ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದಾದ ಸಿ.ಎಂ ಗ್ರಾಮ ವಾಸ್ತವ್ಯ: ಮುಖ್ಯಮಂತ್ರಿಗಳೇ ಇನ್ನೊಮ್ಮೆ ಬನ್ನಿ, ಪ್ಲೀಸ್‌

ಶಾಲಾ ಮಕ್ಕಳಲ್ಲಿ ಮನೆ ಮಾಡಿದ ಬೇಸರ
Last Updated 22 ಜೂನ್ 2019, 16:35 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಿ.ಎಂ ಬರುತ್ತಾರೆ ಎಂದು ಬಹಳ ಖುಷಿಯಾಗಿತ್ತು. ಅವರ ಎದುರು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದೆವು. ಈಗ ಬಹಳ ಬೇಸರವಾಗುತ್ತಿದೆ. ಹೇಗಾದರೂ ಮಾಡಿ ಕುಮಾರಸ್ವಾಮಿ ಅವರನ್ನು ನಮ್ಮ ಶಾಲೆಗೆ ಕರೆದುಕೊಂಡಿ ಬನ್ನಿ...’

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧಗೊಂಡಿದ್ದ ತಾಲ್ಲೂಕಿನ ಹೇರೂರ(ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮನವಿ ಇದು.

ಶುಕ್ರವಾರ ರಾತ್ರಿ (ಜೂನ್‌ 21) ಏಕಾಏಕಿ ಭಾರಿ ಮಳೆಯಾದ ಕಾರಣ ಶನಿವಾರದ ಗ್ರಾಮ ವಾಸ್ತವ್ಯವನ್ನು ರದ್ದುಪಡಿಸಲಾಯಿತು. ಸಮಾಜ ಕಲ್ಯಾಣ ಸಚಿವಪ್ರಿಯಾಂಕ್‌ ಖರ್ಗೆ ಅವರು ಶನಿವಾರ ಶಾಲೆಗೆ ತೆರಳಿ ಮಕ್ಕಳಿಗೆ ಸಮಜಾಯಿಷಿ ನೀಡಿದರು.

‘ನಿಮ್ಮ ಶಾಲೆಗೆ ಬೇಕಿದ್ದ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಮುಖ್ಯಮಂತ್ರಿ ಅವರನ್ನು ಮತ್ತೊಮ್ಮೆ ಶಾಲೆಗೆ ಕರೆತರುವಜವಾಬ್ದಾರಿ ನನ್ನದು. ನೀವು ಬೇಸರ ಮಾಡಿಕೊಳ್ಳದೇ ಚೆನ್ನಾಗಿ ಓದಿ’ ಎಂದು ಅಕ್ಕರೆಯಿಂದ ಹೇಳಿದರು.

‘ಒಂದೆಡೆ ಶಾಲೆಗೆ ಸೌಲಭ್ಯ ಸಿಕ್ಕಿದ್ದು, ಇನ್ನೊಂದೆಡೆ ಸಾಕಷ್ಟು ಮಳೆಯಾಗಿದ್ದು ಒಳ್ಳೆಯದು. ಮುಖ್ಯಮಂತ್ರಿ ಬಂದಿದ್ದರೆ ಖುಷಿ ಇಮ್ಮಡಿಯಾಗುತ್ತಿತ್ತು. ನಾವು ಕಾಯುತ್ತೇವೆ ಸರ್‌’ ಎಂದು ಮಕ್ಕಳು ಪುನರುಚ್ಚರಿಸಿದರು.

‘ಗ್ರಾಮ ವಾಸ್ತವ್ಯ ರದ್ದಾಗಿದ್ದು ತೀವ್ರ ನಿರಾಸೆ ಉಂಟು ಮಾಡಿದೆ. ಇದೇ ತಿಂಗಳಲ್ಲಿ ಮತ್ತೊಮ್ಮೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.

‘ಕುಮಾರಸ್ವಾಮಿ ಅವರು ಬಂದಿಲ್ಲವೆಂಬ ಕಾರಣಕ್ಕೆ ಯಾವುದೇ ಅಭಿವೃದ್ಧಿ ಕಾಮಗಾರಿ ನಿಲ್ಲಿಸುವುದಿಲ್ಲ.ಎಲ್ಲ ಫಲಾನುಭವಿಗಳಿಗೂ ಸೌಲಭ್ಯ ಕಲ್ಪಿಸುವುದು, ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವುದು ನಮ್ಮ ಜವಾಬ್ದಾರಿ. ನೀವು ಆತಂಕ ಪಡುವ ಅಗತ್ಯವಿಲ್ಲ’ ಎಂದು ಪ್ರಿಯಾಂಕ್‌ ಹೇಳಿದರು.

ಜನತಾ ದರ್ಶನದಕ್ಕೆ ಸಿದ್ಧ ಪಡಿಸಿದ್ದ ವೇದಿಕೆಯ ಸ್ಥಳದಲ್ಲಿ ಮಳೆ ನೀರು ನಿಂತಿತ್ತು. ಶಾಲಾ ಆವರಣ ಕೆಸರುಮಯವಾಗಿತ್ತು.

ವೋಲ್ವೊ ಕಾರಲ್ಲಿ ವಾಪಸ್‌!
ಚಂಡರಕಿ (ಯಾದಗಿರಿ ಜಿಲ್ಲೆ):
ಗ್ರಾಮ ವಾಸ್ತವ್ಯಕ್ಕೆ ಸಾರಿಗೆ ಸಂಸ್ಥೆಯ ಕೆಂಪು ಬಸ್‌ನಲ್ಲಿ ಯಾದಗಿರಿಯಿಂದ ಬಂದು ಸರಳತೆ ಮೆರೆದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಶನಿವಾರ ಬೆಳಿಗ್ಗೆ ಇಲ್ಲಿಂದ ವೋಲ್ವೊ ಕಾರಿನಲ್ಲಿ ಮರಳಿದರು.

ಶುಕ್ರವಾರ ರಾತ್ರಿ 11 ಗಂಟೆಗೆ ಮೆಟ್ರಿಕ್‌ ಪೂರ್ವ ಬಾಲಕರಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಹಭೋಜನ ಸವಿದು, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಂಗಿದ್ದರು. ಅವರಿಗೆ ಚಾಪೆ ಮತ್ತು ಬೆಡ್‌ಶೀಟ್‌ ಮಾತ್ರ ಹಾಸಲಾಗಿತ್ತು. ಬೆಳಿಗ್ಗೆ 6ಕ್ಕೆ ಎದ್ದ ಅವರು, ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಹೊಸ ಬಚ್ಚಲುಮನೆಯಲ್ಲಿ ಸ್ನಾನಮಾಡಿದರು.ಸಚಿವರು–ಶಾಸಕರೊಂದಿಗೆ ಶಾಲೆಯಲ್ಲಿಯೇ ಉಪಾಹಾರ ಸವಿದರು. ಕಲಬುರ್ಗಿ ಜಿಲ್ಲೆಯಲ್ಲಿಯ ಗ್ರಾಮ ವಾಸ್ತವ್ಯ ರದ್ದಾದಕಾರಣ ಹೈದರಾಬಾದ್‌ ಮೂಲಕ ಬೆಂಗಳೂರಿಗೆ ವಾಪಸ್ಸಾದರು.

₹5 ಲಕ್ಷ ಚೆಕ್‌ ವಿತರಣೆ
ಚಂಡರಕಿ (ಯಾದಗಿರಿ):
ಅಪಘಾತದಲ್ಲಿ ಗಾಯಗೊಂಡು ಸ್ವಾಧೀನ ಕಳೆದುಕೊಂಡಿರುವ ಎಂಜಿನಿಯರಿಂಗ್ ಪದವೀಧರ ಭೀಮರಡ್ಡಿ ಅವರ ಚಿಕಿತ್ಸೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ₹5 ಲಕ್ಷ ನೆರವು ನೀಡಿದರು.

ಶುಕ್ರವಾರ ನಡೆದ ಜನತಾ ದರ್ಶನದಲ್ಲಿ ಭೀಮರಡ್ಡಿ ಅವರ ತಾಯಿ ಮನವಿ ಸಲ್ಲಿಸಿದ್ದರು. ರಾತ್ರಿಯೇ ಚೆಕ್‌ ತರಿಸಿಕೊಂಡ ಕುಮಾರಸ್ವಾಮಿ, ಶನಿವಾರ ಗ್ರಾಮದಿಂದ ನಿರ್ಗಮಿಸುವ ಮುನ್ನ ಭೀಮರೆಡ್ಡಿ ಅವರ ತಂದೆ ಶಂಕರಪ್ಪ ಅವರಿಗೆ ಚೆಕ್ ಹಸ್ತಾಂತರಿಸಿದರು.

**
ಗ್ರಾಮ ವಾಸ್ತವ್ಯ, ಜನಸ್ಪಂದನ ಮುಂದೂಡಬೇಕಾಗಿ ಬಂದಿದ್ದು ನಿರಾಸೆ ಮೂಡಿಸಿದೆ. ಆದರೆ, ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದು ಸಂತೋಷ. ಶೀಘ್ರವೇ ಭೇಟಿಯಾಗೋಣ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT