ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿನ ದಿಬ್ಬಗಳ ಸೃಷ್ಟಿಸಿದ ಮಲಪ್ರಭೆ

ಗಣಿ– ಭೂವಿಜ್ಞಾನ ಇಲಾಖೆಯಿಂದ ಸಮೀಕ್ಷೆಗೆ ತಂಡ ರಚನೆ lಅಧಿಕಾರಿಗಳಿಗೇ ಅಚ್ಚರಿ
Last Updated 22 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬಾಗಲಕೋಟೆ: ಮಲಪ್ರಭಾ ಮಹಾ ಪೂರದಿಂದ ಬಾದಾಮಿ ತಾಲ್ಲೂಕಿನಲ್ಲಿ ನದಿ ಪಾತ್ರದ ಆಸುಪಾಸಿನ100 ಮೀಟರ್‌ ವ್ಯಾಪ್ತಿಯಲ್ಲಿ ಹೊಸ ದಾಗಿ ಮರಳಿನ ದಿಬ್ಬಗಳೇ ಸೃಷ್ಟಿಯಾಗಿವೆ.ನದಿಯ ಒಡಲಲ್ಲಿರುತ್ತಿದ್ದ ಮರಳು ಈಗ ಎರಡೂ ದಂಡೆ ಹಾಗೂ ಸುತ್ತಲಿನ ಹೊಲಗಳಿಗೆ ವ್ಯಾಪಿಸಿದೆ.

ಪ್ರವಾಹದ ಆರ್ಭಟಕ್ಕೆ ನದಿ ಆಸುಪಾಸಿನ ಹೊಲಗಳಲ್ಲಿ ಕೆಲವು ಕಡೆ ದೊಡ್ಡ ಕೊರಕಲು ಸೃಷ್ಟಿಯಾಗಿವೆ. ಎಕರೆಗಟ್ಟಲೇ ವಿಸ್ತೀರ್ಣದ ಪ್ರದೇಶದಲ್ಲಿ ಮಣ್ಣು ಕೊಚ್ಚಿ ಹೋಗಿ ಗುಂಡಿಗಳು ಬಿದ್ದು ಅಲ್ಲೆಲ್ಲಾ ಮರಳು ವ್ಯಾಪಿಸಿದೆ. ಕೆಲವು ಕಡೆ ಬೆಳೆದುನಿಂತ ಪೈರು ಮರಳಿನಲ್ಲಿ ಮುಚ್ಚಿ ಹೋಗಿದೆ. ನದಿ ದಂಡೆಯಲ್ಲಿ 1ರಿಂದ 2 ಮೀಟರ್ ಎತ್ತರದಷ್ಟು ಮರಳಿನ ದಿಬ್ಬಗಳು ಕಾಣ ಸಿಕ್ಕರೆ, ಕಪ್ಪು ಮಣ್ಣಿನ ಹೊಲಗಳಲ್ಲಿ ಆಳೆತ್ತರ ಮರಳು ತುಂಬಿಕೊಂಡಿದೆ.

ಅಚ್ಚರಿ: ‘ನದಿಯಿಂದ ಹೊರಗೆ ಬಂದಿರುವ ಮರಳಿನ ಪ್ರಮಾಣ ನೋಡಿ ನನಗೇ ಅಚ್ಚರಿಯಾಗಿದೆ. ನನ್ನ ಸೇವಾ ಅನುಭವದಲ್ಲಿ ಈ ಹಿಂದೆ ಯಾವಾಗಲೂ ಈ ರೀತಿ ಆಗಿರುವುದು ಕಂಡಿಲ್ಲ’ ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮೊಹಮ್ಮದ್ ನಸ್ರುಲ್ಲಾ ಹೇಳುತ್ತಾರೆ.

‘ಹಿಂದೆಲ್ಲಾ ಪ್ರವಾಹ ಇಷ್ಟೊಂದು ಬಿರುಸು ಇರುತ್ತಿರಲಿಲ್ಲ. ಸಾಮಾನ್ಯವಾಗಿ ಮರಳು ಕೊಚ್ಚಿಕೊಂಡು ಹೋಗಿ ಜಲಾಶಯ ಸೇರುತ್ತಿತ್ತು. ಈ ಬಾರಿ ಖಾಸಗಿ ಜಮೀನುಗಳಲ್ಲಿ, ತನ್ನ ಪಾತ್ರದಲ್ಲಿ ಬಿಟ್ಟುಹೋಗಿದೆ. ನೀರಿನ ಹರಿವು ಭಾರಿ ವೇಗ ಪಡೆದು ದಿಢೀರನೆ ಕಡಿಮೆಯಾಗಿದ್ದರಿಂದ ಮರಳಿನ ದಿಬ್ಬಗಳು ಅಲ್ಲಲ್ಲಿ ಸೃಷ್ಟಿಯಾಗಿವೆ’ ಎನ್ನುತ್ತಾರೆ ಅವರು.

ಸಮೀಕ್ಷೆಗೆ ತಂಡ ರಚನೆ: ‘ಮರಳಿನ ಪ್ರಮಾಣದ ಸಮೀಕ್ಷೆಗೆ ಕಳುಹಿಸಿದ್ದ ತಂಡ ಗುರುವಾರ ವರದಿ ಸಲ್ಲಿಸಿದೆ. ಅದನ್ನು ಜಿಲ್ಲಾಧಿಕಾರಿ ನೇತೃತ್ವದ ಕಾರ್ಯಪಡೆ ಮುಂದೆ ಇಡಲಾಗುವುದು. ಮರಳಿನ ವಿಲೇವಾರಿ ಕ್ರಮದ ಬಗ್ಗೆ ಅಲ್ಲಿ ನಿರ್ಧಾರಿಸಲಾಗುವುದು’ ಎಂದು ನಸ್ರುಲ್ಲಾ ತಿಳಿಸಿದರು.

ಸತ್ಯನಾಶ ಆಗೇತ್ರಿ: ಬಾದಾಮಿ ತಾಲ್ಲೂಕಿನ ಆಸಂಗಿ ಬಳಿ ಹೊಲಗಳ ಸೀಳಿಕೊಂಡು ಹೊಸದಾಗಿ ನದಿಯು ಹರಿವಿನ ಪಾತ್ರ ಸೃಷ್ಟಿಸಿದೆ. ಅಲ್ಲೆಲ್ಲಾ ಮರಳು ಹರಡಿದೆ. ‘ನನಗೀಗ 70 ವರ್ಷ. ಹಿಂದೆ ಎರಡು ಬಾರಿ ಹೊಳಿ (ಪ್ರವಾಹ) ಬಂದದ್ದು ನೋಡೀನಿ. ಆಗ ಇಷ್ಟು ನಷ್ಟ ಆಗಿರ್ಲಿಲ್ಲ. ಹೊಲದಾಗ ನೀರು ಮಾತ್ರ ತುಂಬಿಲ್ರಿ, ಮರಳನ್ನು ಹರಡ್ಯಾಳ. ನಮ್ಮನ್ನೆಲ್ಲ ಸತ್ಯನಾಶ ಮಾಡ್ಯಾಳ’ ಎಂದು ಹನುಮಪ್ಪ ಶಿರಬಡಗಿ ಅಳಲು ತೋಡಿಕೊಂಡರು.

ಯುದ್ಧ ಭೂಮಿಯಂತೆ ಗೋಚರ..

ಪ್ರವಾಹದ ವೇಳೆ ಮಲಪ್ರಭಾ ತನ್ನ ಪಾತ್ರದ ಎರಡೂ ಬದಿಯನ್ನು ಹಿಗ್ಗಿಸಿಕೊಂಡಿದ್ದು, ಹುಚ್ಚುಕೋಡಿಗೆ ಸಿಲುಕಿ ಸಾವಿರಾರು ವಿದ್ಯುತ್ ಕಂಬ ಮುರಿದುಬಿದ್ದಿವೆ. ಗಿಡ– ಮರಗಳು ಬೇರು ಸಮೇತ ಕೊಚ್ಚಿ ಹೋಗಿವೆ. ಹೊಲಗಳು, ಬದುಗಳು ಕೊಚ್ಚಿ ಹೋಗಿ ಗುರುತೇ ಸಿಗದಂತಾಗಿವೆ. ಸಾವಿರಾರು ಎಕರೆ ಮೆಕ್ಕೆಜೋಳ, ಬಿಳಿ ಜೋಳ, ಸೂರ್ಯಕಾಂತಿ, ಈರುಳ್ಳಿ, ಹತ್ತಿ, ತೆಂಗು, ಬಾಳೆ, ಕಬ್ಬು ನಾಶವಾಗಿದೆ. ಕಣ್ಣು ಹಾಯಿಸಿದಷ್ಟು ದೂರ ನೆಲಕಚ್ಚಿದ ಆಕೃತಿಗಳೇ ಕಾಣಸಿಗುತ್ತಿವೆ.

ಆಸಂಗಿ, ನಾಗರಾಳ, ಮಂಗಳೂರ, ನಿಂಬಲಗುಂದಿ ಬ್ರಿಜ್ ಕಮ್ ಬ್ಯಾರೇಜ್‌ಗಳು ಹಾನಿಗೀಡಾಗಿವೆ. ಬ್ಯಾರೇಜ್‌ನ ಬೃಹತ್ ಗಾತ್ರದ ಗೇಟ್‌ಗಳು, ಕಬ್ಬಿಣದ ಬೀಮ್‌ಗಳು, ತಡೆಗೋಡೆ, ಸಂಪರ್ಕ ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.ಬೇರೆ ಕಡೆಯಿಂದ ಕೊಚ್ಚಿಕೊಂಡು ಬಂದ ಮರದ ಬೊಡ್ಡೆಗಳು, ಜಾಲಿ ಗಿಡಗಳು ನದಿ ಪಾತ್ರದಲ್ಲಿ ಹರಡಿದ್ದು, ಪ್ರವಾಹದ ಭೀಕರತೆಯನ್ನು ಬಿಂಬಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT