ಭಾನುವಾರ, ಆಗಸ್ಟ್ 14, 2022
27 °C
2009ರಲ್ಲಿ ಮಂಗಳೂರಿನಲ್ಲಿ ನಡೆದ ಪ್ರಕರಣ: ಸಿಸಿಬಿಗೆ ತನಿಖೆ ಹೊಣೆ

ನೌಶಾದ್ ಕೊಲೆ: ರವಿ ಪೂಜಾರಿ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಗಳೂರಿನಲ್ಲಿ 2009ರಲ್ಲಿ ನಡೆದ ಭಟ್ಕಳದ ಯುವ ವಕೀಲ ನೌಶಾದ್‌ ಕಾಸೀಂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು ಭೂಗತ ಪಾತಕಿ ರವಿ ಪೂಜಾರಿಯನ್ನು ವಿಚಾರಣೆ ನಡೆಸಲಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸಿಸಿಬಿಗೆ ವಹಿಸಿದ್ದಾರೆ. ಹೀಗಾಗಿ, ಈ ಪ್ರಕರಣದ ಸಮಗ್ರ ಮಾಹಿತಿಯನ್ನು ಮಂಗಳೂರು ಪೊಲೀಸರು ಸಿಸಿಬಿಗೆ ವರ್ಗಾಯಿಸಿದ್ದಾರೆ.

‘ನೌಶಾದ್‌ ಕೊಲೆ ಪ್ರಕರಣದ ತನಿಖೆಗಾಗಿ ಪೂಜಾರಿಯನ್ನು 10 ದಿನ ಅವಧಿಗೆ ವಶಕ್ಕೆ ಪಡೆಯಲಾಗಿದೆ’ ಎಂದು ಸಿಸಿಬಿ ಜಂಟಿ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ ತಿಳಿಸಿದರು. 2009ರ ಏಪ್ರಿಲ್‌ 9ರಂದು ಮಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ನೌಶಾದ್‌ ಕೊಲೆ ನಡೆದಿತ್ತು.

ಭೂಗತ ಪಾತಕಿ ರಶೀದ್ ಮಲಬಾರಿ ಪರವಾಗಿ ನೌಶಾದ್‌ ವಾದಿಸಿದ್ದರು ಎಂಬ ಕಾರಣಕ್ಕೆ ರವಿ ಪೂಜಾರಿಯ ಆಣತಿಯಂತೆ ಕೊಲೆ ಮಾಡಲಾಗಿತ್ತು ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಒಟ್ಟು 12 ಆರೋಪಿಗಳೆಂದು ಹೆಸರಿಸಲಾಗಿತ್ತು. ಆ ಪೈಕಿ, ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಈ ಏಳು ಮಂದಿಯಲ್ಲಿ ಶಿವಪ್ರಕಾಶ್ ಮತ್ತು ದಿಲ್ಲಿಯ ರವಿ ಶುಕ್ವಾನಿ ಎಂಬಿಬ್ಬರ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿತ್ತು. ಐವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು