ಸೋಮವಾರ, ಫೆಬ್ರವರಿ 24, 2020
19 °C
ಬೊಳುವಾರು ಮಹಮ್ಮದ್ ಕುಂಞಿ ಸಹಿತ ಏಳು ಗಣ್ಯರಿಗೆ ಸಂದೇಶ ಪ್ರಶಸ್ತಿ ಪ್ರದಾನ

‘ವಿಭಜಿಸಿ ನೋಡುವುದು ಮಾನವೀಯತೆಯಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಮನುಷ್ಯರನ್ನು ವಿಭಜಿಸಿ ನೋಡುವುದು ಮಾನವೀಯತೆ ಅಥವಾ ಧರ್ಮವಲ್ಲ’ ಎಂದು ಸಂದೇಶ ಪ್ರತಿಷ್ಠಾನದ ಅಧ್ಯಕ್ಷ, ಬಳ್ಳಾರಿ ಬಿಷಪ್ ಹೆನ್ರಿ ಡಿ ಸೋಜ ಹೇಳಿದರು. 

ನಗರದ ಸಂದೇಶ ಶಿಕ್ಷಣ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಆವರಣದಲ್ಲಿ ಭಾನುವಾರ ನಡೆದ ‘ಸಂದೇಶ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಾವುದೇ ವ್ಯಕ್ತಿಯು ದೇಶ, ಧರ್ಮಗಳನ್ನು ನೋಡಿ ಹುಟ್ಟುವುದಿಲ್ಲ. ಹೀಗಾಗಿ, ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸುವುದು ಹಾಗೂ ಅಶಕ್ತರಿಗೆ ಸ್ಪಂದಿಸುವುದೇ ಧರ್ಮ’ ಎಂದರು.

‘ಸಮಾಜದಲ್ಲಿ ಅತಂತ್ರರು, ಕುತಂತ್ರರು, ಪರತಂತ್ರರು ಇರುತ್ತಾರೆ. ಆದರೆ, ನಾವೆಲ್ಲ ಸ್ವತಂತ್ರರಾಗಿ ಬದುಕಬೇಕು. ತನ್ನಂತೆಯೇ ಇತರರ ಘನತೆಯನ್ನೂ ಕಾಪಾಡಬೇಕು’ ಎಂದರು.

'ಸಂದೇಶ ಸಾಹಿತ್ಯ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ, ‘ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ, ಅಂದರೆ, ಪಾಕಿಸ್ತಾನ- ಬಾಂಗ್ಲಾ ದೇಶ ಹುಟ್ಟುವ ಮೊದಲೇ ಹುಟ್ಟಿದ ತಂದೆಯ ಮಗನಾದ ನಾನು ಭಾರತೀಯನಾಗಿದ್ದು, ಈಗ ಭಾರತೀಯ ಎಂದು ಸಾಬೀತು ಪಡಿಸಬೇಕಾ? ಅದಕ್ಕಾಗಿ ನಾನು ಬದುಕಬೇಕಾ?' ಎಂದು ಆತಂಕ ವ್ಯಕ್ತಪಡಿಸಿದರು.

'ದೇಶದಲ್ಲಿ ಈಗ, ಏನು ವಿಚಾರ ಮಾತನಾಡುತ್ತಿದ್ದಾರೆ ಎಂಬುದು ಮುಖ್ಯವಲ್ಲ ? ಯಾರು ಮಾತನಾಡುತ್ತಿದ್ದಾರೆ? ಎಂಬುದು ಮುಖ್ಯವಾಗುತ್ತಿರುವುದು ಖೇದಕರ’ ಎಂದು ವಿಷಾದ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತ ಕುಮಾರ್,‘ಸಾಹಿತಿಗಳು ರಾಜಕೀಯ ಮಾತನಾಡಿದರೆ, ಮತೀಯ ಸಾಹಿತಿ ಆಗುತ್ತಾರೆ’ ಎಂದರು.

ಅಲ್ಲದೇ,‘ಬಾಂಗ್ಲಾ, ಅಪಘಾನಿಸ್ತಾನ ಮತ್ತು ಪಾಕಿಸ್ತಾನದ ಮುಸ್ಲಿಮರ ಜೊತೆ ಭಾರತೀಯ ಮುಸ್ಲಿಮರನ್ನು ಹೋಲಿಸಿ ಆತಂಕ ಸೃಷ್ಟಿಸಬಾರದು. ಮೋದಿ ದೇಶದ ಪ್ರಧಾನಿ ಅಲ್ಲವೇ? ಪೌರತ್ವ ನೋಂದಣಿ ಸಾಂವಿಧಾನಿಕವಾಗಿ ಮಂಡನೆಯಾದ ಕಾಯಿದೆ ಅಲ್ಲವೇ? ಕಾಯಿದೆ ಬಗ್ಗೆ ತಪ್ಪು ತಪ್ಪು ಸಂದೇಶ ನೀಡಬೇಡಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ ಬೇಡ’ ಎಂದೂ ಅವರು ಸಮರ್ಥನೆ ನೀಡಿದರು.

ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿ ಸೋಜ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು