಳ ಕಾಲಾವಧಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲೆಯಲ್ಲಿ ನಡೆದ ಅರಣ್ಯನಾಶವೇ ಹೆಚ್ಚಿನ ಪ್ರಮಾಣದ ಹಾನಿಗೆ ಕಾರಣವೆಂದು ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ವಿಜ್ಞಾನಿಗಳು ಆರೋಪಿಸಿದ್ದಾರೆ. 

ಈ ಆರೋಪಕ್ಕೆ ಅವರ ಬಳಿ ಐಐಎಸ್ಸಿಯ ‘ಸೆಂಟರ್‌ ಫಾರ್‌ ಎಕೊಲಜಿಕಲ್‌ ಸೈನ್ಸ್‌ಸ್‌’(ಸಿಇಎಸ್‌) ವಿಭಾಗವು ಸಿದ್ಧಪಡಿಸಿದ ವರದಿಯಿದೆ. ಕೊಡಗು, ಮುಖ್ಯವಾಗಿ ಕಾವೇರಿಯ ಉಪನದಿ ಲಕ್ಷ್ಮಣತೀರ್ಥ ತೀರದ ವಿಸ್ತೃತ ವಿವರಣೆ ಈ ವರದಿಯಲ್ಲಿದೆ. ತ್ವರಿತವಾಗಿ ಅರಣ್ಯನಾಶ ಮತ್ತು ಏಕರೀತಿಯ ಬೆಳೆಗಳನ್ನು ಬೆಳೆಯುವ ಪ್ರವೃತ್ತಿಯೇ ಭೂಕುಸಿತ ಮತ್ತು ಪ್ರವಾಹಕ್ಕೆ ಮುಖ್ಯಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

‘ನಾಲ್ಕು ದಶಕಗಳ ಹಿಂದೆ ಕೊಡಗಿನ ಶೇ 50ರಷ್ಟು ಪ್ರದೇಶ ದಟ್ಟಡವಿಯಿಂದ ಕೂಡಿತ್ತು. ಅದೀಗ ಶೇ 17–18ಕ್ಕೆ ಇಳಿಕೆಯಾಗಿದೆ. ರೈಲು ಹಳಿ ಹಾಕಲು, ರಸ್ತೆ ನಿರ್ಮಿಸಲು, ವಿದ್ಯುತ್‌ ಮಾರ್ಗಗಳನ್ನು ಜೋಡಿಸಲು ಬೃಹತ್‌ಮಟ್ಟದಲ್ಲಿ ಅರಣ್ಯವನ್ನು ಕಡಿಯಲಾಯಿತು. ನಲ್ವತ್ತು ವರ್ಷಗಳಲ್ಲಿ ಮಾಡಿದ ದುಶ್ಕಾರ್ಯದ ಫಲಿತಾಂಶವನ್ನು ನಾವೀಗ ಪ್ರವಾಹದ ರೂಪದಲ್ಲಿ ಕಾಣುತ್ತಿದ್ದೇವೆ’ ಎನ್ನುತ್ತಾರೆ ಸಿಇಎಸ್‌ ಅಧ್ಯಾಪಕ ಡಾ.ಟಿ.ವಿ.ರಾಮಚಂದ್ರ.  

‘ಅರಣ್ಯವು ಭೂಮಿಯ ಮೇಲ್ಪದರ ಮಣ್ಣನ್ನು ಹಿಡಿದಿಟ್ಟುಕೊಳ್ಳುವುದರ ಜತೆಗೆ ಮಳೆನೀರನ್ನು ಹಿಡಿದಿಟ್ಟುಕೊಂಡು, ಕ್ರಮೇಣ ಹರಿಯಬಿಡುತ್ತದೆ. ಈಗ ಅರಣ್ಯವೇ ನಾಶವಾಗಿರುವುದರಿಂದ ಸಣ್ಣಮಳೆಗೂ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ’ ಎಂದು ಅವರು ತಿಳಿಸಿದರು. 

‘ಮಣ್ಣಿನ ಸವಕಳಿಯಿಂದ ಲಕ್ಷ್ಮಣತೀರ್ಥ ಮತ್ತು ಕಾವೇರಿ ನದಿಗಳಲ್ಲಿ ಕೆಸರಿನ ನೀರು ಹರಿಯುತ್ತಿದೆ. ರಸ್ತೆ ನಿರ್ಮಾಣ, ಕೃಷಿ ಮತ್ತು ಇತರೆ ಚಟುವಟಿಕೆಗಳಿಂದ ಎಲ್ಲೆಲ್ಲಿ ಹೆಚ್ಚು ಅರಣ್ಯನಾಶ ಆಗಿದಿಯೋ, ಆ ಪ್ರದೇಶಗಳಲ್ಲಿಯೇ ಹೆಚ್ಚು ಭೂಕುಸಿತ ಉಂಟಾಗಿದೆ’ ಎಂದು ಅವರು ಕಾರಣ ತಿಳಿಸಿದರು. 

ಸಿಇಎಸ್‌ ವರದಿ ಸಿದ್ಧಪಡಿಸಲು ರಿಮೋಟ್‌ ಸೆನ್ಸಿಂಗ್‌ ಇಮೇಜಸ್‌ ಮತ್ತು ಜಿಯೊಗ್ರಾಫಿಕ್‌ ಇನ್‌ಫಾರ್ಮೆಷನ್ಸ್‌ ಸಿಸ್ಟಮ್ಸ್‌ ಬಳಸಿ ಸರ್ವೆ ಮಾಡಿದಾಗ, ‘ಲಕ್ಷ್ಮಣತೀರ್ಥ ತೀರದ ಉದ್ದಕ್ಕೂ ಇರುವ ಶೇ.62ರಷ್ಟು ಭೂಪ್ರದೇಶ ಕೃಷಿ ಮತ್ತು ತೋಟಗಾರಿಕೆಗೆ ಬಳಕೆಯಾಗಿದೆ. ಇದರಿಂದ ಮಳೆನೀರಿನ ಸರಾಗ ಹರಿವಿಗೆ ತೊಡಕು ಎದುರಾಗಿರುವ ಅಂಶ ತಿಳಿದಿದೆ. 

‘ಬೇರುಗಳು ಮಣ್ಣನ್ನು ಬಂಧಿಸುತ್ತವೆ’
‘ಅರಣ್ಯವು ಮಣ್ಣನ್ನು ಹಿಡಿದಿಟ್ಟುಕೊಂಡು, ನೀರಿನ ಹರಿವಿಗೆ ಹರಿದುಹೋಗದಂತೆ ತಡೆಯುತ್ತದೆ. ಮಳೆನೀರು ಭೂಮಿಯಲ್ಲಿ ಇಂಗುವಂತೆ ಮಾಡುತ್ತದೆ. ಕೃಷಿ ಮತ್ತು ಪ್ಲಾಂಟೇಷನ್‌ಗಳು ಹೆಚ್ಚಾದರೆ, ಮಣ್ಣು ಸಡಿಲಗೊಂಡು ಪ್ರವಾಹ ಮತ್ತು ಭೂಕುಸಿತದಂತಹ ದುರ್ಘಟನೆಗಳು ಜರುಗುತ್ತವೆ. ಸರ್ಕಾರವು ಅರಣ್ಯ ಪ್ರದೇಶಗಳಲ್ಲಿ ಬೃಹತ್‌ ಯೋಜನೆಗಳನ್ನು ಕೈಗೊಳ್ಳಬಾರದು. ಆಗ ಮಾತ್ರ ಇಂತಹ ವಿಕೋಪಗಳನ್ನು ತಡೆಯಬಹುದು’ ಎಂಬುದು ಡಾ.ಟಿ.ವಿ.ರಾಮಚಂದ್ರರ ಸಲಹೆ. 

‘ಕೊಡಗಿನಲ್ಲಿ 1965ರಲ್ಲಿ ಅತಿಹೆಚ್ಚು ಮಳೆಯ ಪ್ರಮಾಣ ದಾಖಲಾಗಿತ್ತು. ಆ ವರ್ಷದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಶೇ.149ರಷ್ಟು ಹೆಚ್ಚು ಮಳೆ ಸುರಿದಿತ್ತು. ಈ ವರ್ಷ ಸಾಮಾನ್ಯಕ್ಕಿಂತ ಶೇ.103ರಷ್ಟು ಹೆಚ್ಚು ಮಳೆ ಬಿದ್ದಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸ ರೆಡ್ಡಿ ತಿಳಿಸಿದರು. 


**
ಕೊಡಗಿನಲ್ಲಿ ಆಗಸ್ಟ್‌ 1ರಿಂದ 20ರವರೆಗೆ ಸುರಿದ ಮಳೆ (ಆವರಣದಲ್ಲಿರುವುದು ಹೆಚ್ಚಳ ಪ್ರಮಾಣ)

ಸೋಮವಾರಪೇಟೆ : 725 ಮಿ.ಮೀ. (ಶೇ.78)

ಮಡಿಕೇರಿ: 1,241 ಮಿ.ಮೀ. (ಶೇ.85)

ವಿರಾಜಪೇಟೆ: 713 ಮಿ.ಮೀ. (ಶೇ.133)
**
ಕೊಡಗಿನಲ್ಲಿನ ಭೂ ಬಳಕೆಯ ಪ್ರಮಾಣ

           ಪ್ರದೇಶ  ಶೇಕಡವಾರು ಪ್ರಮಾಣ
ನಿತ್ಯಹರಿದ್ವರ್ಣ ಕಾಡು 2.26
ಒಣ ನೆಲದ ಎಲೆ ಉದುರುವ ಕಾಡು 7.59
ತೇವ ನೆಲದ ಎಲೆ ಉದುರುವ ಕಾಡು 4.55
ಕೃಷಿ ಬಳಕೆ 52.44
ಜಲಮೂಲಗಳು 0.64
ವಸತಿ ಪ್ರದೇಶ 0.71
ಬರಡು ನೆಲ 6.16
ಕಾಫಿ ತೋಟಗಳು 19.50
ಅರಣ್ಯೀಕರಣಗೊಂಡ ಪ್ರದೇಶ 6.17

 

 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !