ಗುರುವಾರ , ಜುಲೈ 29, 2021
21 °C
ಪಟ್ಟಿಗೆ ಎಸ್‌.ಸಿ, ಎಸ್‌.ಟಿ ಸಹಾಯಕ ಎಂಜಿನಿಯರ್‌ಗಳ (ಬ್ಯಾಕ್‌ ಲಾಗ್‌) ವಿರೋಧ

ಜ್ಯೇಷ್ಠತೆ ಉಲ್ಲಂಘಿಸಿ ಎಂಜಿನಿಯರ್‌ಗಳಿಗೆ ಬಡ್ತಿ?

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಈ ಮೂರು ಇಲಾಖೆಯಲ್ಲಿ ಸೇವಾ ಜ್ಯೇಷ್ಠತೆ ಉಲ್ಲಂಘಿಸಿ 434 ಸಹಾಯಕ ಎಂಜಿನಿಯರ್‌ಗಳನ್ನು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗಳಿಗೆ ಬಡ್ತಿ ನೀಡಲು ತಯಾರಿ ನಡೆಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಈ ಇಲಾಖೆಗಳಲ್ಲಿ ಖಾಲಿ ಇದ್ದ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಪರಿಶಿಷ್ಟ ಜಾತಿ (ಎಸ್‌.ಸಿ), ಪರಿಶಿಷ್ಟ ಪಂಗಡಕ್ಕೆ (ಎಸ್‌.ಟಿ) ಸೇರಿದ 846 ಸಹಾಯಕ ಎಂಜಿನಿಯರ್‌ಗಳನ್ನು 2003–04ರಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು, 2005ರಲ್ಲಿ ಕಾಯಂಗೊಳಿಸಲಾಗಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ಅವರನ್ನು 2016ರಲ್ಲಿ ಮರುನೇಮಕ ಮಾಡಿಕೊಳ್ಳಲಾಗಿತ್ತು.

ಈ ಪೈಕಿ, 291 ಎಂಜಿನಿಯರ್‌ ಗಳು ಈಗಾಗಲೇ ಬಡ್ತಿ ಪಡೆದಿದ್ದಾರೆ. ಉಳಿದವರನ್ನು ಬಡ್ತಿಗೆ ಪರಿಗಣಿಸುವ ಬದಲು, 2009ರಲ್ಲಿ ನೇಮಕಾತಿ ಹೊಂದಿದವರಿಗೆಬಡ್ತಿ ನೀಡಲು ತೀರ್ಮಾನಿಸಲಾಗಿದೆ. ಈ ಉದ್ದೇಶದಿಂದ ಇಲಾಖೆಗಳ ವಿಭಜನೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದುಇದು ಎಸ್‌.ಸಿ, ಎಸ್‌.ಟಿ ಸಮುದಾಯ ಎಂಜಿನಿಯರ್‌ಗಳಿಗೆ ಬಡ್ತಿ ತಪ್ಪಿಸುವ ಹುನ್ನಾರ ಎಂದು ಈ ಎಂಜಿನಿಯರ್‌ಗಳು  ಆರೋಪಿಸಿದ್ದಾರೆ.

ಬಡ್ತಿಗೆ ಅರ್ಹರಾಗಿರುವ ಎಂಜಿನಿಯರ್‌ಗಳು ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗೆ ಅಹವಾಲು ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮ ಸಮುದಾಯದ ಸ್ವಾಮೀಜಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನ್ಯಾಯ ಒದಗಿಸುವಂತೆಯೂ ಮನವಿ ಮಾಡಿದ್ದಾರೆ.

ಮೂರೂ ಇಲಾಖೆಗಳಲ್ಲಿರುವ ಸಹಾಯಕ ಎಂಜಿನಿಯರ್‌ಗಳ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು 2019ರ ಆ. 19ರಂದು ಪ್ರಕಟಿಸಲಾಗಿದೆ. ಈ ಮಧ್ಯೆ, ಜಲಸಂಪನ್ಮೂಲ ಇಲಾಖೆಯಲ್ಲಿ 2015ರಲ್ಲಿ (ಯುಕೆಪಿ ಯೋಜನೆ) ನೇಮಕಗೊಂಡ 225 ಸಹಾಯಕ ಎಂಜಿನಿಯರ್‌ಗಳಿಗೆ 2019ರ ಜುಲೈಯಲ್ಲಿ ಬಡ್ತಿ ನೀಡಲಾಗಿದೆ. 2003ರಲ್ಲಿ ನೇಮಕಗೊಂಡ 99 ಮಂದಿಗೆ ಹಾಗೂ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ನೇಮಕ
ಗೊಂಡ 291 ಸಹಾಯಕ ಎಂಜಿನಿಯರ್‌ಗಳಿಗೆ 2019ರ ನ. 8ರಂದು ಬಡ್ತಿ ನೀಡಲಾಗಿದೆ.

ಮೂರೂ ಇಲಾಖೆಗಳಲ್ಲಿ 2003ರಲ್ಲಿ ನೇಮಕಗೊಂಡು ಬಡ್ತಿ ಪಡೆಯಲು ಬಾಕಿ ಉಳಿದವರು ಮತ್ತು 2016ರಲ್ಲಿ ಯುಕೆಪಿ ಯೋಜನೆಗೆ ಮರು ನೇಮಕಗೊಂಡವರಿಗೆ ಸಾಮಾನ್ಯ ಜ್ಯೇಷ್ಠತೆ ಪರಿಗಣಿಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಬೇಕಾಗಿದೆ.

ಆದರೆ, ಜಲಸಂಪನ್ಮೂಲ ಇಲಾಖೆ ತಮ್ಮ ಇಲಾಖೆಯಿಂದ 2009ರಲ್ಲಿ ನೇಮಕಗೊಂಡವರಿಗೆ ಬಡ್ತಿ ನೀಡುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಗೆ ಹುದ್ದೆ ನೀಡಲು ನಿರಾಕರಿಸಿದೆ. ಅಲ್ಲದೆ, ಇಲಾಖೆಯ ವಿಭಜನೆಗೆ 2019ರ ನ. 27ರಂದು ಅಧಿಸೂಚನೆ ಹೊರಡಿಸಿದೆ.

2016ರಲ್ಲಿ ನೇಮಕಗೊಂಡವರಿಗೆ ಪಂಚಾಯತ್‌ರಾಜ್‌ ಇಲಾಖೆ 2019ರ ಸೆ. 20ರಂದು ಬಡ್ತಿ ನೀಡಿದ್ದು, ಉಳಿದ ಹುದ್ದೆಗಳನ್ನು ಲೋಕೋಪಯೋಗಿ ಇಲಾಖೆಗೆ ನೀಡುವ ಬದಲು, ಇಲಾಖೆಯ ವಿಭಜನೆಗೆ ಇದೇ ಮೇ 16ರಂದು ಅಧಿಸೂಚನೆ ಹೊರಡಿಸಿದೆ.

*
ಎಸ್‌ಸಿ, ಎಸ್‌ಟಿ ಸಮುದಾಯದ ಎಂಜಿನಿಯರ್‌ಗಳಿಗೆ ಬಡ್ತಿ ತಪ್ಪಿಸಲು ಪಿತೂರಿ ನಡೆಯುತ್ತಿದೆ. ನ್ಯಾಯ ಸಿಗದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ.
-ಡಿ. ಚಂದ್ರಶೇಖರಯ್ಯ, ಅಧ್ಯಕ್ಷ, ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು