ಶನಿವಾರ, ಜನವರಿ 25, 2020
22 °C
ಆರೋಪಿ ವಶಕ್ಕೆ ಒಪ್ಪಿಸಲು ಪಟ್ಟು ಹಿಡಿದ ಜನರು

ಆಡಿಸುತ್ತೇನೆಂದು ಕರೆದೊಯ್ದು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ತಾಲ್ಲೂಕಿನ ಗ್ರಾಮವೊಂದರಲ್ಲಿ, ಪಕ್ಕದ ಮನೆಯ 7 ವರ್ಷದ ಬಾಲಕಿಯನ್ನು ಆಡಿಸುತ್ತೇನೆಂದು ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಸುನೀಲ ಬಾಳನಾಯ್ಕ (26) ಬಂಧಿತ. ಆತನನ್ನು 4ನೇ ಜೆಎಂಎಫ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಆರೋಪಿಗೆ ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು.

‘ಬುಧವಾರ ಸಂಜೆ 5ರ ಸುಮಾರಿಗೆ ಬಾಲಕಿಯನ್ನು ಆಡಿಸುತ್ತೇನೆಂದು ಆಕೆಯ ತಂದೆ ಹಾಗೂ ತಾಯಿಗೆ ನಂಬಿಸಿ, ಕರೆದುಕೊಂಡು ಹೋಗಿದ್ದಾನೆ. ಹೊಲದ ಮನೆಯಲ್ಲಿ ಅತ್ಯಾಚಾರ ನಡೆಸಿದ್ದಾನೆ. ಬಹಳ ಸಮಯದವರೆಗೂ ಬರಲಿಲ್ಲವಾದ್ದರಿಂದ ಸಂಶಯಗೊಂಡ ಬಾಲಕಿಯ ತಂದೆ ಹೊಲಕ್ಕೆ ಹೋಗಿ ನೋಡಿದಾಗ, ಕೃತ್ಯ ನಡೆದಿರುವುದು ಗೊತ್ತಾಗಿದೆ. ಪೊಲೀಸರಿಗೆ ಮಾಹಿತಿ ನೀಡಿ, ಚಿಕಿತ್ಸೆಗಾಗಿ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿಯ ತಂದೆ ಪ್ರಕರಣ ಮುಚ್ಚಿ ಹಾಕಲು ಬಹಳ ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ. ಇನ್‌ಸ್ಪೆಕ್ಟರ್‌ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿ ಆರೋಪಿಯನ್ನು ಹಲಗತಾ ಕ್ರಾಸ್‌ ಬಳಿ ಬಂಧಿಸಿದ್ದಾರೆ.

ನ್ಯಾಯಾಲಯ ಆವರಣದಲ್ಲೇ ಥಳಿತ: ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಹೋಗುವಾಗ ಆರೋಪಿಯನ್ನು ಶ್ರೀರಾಮಸೇನೆ ಹಿಂದೂಸ್ತಾನ ಸಂಘಟನೆ ಕಾರ್ಯಕರ್ತರು ಥಳಿಸಿದರು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಆರೋಪಿ ಕರೆದೊಯ್ಯುತ್ತಿದ್ದ ಪೊಲೀಸ್ ವಾಹನವನ್ನೂ ಕಾರ್ಯಕರ್ತರು ತಡೆಯಲು ಯತ್ನಿಸಿದರು ಹಾಗೂ ಹಿಂಬಾಲಿಸಿದರು. ಅವರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು. ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.

ಬಳಿಕ ನ್ಯಾಯಾಲಯದ ಎದುರಿನ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದ ಕಾರ್ಯಕರ್ತರು, ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದರು.

‘ಅತ್ಯಾಚಾರಿಗಳಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು. ಯಾವುದೇ ಕಾರಣಕ್ಕೂ ಅಂಥವರನ್ನು ಬಿಡಬಾರದು. ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು’ ಎಂದು ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ ಆಗ್ರಹಿಸಿದರು.

ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು