ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಿ: ಇಷ್ಟಪಡದಿರಲು ಕಾರಣಗಳೇ ಇಲ್ಲ

Last Updated 25 ನವೆಂಬರ್ 2018, 20:18 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ನಟ ಅಂಬರೀಷ್ ಜೊತೆ ನನಗೆ ಒಂದಿಷ್ಟು ಒಡನಾಟ ಇತ್ತು. ನಾನು ನಿರ್ದೇಶಿಸಿದ ‘ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ’ ಚಿತ್ರವನ್ನು ಅವರಿಗೆ ತೋರಿಸುವ ಆಲೋಚನೆಯಲ್ಲಿ ಇದ್ದೆ. ಆದರೆ ಅದು ಆಗಿರಲಿಲ್ಲ. ಅದಲ್ಲದೆ, ‘ಅಂಬಿ ನಿಂಗೆ ವಯಸ್ಸಾಯ್ತೊ’ ಸಿನಿಮಾದಲ್ಲಿ ನಾನು ಅವರ ಜೊತೆ ಒಂದು ಸಣ್ಣ ಪಾತ್ರ ಮಾಡಿದ್ದೆ. ಅದರ ಚಿತ್ರೀಕರಣದ ವೇಳೆ ಅವರ ಜೊತೆ ಒಂದು ದಿನ ಕಳೆದಿದ್ದೆ.

ಬಹಳ ಲವಲವಿಕೆಯಿಂದ, ಎನರ್ಜೆಟಿಕ್ ಆಗಿ ಇರುತ್ತಿದ್ದ ವ್ಯಕ್ತಿ ಅವರು. ನಾವು ಚಿಕ್ಕವರಿದ್ದಾಗಲೇ ಸೂಪರ್‌ ಸ್ಟಾರ್‌ ಆಗಿದ್ದ ನಟ ಅವರು. ಹಾಗಾಗಿ ಅವರ ಎದುರು ನಟನೆ ಮಾಡುವ ಸಂದರ್ಭ ಬಂದಾದ ನನಗೆ ತುಸು ಕಷ್ಟವೇ ಆಯಿತು. ದೃಶ್ಯಗಳ ಟೇಕ್‌ ಸರಿ ಆಗಲಿಲ್ಲ.

ಆಗ ಅಂಬರೀಷ್ ಅವರು ನನ್ನನ್ನು ಉದ್ದೇಶಿಸಿ ತಮಾಷೆ ಮಾಡಿದ್ದರು. ‘ಡೈರೆಕ್ಟ್ರೇ ಕ್ಯಾಮೆರಾ ಹಿಂದೆ ನಿಂತು ಆ್ಯಕ್ಷನ್ – ಕಟ್ ಹೇಳುವುದಲ್ಲ. ಕ್ಯಾಮೆರಾ ಎದುರು ನಿಂತು ನಟನೆ ಮಾಡಬೇಕು. ನಟರ ಕಷ್ಟ ಏನು ಎಂಬುದು ನಿಮಗೂ ಗೊತ್ತಾಗಬೇಕು. ಮಾಡಿ ಮಾಡಿ, ಆ್ಯಕ್ಟಿಂಗ್ ಮಾಡಿ ಇವಾಗ’ ಎಂದು ನನ್ನನ್ನು ಪ್ರೀತಿಯಿಂದ ರೇಗಿಸುತ್ತಿದ್ದರು.

ಅವರು ಕುಳಿತಿದ್ದಾಗ ನಾನು ನಿಂತುಕೊಂಡೇ ಇರುತ್ತಿದ್ದೆ. ‘ಡೈರೆಕ್ಟ್ರೇ ಕೂತುಕೊಳ್ಳಿ’ ಎನ್ನುತ್ತಿದ್ದರು. ತಮ್ಮ ಸುತ್ತ ಇರುವ ಪ್ರತಿ ವ್ಯಕ್ತಿಯನ್ನೂ ಮಾತನಾಡಿಸುತ್ತ ಇರುತ್ತಿದ್ದರು.

ಅಂಬರೀಷ್ ಅವರು ಬೈಯುತ್ತಾರೆ ಎಂದು ಹಲವರು ಹೇಳುತ್ತಾರೆ. ಆದರೆ ಅವರ ಕಣ್ಣಲ್ಲಿ ಪ್ರೀತಿ ಎಲ್ಲ ಹೊತ್ತಿನಲ್ಲೂ ಕಾಣಿಸುತ್ತಿತ್ತು. ಅವರು ಸಿಟ್ಟಿನಲ್ಲಿ ಬೇರೆಯವರಿಗೆ ನೋವಾಗುವ ರೀತಿಯಲ್ಲಿ ಬೈದವರಲ್ಲ. ಅವರು ಬೈಯದೇ ಇದ್ದರೆ ತಮ್ಮನ್ನು ಹತ್ತಿರದವರೆಂದು ಭಾವಿಸಿಲ್ಲ ಎಂದು ಅವರ ಅಭಿಮಾನಿಗಳು ಅಂದುಕೊಳ್ಳುತ್ತಾರೆ.

ಸಿನಿಮಾ ಜಗತ್ತಿನ ಪ್ರತಿ ನಟನಿಗೂ ಅವನ ಪಾತ್ರಗಳ ಕಾರಣದಿಂದಾಗಿ ಅಭಿಮಾನಿಗಳು ಹುಟ್ಟುತ್ತಾರೆ. ಆದರೆ ಅಂಬರೀಷ್ ಅವರಿಗೆ, ಅವರ ವ್ಯಕ್ತಿತ್ವದ ಕಾರಣದಿಂದಾಗಿ ಅಭಿಮಾನಿಗಳು ಹುಟ್ಟಿಕೊಂಡರು. ಅವರು ಇರುವ ರೀತಿಯೇ ಅಭಿಮಾನಿಗಳನ್ನು ಸೃಷ್ಟಿಸಿತು. ಯಾರ ಮುಲಾಜಿಗೂ ಒಳಗಾಗದೇ ಮಾತನಾಡುವುದು, ಖುಷಿಯಿಂದ ಮಾತನಾಡುವುದು ಅವರು ಮಾತ್ರ ಅನಿಸುತ್ತದೆ. ಅವರ ಸ್ವಭಾವವೇ ಹಾಗಿತ್ತು.

ಯಾರು ಏನೇ ಕೇಳಿದರೂ ಅದಕ್ಕೊಂದು ಮಜವಾದ ಉತ್ತರ ನೀಡುತ್ತಿದ್ದರು. ಹೊಸಬರ ಸಿನಿಮಾ ವಿಚಾರದಲ್ಲಿ ತಮ್ಮ ಆರೋಗ್ಯವನ್ನೂ ಲಕ್ಷಿಸದೇ ಸಹಾಯ ಮಾಡುತ್ತಿದ್ದರು. ಕನ್ನಡ ಚಿತ್ರೋದ್ಯಮದ ಟ್ರಬಲ್‌ ಶೂಟರ್‌ ಕೂಡ ಹೌದು ಅವರು. ಹಾಗಂತ ಸಮಸ್ಯೆಗಳನ್ನು ಪರಿಹರಿಸುವಾಗ ಯಾರ ಪಕ್ಷಪಾತಿಯೂ ಆಗಿರುತ್ತಿರಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಅವರು ಎಲ್ಲರಿಗೂ ಸಹಾಯ ಮಾಡಿದವರು.

ಪ್ರತಿ ವ್ಯಕ್ತಿಯನ್ನೂ ಇಷ್ಟಪಡದವರು ಇರುತ್ತಾರೆ. ಆದರೆ ಅಂಬಿಯನ್ನು ಇಷ್ಟಪಡದವರು ಯಾರೂ ಇರಲಿಲ್ಲ. ಅವರನ್ನು ಇಷ್ಟಪಡದೆ ಇರಲು ಕಾರಣಗಳೇ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT