ಸೋಮವಾರ, ಜನವರಿ 20, 2020
26 °C
ಕರಾವಳಿಯಲ್ಲಿ ಸಾಗಲಿದೆ ವೈಜ್ಞಾನಿಕ ಮಾಹಿತಿ ಅಭಿಯಾನ: ಕಾರವಾರದಲ್ಲಿ ನಾಳೆ ಚಾಲನೆ

ಗ್ರಹಣ: ‘ಖಗ್ರಾಸದಿಂದ ಕಂಕಣದವರೆಗೆ’

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

 ಕಾರವಾರ: ಇದೇ 26ರಂದು ಆಗಲಿರುವ ‘ಕಂಕಣ ಸೂರ್ಯಗ್ರಹಣ’ವು ರಾಜ್ಯದ ಜನರಿಗೆ ಅತ್ಯಂತ ಅಪರೂಪದ ಸಂಗತಿ ಆಗಿರಲಿದೆ. ಚಂದ್ರನ ಗಾಢವಾದ ನೆರಳು 39 ವರ್ಷಗಳ ಬಳಿಕ ರಾಜ್ಯದ ಕರಾವಳಿ ಮೇಲೆ ಬೀಳಲಿದೆ.

ವರ್ಷದ ಕೊನೆಯ ಈ ಅಚ್ಚರಿಯ ಬಗ್ಗೆ ಜನರಲ್ಲಿ ವೈಜ್ಞಾನಿಕವಾದ ಅರಿವು ಮೂಡಿಸಲು ‘ಖಗ್ರಾಸದಿಂದ ಕಂಕಣದವರೆಗೆ’ ಎಂಬ ಅಭಿಯಾನಕ್ಕೆ 22ರಂದು ನಗರದಲ್ಲಿ ಚಾಲನೆ ಸಿಗಲಿದೆ.

ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಶಿವಮೊಗ್ಗದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಜ್ಯದ ಕರಾವಳಿಯುದ್ದಕ್ಕೂ ಈ ಅಭಿಯಾನ ಹಮ್ಮಿಕೊಂಡಿವೆ. 26ರಂದು ಮಂಗಳೂರಿನಲ್ಲಿ ಕೊನೆಗೊಳ್ಳಲಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಹವ್ಯಾಸಿ ಖಗೋಳ ತಜ್ಞ ಮಂಜುನಾಥ ಜೇಡಿಕುಣಿ, ‘1980ರಲ್ಲಿ ಆಗಿದ್ದ ಖಗ್ರಾಸ ಸೂರ್ಯಗ್ರಹಣವು ಅಂಕೋಲಾದಲ್ಲಿ 2.50 ನಿಮಿಷ ಸಂಪೂರ್ಣವಾಗಿ ಗೋಚರಿಸಿತ್ತು. 2010ರ ಕಂಕಣ ಸೂರ್ಯಗ್ರಹಣವು ತಮಿಳುನಾಡಿನ ರಾಮೇಶ್ವರದಲ್ಲಿ ಕಾಣಿಸಿತ್ತು. ಆದರೆ, ನಮ್ಮ ರಾಜ್ಯದಲ್ಲಿ ಕಂಡಿರಲಿಲ್ಲ’ ಎಂದು ಅವರು ತಿಳಿಸಿದರು.

‘ಡಿ.26ರಂದು ಬೆಳಿಗ್ಗೆ 8.04ರಿಂದ ಆರಂಭವಾಗಲಿರುವ ಕಂಕಣ ಗ್ರಹಣವು, ಬೆಳಿಗ್ಗೆ 11.04ಕ್ಕೆ ಸಮಾಪ್ತಿಯಾಗಲಿದೆ. ಮಂಗಳೂರಿನಲ್ಲಿ 3.12 ನಿಮಿಷ ಶೇ 93.07ರಷ್ಟು ಪ್ರಮಾಣದಲ್ಲಿ ಗೋಚರಿಸಲಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ಪರಿಪೂರ್ಣವಾಗಿ ನೋಡಬಹುದು’ ಎಂದು ಮಾಹಿತಿ ನೀಡಿದರು.

ರಾಜ್ಯದ ವಿವಿಧೆಡೆ ಗ್ರಹಣದ ಪ್ರಮಾಣ

ನಗರ;ಶೇಕಡಾವಾರು

ಮಂಗಳೂರು;93.04

ಶಿವಮೊಗ್ಗ;89.96

ಬೆಂಗಳೂರು;89.54

ಹುಬ್ಬಳ್ಳಿ;86.24

ವಿಜಯಪುರ;80.64

ಬೀದರ್;74.40

45 ವರ್ಷ -ರಾಜ್ಯದಲ್ಲಿ ಕಂಕಣ ಸೂರ್ಯಗ್ರಹಣ ನೋಡಲು 2064ರ ಫೆ.17ರವರೆಗೆ ಕಾಯಬೇಕು
149 ವರ್ಷ -ಸಂಪೂರ್ಣ ಸೂರ್ಯಗ್ರಹಣ ನೋಡಲು 2168ರ ಜುಲೈ 5ರ ವರೆಗೆ ಕಾಯಬೇಕು

***

ಪರಿಷತ್ತು ವತಿಯಿಂದ ಇದೇ 26ರಂದು ರಾಜ್ಯಾದ್ಯಂತ ‘ಸೂರ್ಯೋತ್ಸವ’ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಸುರಕ್ಷಿತ ಉಪಕರಣ ಮೂಲಕ ಗ್ರಹಣ ವೀಕ್ಷಿಸಿ
-ಗಿರೀಶ ಕಡ್ಲೇವಾಡ, ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

ಪ್ರತಿಕ್ರಿಯಿಸಿ (+)