ಸೋಮವಾರ, ಸೆಪ್ಟೆಂಬರ್ 27, 2021
25 °C
ಸೊಂಟದ ಮೂಳೆ ಮುರಿದುಕೊಂಡಿದ್ದ ಗಾನಕೋಗಿಲೆಗೆ ಚಿಕಿತ್ಸೆ

ಕೀಲು ಬದಲಿ ಶಸ್ತ್ರಚಿಕಿತ್ಸೆ ಪಡೆದ ಎಸ್‌.ಜಾನಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸೊಂಟದ ಮೂಳೆ ಮುರಿದ ಕಾರಣದಿಂದ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕಿ ಎಸ್‌.ಜಾನಕಿ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಕೃತಕ ಕೀಲು ಜೋಡಿದ್ದಾರೆ.

ಇಲ್ಲಿನ ಸ್ನೇಹಿತರ ಮನೆಗೆ ಒಂದು ವಾರದ ಹಿಂದೆ ಜಾನಕಿ ಅವರು ಬಂದಿದ್ದಾಗ ಮನೆಯ ಹೊಸ್ತಿಲು ಮುಗ್ಗರಿಸಿ ಬಿದ್ದಿದ್ದರು. ಇದರಿಂದ ಅವರ ಸೊಂಟದ ಮೂಳೆ ಮುರಿದಿತ್ತು. ಕೂಡಲೇ ಅವರನ್ನು ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಕೀಲುಮೂಳೆ ತಜ್ಞ ಡಾ.ನಿತಿನ್‌ ಅವರು ಶಸ್ತ್ರಚಿಕಿತ್ಸೆ ನಡೆಸಿ, ಕೃತಕ ಕೀಲನ್ನು ಜೋಡಿಸಿದ್ದಾರೆ. ಶಸ್ತ್ರಚಿಕಿತ್ಸೆಯಾಗಿ ಏಳು ದಿನಗಳಾಗಿದ್ದು, ಮೂರು ವಾರ ಕಾಲ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ.

ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ ಜಾನಕಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕನ್ನಡ ಮಕ್ಕಳ ಪ್ರೀತಿಯಿಂದ ನಾನು ಆರೋಗ್ಯವಂತಳಾಗಿದ್ದೇನೆ. ಅಭಿಮಾನಿಗಳಿಗಾಗಿ ನಾನು ಚನ್ನಾಗಿರುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಹೊಸ್ತಿಲು ಮುಗ್ಗರಿಸಿ ಬಿದ್ದಾಗ ತುಂಬಾ ನೋವಾಯಿತು. ವೈದ್ಯರು ನನ್ನ ಕೀಲು ತೆಗೆದು, ಕೃತಕ ಕೀಲು ಜೋಡಿಸಿದ್ದಾರೆ. ನನಗಿದು ಹೊಸ ಅನುಭವ’ ಎಂದು ಜಾನಕಿ ತಾವೇ ಉತ್ಸಾಹದಿಂದಲೇ ವಿವರ ನೀಡಿದರು.

ಕಿಡಿ ಕಾರಿದ ಪುತ್ರ ಮುರಳಿ ಕೃಷ್ಣ

‘ಒಂದು ವಾರದಿಂದ ವಿಚಾರ ಗೌಪ್ಯವಾಗಿಟ್ಟಿದ್ದೆವು. ಈ ಸುದ್ದಿ ಮಾಧ್ಯಮದವರಿಗೆ ಸಿಕ್ಕಿದ್ದು ಹೇಗೆ?’ ಎಂದು ಎನ್‌.ಜಾನಕಿ ಪುತ್ರ, ಸಂಗೀತ ನಿರ್ದೇಶಕ ಮುರಳಿ ಕೃಷ್ಣ ಕಿರಿಕಾರಿದರು.

ಸುದ್ದಿ ಕೊಟ್ಟಿದ್ದು ಯಾರೆಂದು ತಿಳಿಸುವಂತೆ ಮುರಳಿ ಒತ್ತಾಯಿಸಿದರು. ಮಾಧ್ಯಮದವರು ಇದಕ್ಕೆ ನಿರಾಕರಿಸಿದರು. ‘ಹೀಗೆ ಹೇಳಿದರೆ ಹೇಗೆ. ನಾನು ನನ್ನ ತಾಯಿಯನ್ನು ಮಾತನಾಡಿಸಲು ನಿಮಗೆ ಅವಕಾಶ ಕೊಡದೇ ಇರಬಹುದು ಅಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು