ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ನೆರವು!

ಗ್ರಾಮೀಣ ಪ್ರದೇಶಗಳ ಕೃಷಿ ಕಾರ್ಮಿಕ ಮಹಿಳೆಯರ ಸ್ವಾವಲಂಬನೆಗೆ ಕೈಜೋಡಿಸಿದ ಜ್ಞಾನ ಶಾಲೆ
Last Updated 5 ಮಾರ್ಚ್ 2019, 19:50 IST
ಅಕ್ಷರ ಗಾತ್ರ

ಶಿವಮೊಗ್ಗ:ಶಾಲೆಯಿಂದ ಹೊರಗೆ ಉಳಿದ ಬಡ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಿದರೆ ಅವರ ಪೋಷಕರಿಗೆ ಆರ್ಥಿಕ ನೆರವು ಕಲ್ಪಿಸುವ ಹೊಸ ಯೋಜನೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸದ್ದಿಲ್ಲದೆ ಅನುಷ್ಠಾನಗೊಳ್ಳುತ್ತಿದೆ.

ಗ್ರಾಮೀಣ ಪ್ರದೇಶಗಳ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿರುವ ಬೆಂಗಳೂರು ಮೂಲದ ಜ್ಞಾನಶಾಲೆ ಸೌಹಾರ್ದ ಸಹಕಾರ ಸಂಘ ಐವರು ಮಹಿಳೆಯರಿಗೆ ಒಂದು ಗುಂಪು ರಚಿಸಿದೆ. ಒಂದು ಗ್ರಾಮದಲ್ಲಿ ಇಂತಹ ಹತ್ತಾರು ಗುಂಪುಗಳಿವೆ. ಪ್ರತಿ ಗುಂಪಿಗೂ ಪ್ರಸ್ತುತ ₹ 1 ಲಕ್ಷದಿಂದ ₹ 3 ಲಕ್ಷದವರೆಗೆ ಆರ್ಥಿಕ ಸೌಲಭ್ಯ ನೀಡಲಾಗುತ್ತದೆ. ಈ ಗುಂಪುಗಳು ಪ್ರತಿ 15 ದಿನಕ್ಕೆ ಒಮ್ಮೆ ಕಂತಿನ ಮೇಲೆ ಹಣ ಕಟ್ಟಬೇಕು.

ಹಣಕಾಸಿನ ನೆರವು ಪಡೆಯುವ ಗುಂಪುಗಳು ಯಾವುದೇ ದಾಖಲೆ, ಜಾಮೀನು ನೀಡಬೇಕಿಲ್ಲ. ಹಣ ಪಡೆಯಲು ಬೇಕಾದ ಮೊದಲ ಅರ್ಹತೆ ಆ ಗುಂಪಿನ ಸದಸ್ಯರ ಕುಟುಂಬದ ಯಾವ ಮಕ್ಕಳೂ ಶಾಲೆಯಿಂದ ಹೊರಗುಳಿದಿರಬಾರದು. 6 ರಿಂದ 16 ವರ್ಷದ ಒಳಗಿನ ಮಕ್ಕಳು ಒಂದರಿಂದ ಎಸ್ಸೆಸ್ಸೆಲ್ಸಿವರೆಗೆ ಶಾಲೆಗೆ ಹೋಗುವುದು ಕಡ್ಡಾಯ.

ಒಂದು ವೇಳೆ ಶಾಲೆಗೆ ಹೋಗದೆ ಕೂಲಿಗೆ ಕಳುಹಿಸುತ್ತಿದ್ದರೆ, ಮನೆಯಲ್ಲೇ ಇದ್ದರೆ ಅಂತಹ ಗುಂಪುಗಳ ಸದಸ್ಯರಿಗೆ ಆರ್ಥಿಕ ನೆರವು ಸಿಗುವುದಿಲ್ಲ. ಗುಂಪು ರಚಿಸಿದ ತಕ್ಷಣ ಸಂಸ್ಥೆಯ ಸ್ವಯಂಸೇವಕರು ಈ ಕುರಿತು ಮಾಹಿತಿ ಸಂಗ್ರಹಿಸಿ, ಕೇಂದ್ರ ಕಚೇರಿಗೆ ರವಾನಿಸುವುದು ಕಡ್ಡಾಯ. ಜತೆಗೆ, ಆ ಕುಟುಂಬದ ಸದಸ್ಯರು ಕಡ್ಡಾಯವಾಗಿ ಅಕ್ಷರ ಕಲಿಯಬೇಕು. ಹೆಬ್ಬೆಟ್ಟು ಬಿಟ್ಟು ಸಹಿ ಮಾಡಬೇಕು.

‘ಹಣಕಾಸಿನ ನೆರವು ಪಡೆಯುವ ಕಾರಣಕ್ಕೆ ಹಲವು ಕುಟುಂಬಗಳು ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕಳುಹಿಸುತ್ತಿದ್ದಾರೆ. ಗುಂಪಿನ ಉಳಿದ ಸದಸ್ಯರು ಒತ್ತಡ ಹಾಕುತ್ತಿದ್ದೇವೆ.ಇದರಿಂದ ಶಾಲೆಗಳಿಗೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ವಿವರ ನೀಡಿದರು ಭದ್ರಾವತಿ ತಾಲ್ಲೂಕು ಭಗವತಿಕೆರೆಯ ಅಂತರಘಟ್ಟಮ್ಮ ಗುಂಪಿನ ಹೇಮಾವತಿ, ನಾಗೀಬಾಯಿ, ಸರಿತಾ.

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಇಂತಹ ಸಾವಿರಾರು ಗುಂಪುಗಳನ್ನು ರಚಿಸಲಾಗಿದೆ. ಆರ್ಥಿಕ ನೆರವು ಪಡೆದ ಬಹುತೇಕ ಸಂಘಗಳು ಹಸು, ಎಮ್ಮೆ ಖರೀದಿಸಿದ್ದಾರೆ. ತರಕಾರಿ ಬೆಳೆಯುತ್ತಿದ್ದಾರೆ. ಅಡಿಕೆ ಹಾಳೆ ತಯಾರಿಕಾ ಘಟಕ ಸ್ಥಾಪಿಸಿದ್ದಾರೆ. ಇಂತಹ ಹತ್ತಾರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಾವೂ ಕೆಲಸ ಮಾಡುವ ಜತೆಗೆ ಹಲವರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ಎರಡು ವರ್ಷಗಳಲ್ಲಿ ಹಲವು ಸಂಘಗಳು ಬೇರೆ ಗುಂಪುಗಳಿಗೆ ಸಾಲ ನೀಡುವಷ್ಟು ಬಲಿಷ್ಠವಾಗಿ ಬೆಳೆದಿವೆ.

ಸಂಸ್ಥೆಯ ಸ್ವಯಂಸೇವಕರು ಹಳ್ಳಿಗಳಿಗೆ ಭೇಟಿ ನೀಡಿ ಹಣ ಸಂಗ್ರಹಿಸುತ್ತಾರೆ. ಸ್ವಸಹಾಯ ಸಂಘಗಳು ಇರುವ ಪ್ರದೇಶದಲ್ಲಿ ಸ್ವಚ್ಛತೆಗೆ ಒತ್ತು ನೀಡಲು ಸಲಹೆ ನೀಡುತ್ತಾರೆ. ಹಣವನ್ನು ಅನುಪಯುಕ್ತ ಕೆಲಸಗಳಿಗೆ ಬಳಸದಂತೆ ತಾಕೀತು ಮಾಡುತ್ತಾರೆ. ಉಳಿತಾಯದ ಮಹತ್ವ ಅರ್ಥ ಮಾಡಿಸುತ್ತಾರೆ. ಗುಂಪುಗಳ ಹೊರತಾಗಿಯೂ ವೈಯಕ್ತಿಕ ಆಸಕ್ತಿ ಗುರುತಿಸಿ, ಉದ್ಯಮಗಳ ಸ್ಥಾಪನೆಗೆ ನೆರವು ನೀಡುತ್ತಿದ್ದಾರೆ.

ಮಹಿಳೆಯರು ನಂಬಿಕೆಯ ಪ್ರತಿರೂಪ. ಇದುವರೆಗೂ ನೀಡಿದ ಹಣ ಶೇ 100ರಷ್ಟು ಹಿಂದಿರುಗಿಸಿದ್ದಾರೆ ಎನ್ನುತ್ತಾರೆ ಜ್ಞಾನಶಾಲೆಯ ಸಂಸ್ಥಾಪಕ ಶ್ರೀಧರ್ ಎನ್‌. ರಾವ್.

*ಮಹಿಳಾ ಸದಸ್ಯರು ನಿರೀಕ್ಷಿಸಿದಷ್ಟು ನೆರವು ನೀಡುತ್ತಿದ್ದೇವೆ. ಸ್ವಾವಂಬನೆಯ ವೇಗಕ್ಕೆ ಬೆರಗಾಗಿದ್ದೇವೆ.

- ಶ್ರೀಧರ್ ಎನ್‌. ರಾವ್, ಜ್ಞಾನಶಾಲೆಯ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT