ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ಭಾಗದ ರೈತರೇ ಇಲ್ಲಿ ಟಾರ್ಗೆಟ್!

ಮಾರುಕಟ್ಟೆ ವಂಚನೆಯ ನಾನಾ ಮುಖಗಳು
Last Updated 27 ಏಪ್ರಿಲ್ 2019, 20:27 IST
ಅಕ್ಷರ ಗಾತ್ರ

ರಾಮನಗರ: ಸ್ವಲ್ಪ ಕಣ್ಣು ಮುಚ್ಚಿದರೂ ಕೆ.ಜಿ.ಗಟ್ಟಲೆ ಗೂಡು ಮಾಯ. ಪ್ರಶ್ನಿಸಲು ಹೋದರೆ ಹಲ್ಲೆ. ನ್ಯಾಯವಾಗಿ ಸಿಗಬೇಕಾದ ಹಣಕ್ಕೂ ಕಮಿಷನ್‌..,

ಇದು ಏಷ್ಯಾದ ಅತಿದೊಡ್ಡ ರೇಷ್ಮೆಗೂಡು ಮಾರಾಟ ಕೇಂದ್ರವಾದ ರಾಮನಗರ ರೇಷ್ಮೆಗೂಡು ಮಾರುಕಟ್ಟೆಯ ಕರಾಳ ಮುಖದ ಚಿತ್ರಣ. ಇಲ್ಲಿ ರೈತರಿಗಿಂತ ದಲ್ಲಾಳಿಗಳ ದರ್ಬಾರೇ ಜಾಸ್ತಿ. ಗೂಡು ಮಾರಾಟ ಮಾಡಲು ಬಂದವರ ಮೂಳೆ ಮುರಿದು ಕಳುಹಿಸಿದ ಉದಾಹರಣೆಗಳು ಸಾಕಷ್ಟಿವೆ.

ದಕ್ಷಿಣ ಕರ್ನಾಟಕದ ಜಿಲ್ಲೆಗಳ ಜೊತೆಗೆ ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ಇಲ್ಲಿಗೆ ರೈತರು ಗೂಡು ಹೊತ್ತು ತರುತ್ತಾರೆ. ಹೀಗೆ ಹೊರ ಊರುಗಳಿಂದ ಬಂದವರೇ ಹೆಚ್ಚಾಗಿ ದಲ್ಲಾಳಿಗಳ ಟಾರ್ಗೆಟ್‌ ಆಗುತ್ತಾರೆ. ಮಾರುಕಟ್ಟೆಯ ಹೊರಗೇ ಅವರನ್ನು ಸಂಪರ್ಕಿಸಿ ಕಡಿಮೆ ಮೊತ್ತಕ್ಕೆ ಗೂಡು ಖರೀದಿಸುವ ಪ್ರಯತ್ನಗಳೂ ನಡೆಯುತ್ತವೆ.

ಮಾರುಕಟ್ಟೆಗೆ ರಾತ್ರಿಯೇ ಗೂಡು ತರುವ ರೈತರು ಇಡೀ ರಾತ್ರಿ ಮೈಯೆಲ್ಲ ಕಣ್ಣಾಗಿ ಕಾಯಬೇಕು. ಕಸ ಗುಡಿಸುವ ನೆಪದಲ್ಲಿ, ಸಹಾಯ ಮಾಡುವ ಸೋಗಿನಲ್ಲಿ ಅಪರಿಚಿತರು ಗೂಡು ತುಂಬಿಕೊಂಡು ಪರಾರಿ ಆಗುತ್ತಾರೆ.

ಆನ್‌ಲೈನ್‌ ಹರಾಜು ಇದ್ದರೂ ಕೂಗಿದ್ದಕ್ಕಿಂತ ಕಡಿಮೆ ಮೊತ್ತಕ್ಕೆ ಗೂಡು ನೀಡುವಂತೆ ರೈತರನ್ನು ಕೆಲವು ರೀಲರ್‌ಗಳು ಒತ್ತಾಯಿಸುತ್ತಾರೆ. ನಿಗದಿಗಿಂತ ಕಡಿಮೆ ಹಣ ನೀಡುತ್ತಾರೆ. ಸಂಜೆವರೆಗೂ ಹಣ ನೀಡದೇ ಸತಾಯಿಸುವುದು, ಹಣಕ್ಕೆ ಬದಲಾಗಿ ಚೆಕ್‌ ನೀಡುವುದು, ಆ ಚೆಕ್‌ ಬೌನ್ಸ್‌ ಆಗಿ ರೈತರು ಅಧಿಕಾರಿಗಳ ಬಳಿ ಅಲೆದಾಡುವುದು ಸಾಮಾನ್ಯ. ಆರ್‌ಟಿಜಿಎಸ್‌ ಮೂಲಕ ರೈತರ ಖಾತೆಗೇ ಹಣ ವರ್ಗವಣೆ ವ್ಯವಸ್ಥೆ ಜಾರಿಗೆ ಬಂದಿಲ್ಲ.

‘ಮಾರುಕಟ್ಟೆಯಲ್ಲಿ ಮೂವತ್ತಕ್ಕೂ ಹೆಚ್ಚು ಸಿಸಿಟಿವಿಗಳು ಇದ್ದು, ಆಗಾಗ್ಗೆ ಕೆಟ್ಟು ನಿಲ್ಲುವುದು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತದೆ. ಮಾರಾಟದ ದಾಖಲೆ ನೀಡದೆಯೇ ಹೊರಗೆ ಗೂಡು ಕೊಂಡೊ ಯ್ದರು ಪ್ರಶ್ನಿಸುವುದಿಲ್ಲ. ಗೂಡು ಕಳ್ಳತನ ಮಾಡಿ ಸಿಕ್ಕಿಬಿದ್ದವರ ಮೇಲೆ, ರೈತರ ಮೇಲೆ ಹಲ್ಲೆ ನಡೆಸಿ ದವರ ಮೇಲೆ ಕಾನೂನು ಕ್ರಮಕ್ಕೆ ಹಿಂದೇಟು ಹಾಕಲಾಗುತ್ತಿದೆ. ಮಾರುಕಟ್ಟೆಯಲ್ಲಿ ಒಂದು ಸಾವಿರ ಅಧಿಕೃತ ರೀಲರ್‌ಗಳಿದ್ದು, ಒಳಗೆ ಒಂದೂವರೆ ಸಾವಿರ ಮಂದಿ ಬಂದು ಹೋಗುತ್ತಾರೆ. ಅಧಿಕೃತ ದಲ್ಲಾಳಿ ಅಲ್ಲದವರ ಪ್ರವೇಶ ನಿರ್ಬಂಧಿಸಬೇಕು ಎಂದು ರೀಲರ್‌ಗಳ ಸಂಘವೂ ಒತ್ತಾಯಿಸುತ್ತಾ ಬಂದಿದೆ. ಆದರೆ ಲಾಬಿ–ಲಾಭದ ಕಾರಣಕ್ಕೆ ಅಧಿಕಾರಿಗಳು ಇದಕ್ಕೆ ಮಣೆ ಹಾಕುತ್ತಿಲ್ಲ ಎಂಬುದು ರೈತರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT