ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ಗೆ ದೂರಿತ್ತ ಸತೀಶ ಜಾರಕಿಹೊಳಿ

Last Updated 14 ಅಕ್ಟೋಬರ್ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಶನಿವಾರ ಇಲ್ಲಿ ಭೇಟಿ ಮಾಡಿದ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ, ರಾಜ್ಯ ನಾಯಕರ ಬಗ್ಗೆ ದೂರಿನ ಸುರಿಮಳೆಯನ್ನೇ ಸುರಿಸಿದ್ದಾರೆ.

ಕುಮಾರಕೃಪಾ ಅತಿಥಿ ಗೃಹದಲ್ಲಿ ರಾಹುಲ್ ಅವರನ್ನು ಭೇಟಿ ಮಾಡಿದ ಜಾರಕಿಹೊಳಿ, ಬೆಳಗಾವಿ ರಾಜಕಾರಣ ಮಾತ್ರವಲ್ಲದೇ ರಾಜ್ಯ ನಾಯಕರ ಧೋರಣೆ ಬಗ್ಗೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ‌ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಕೂಡ ಇದ್ದರು ಎಂದು ಮೂಲಗಳು ಹೇಳಿವೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಶಾಸಕರ ಅಹವಾಲು ಆಲಿಸುತ್ತಿಲ್ಲ. ಬೆಳಗಾವಿಗೆ ಸಂಬಂಧವೇ ಇಲ್ಲದಿದ್ದರೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ಶಿವಕುಮಾರ್ ಬೆಂಬಲಕ್ಕೆ ಇರುವುದರಿಂದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಅವರು ತಮ್ಮ ವಿಧಾನಸಭಾ ಕ್ಷೇತ್ರವಲ್ಲದೇ, ಉಳಿದ ಕ್ಷೇತ್ರಗಳಲ್ಲೂ ಮೂಗು ತೂರಿಸುತ್ತಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದರು.

ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿದೆ. ಆದರೆ, ಕಾಂಗ್ರೆಸ್‌ ಶಾಸಕರು, ಕಾರ್ಯಕರ್ತರ ಅಹವಾಲು ಕೇಳುವ ಮನಸ್ಸು ನಾಯಕರಿಗೆ ಇಲ್ಲ. ದಿನೇಶ್ ಗುಂಡೂರಾವ್‌ ಈ ಕೆಲಸ ಮಾಡುತ್ತಿದ್ದರೂ ಸಚಿವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ದಶಕಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಜಾರಕಿಹೊಳಿ ಅವರು ರಾಹುಲ್‌ಗೆ ದೂರಿತ್ತರು.

ಶಿವಕುಮಾರ್ ಧೋರಣೆಗೆ ಕಡಿವಾಣ ಹಾಕಬೇಕು. ಸಂಪುಟ ವಿಸ್ತರಣೆ ವೇಳೆ ವಾಲ್ಮೀಕಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದೂ ಅವರು ಮನವಿ ಮಾಡಿದರು.

ರಾಷ್ಟ್ರ ರಾಜಕಾರಣಕ್ಕೆ: ಮಾತುಕತೆ ವೇಳೆ ರಾಷ್ಟ್ರ ರಾಜಕಾರಣಕ್ಕೆ ಬರಲು ತಾವು ಸಿದ್ಧರಿರುವುದಾಗಿ ಜಾರಕಿಹೊಳಿ ಪ‍್ರಸ್ತಾವಿಸಿದರು ಎಂದು ಮೂಲಗಳು ಹೇಳಿವೆ.

ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಟ್ಟರೆ ಕಣಕ್ಕೆ ಇಳಿಯವುದಾಗಿ ತಿಳಿಸಿದ ಅವರು, ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಕಿರಿಯ ಸಹೋದರ ಲಖನ್‌ ಜಾರಕಿಹೊಳಿಗೆ ಅವಕಾಶ ನೀಡುವಂತೆ ಕೋರಿದ್ದಾಗಿ ಗೊತ್ತಾಗಿದೆ.

ಕರ್ನಾಟಕಕ್ಕೆ ಸೀಮಿತವಾದರೆ ದೆಹಲಿಯಲ್ಲಿ ಯಾರೂ ಗುರುತಿಸುವುದಿಲ್ಲ. ಅದರ ಬದಲು ಲೋಕಸಭೆಗೆ ಹೋದರೆ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಸಾಧ್ಯ ಎಂಬ ಲೆಕ್ಕಾಚಾರ ಇದರ ಹಿಂದೆ ಇದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT