ಶುಕ್ರವಾರ, ಫೆಬ್ರವರಿ 26, 2021
22 °C
ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಹೊಸ ಯೋಜನೆ l ಎಸ್‌ಸಿ/ಎಸ್‌ಟಿ ಮಹಿಳೆಯರಿಗೆ ಶೇ 90ರಷ್ಟು ಸಹಾಯಧನ

ಜಿಲ್ಲೆಗೊಂದು ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಘಟಕ

ವಿಜಯಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮೀಣ ಹಾಗೂ ಪಟ್ಟಣದ ಮಹಿಳೆಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಸ್ಯಾನಿಟರಿ ನ್ಯಾಪ್ಕಿನ್‌ ದೊರಕಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ನ್ಯಾಪ್ಕಿನ್ ತಯಾರಿಕಾ ಘಟಕ ಆರಂಭಿಸಲು ಮುಂದಾಗಿದೆ.

ಮಹಿಳೆಯರನ್ನು ಉದ್ಯಮಿಗಳನ್ನಾಗಿಸುವ ಜತೆಗೆ ಸ್ವಚ್ಛ ಭಾರತ ಅಭಿಯಾನಕ್ಕೆ ಕೊಡುಗೆ ನೀಡುವ ಉದ್ದೇಶದೊಂದಿಗೆ ಮಹಿಳಾ ಸ್ನೇಹಿ ಕಾರ್ಯಕ್ರಮವನ್ನು ಇಲಾಖೆ ರೂಪಿಸಿದೆ.

₹25 ಲಕ್ಷ ವೆಚ್ಚದ ಘಟಕಗಳನ್ನು ಸ್ಥಳೀಯರ ಮೂಲಕವೇ ಆರಂಭಿಸುವುದು ಮತ್ತು ಘಟಕ ಸ್ಥಾಪಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಶೇ 90ರಷ್ಟು ಸಹಾಯಧನ ನೀಡುವ ಉದ್ದೇಶವನ್ನು ಇಲಾಖೆ ಹೊಂದಿದೆ.

ಸ್ಯಾನಿಟರಿ ನ್ಯಾಪ್ಕಿನ್‌ ಅನ್ನು ಇದೇ ಮೊದಲ ಬಾರಿಗೆ ಜವಳಿ ಉದ್ಯಮವಾಗಿ ಪರಿಗಣಿಸಲಾಗಿದೆ. ಪ್ರಾಯೋಗಿಕವಾಗಿ ಮೊದಲ ವರ್ಷ ಜಿಲ್ಲೆಗೊಂದು ಘಟಕ ಸ್ಥಾಪಿಸುವ ಉದ್ದೇಶ ಹೊಂದಿದೆ. ಬೇಡಿಕೆ ಜಾಸ್ತಿಯಾದರೆ ಲಭ್ಯ ಇರುವ ಅನುದಾನದ ಮಿತಿ
ಯೊಳಗೆ ಹೆಚ್ಚಿನ ಘಟಕ ತೆರೆಯುವ ಆಲೋಚನೆಯೂ ಇಲಾಖೆಗೆ ಇದೆ.

‘ಈ ಘಟಕದಲ್ಲಿ ಕನಿಷ್ಠ 6 ಜನರಿಗೆ ಉದ್ಯೋಗ ಸಿಗಲಿದೆ. ಮಹಿಳೆಯರು ಬಳಸುವ ಉತ್ಪನ್ನವಾಗರುವ ಕಾರಣ ಘಟಕಕ್ಕೆ ಮಹಿಳೆಯರೇ ಮಾಲೀಕರಾದರೆ ಕಾಳಜಿ ವಹಿಸುತ್ತಾರೆ ಎನ್ನುವುದು ನಮ್ಮ ನಿರೀಕ್ಷೆ’ ಎಂದು ಇಲಾಖೆಯ ಆಯುಕ್ತ ಡಾ.ಎಂ.ಆರ್.ರವಿ ತಿಳಿಸಿದರು.

ತರಬೇತಿ: ಆಯ್ಕೆಯಾಗು ಫಲಾನುಭವಿಗಳಿಗೆ ತರಬೇತಿ ನೀಡಲಾಗುವುದು. ಘಟಕಕ್ಕೆ ಬೇಕಿರುವ ಯಂತ್ರಗಳನ್ನು ಪೂರೈಸುವ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದು, ಬೇಕಿರುವ ಕಚ್ಚಾವಸ್ತು ಪೂರೈಕೆ ಸೇರಿದಂತೆ ಎಲ್ಲಾ ರೀತಿಯ ಸಹಕಾರವನ್ನೂ ಇಲಾಖೆ ನೀಡಲಿದೆ’ ಎಂದರು.‌

‘ಫಲಾನುಭವಿಗಳು ಬ್ಯಾಂಕ್ ಅಥವಾ ಕೆಎಸ್ಎಫ್‌ಸಿ ಮೂಲಕ ಸಾಲ ಪಡೆಯಬೇಕು. ಯೋಜನೆಯ ಪ್ರಗತಿ ಆಧರಿಸಿ  ನಾಲ್ಕು ಕಂತು
ಗಳಲ್ಲಿ ಸಹಾಯಧನವನ್ನು ನೀಡಲಾಗುವುದು. ಘಟಕ ನಿರ್ಮಾಣಕ್ಕೆ ಕೈಗಾರಿಕಾ ವಲಯದಲ್ಲೇ ಜಾಗ ಇರಬೇಕು ಎಂದೇನೂ ಇಲ್ಲ. ಒಂದು ಸಾವಿರ ಚದರ ಅಡಿ ಜಾಗ ಇದ್ದರೆ ಸಾಕು. ಸ್ವಂತ ಜಾಗವಿಲ್ಲದವರು ಭೋಗ್ಯಕ್ಕೆ ಪಡೆದುಕೊಂಡು ಘಟಕ ಆರಂಭಿಸಬಹುದು’ ಎಂದೂ ಸ್ಪಷ್ಟಪಡಿಸಿದರು.

ಮಾರುಕಟ್ಟೆ: ತಯಾರಾದ ಉತ್ಪನಕ್ಕೆ ಮಾರುಕಟ್ಟೆ ವ್ಯವಸ್ಥೆಯನ್ನು ಫಲಾನುಭವಿಗಳೇ ಮಾಡಿಕೊಳ್ಳಬೇಕು. ‌ತಮ್ಮದೇ ಬ್ರ್ಯಾಂಡ್ ಮಾಡಿ
ಕೊಂಡರೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿಕೊಳ್ಳಬಹುದು. ಜಿಲ್ಲಾ ಕೇಂದ್ರದಲ್ಲಿ ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಸಲ್ಲಿಸಬಹುದು’ ಎಂದು ಹೇಳಿದರು.

ಸಾಮಾನ್ಯ ವರ್ಗದವರಿಗೂ ಅವಕಾಶ

ಸಾಮಾನ್ಯ ವರ್ಗದವರೂ ಸ್ಯಾನಿಟರಿ ನ್ಯಾಪ್ಕಿನ್ ಘಟಕ ಸ್ಥಾಪಿಸಿಕೊಳ್ಳಲು ಮುಂದೆ ಬಂದರೆ ಅವಕಾಶ ನೀಡಲಾಗುವುದು ಎಂದು ಡಾ.ಎಂ.ಆರ್. ರವಿ ಹೇಳಿದರು.

ಅವರಿಗೆ ಜವಳಿ ನೀತಿಯಡಿ ಶೇ 20ರಷ್ಟು, ತಾಂತ್ರಿಕ ಜವಳಿ ಯೋಜನೆಯಡಿ ಶೇ 10 ಮತ್ತು ಮಹಿಳಾ ಉದ್ಯಮಿಗೆ ನೀಡುವ ಶೇ 5ರಷ್ಟು ಸೇರಿ ಒಟ್ಟು ಶೇ 35ರಷ್ಟು ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು. ಸಾಮಾನ್ಯ ವರ್ಗದ ಪುರುಷರು ಈ ಘಟಕ ಸ್ಥಾಪಿಸಲು ಮುಂದೆ ಬಂದರೆ ಶೇ 30ರಷ್ಟು ಸಹಾಯಧನ ಸಿಗಲಿದೆ ಎಂದು ವಿವರಿಸಿದರು.

ಅಂಕಿ ಅಂಶ

* ₹25 ಲಕ್ಷ – ಘಟಕ ವೆಚ್ಚ 

* ಶೇ 90ರಷ್ಟು ಸಹಾಯಧನ – ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ

* ಶೇ 35ರಷ್ಟು ಸಹಾಯಧನ – ಸಾಮಾನ್ಯ ವರ್ಗದ ಮಹಿಳೆಯರಿಗೆ

* ಶೇ 30ರಷ್ಟು ಸಹಾಯಧನ – ಸಾಮಾನ್ಯ ವರ್ಗದ ಪುರುಷರಿಗೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು