ಮಂಗಳವಾರ, ನವೆಂಬರ್ 19, 2019
28 °C
ಹಲವು ಯೋಜನೆ ಪ್ರಕಟಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ

ಪರಿಶಿಷ್ಟರ ಕಲ್ಯಾಣಕ್ಕೆ ₹30 ಸಾವಿರ ಕೋಟಿ

Published:
Updated:

ಬೆಂಗಳೂರು: 2019–20ರ ಸಾಲಿಗೆ ವಿವಿಧ ಇಲಾಖೆಗಳಲ್ಲಿರುವ ಎಸ್‌ಸಿ ಎಸ್‌ಟಿ ಅನುದಾನದ ಅಡಿ ₹30,444 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಪರಿಷತ್‌ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ರಾಜ್ಯ ಪರಿಷತ್‌ ಸಭೆಯ ಬಳಿಕ ಮಾತನಾಡಿ, ಪರಿಶಿಷ್ಟ ಜಾತಿಗೆ ₹21,602 ಕೋಟಿ ಮತ್ತು ಪರಿಶಿಷ್ಟ ವರ್ಗಕ್ಕೆ ₹8,842 ಕೋಟಿ ನಿಗದಿ ಮಾಡಲಾಗಿದೆ ಎಂದರು. 

ವಿವಿಧ ಇಲಾಖೆಗಳಲ್ಲಿ ಖರ್ಚಾಗದೇ ಉಳಿಕೆಯಾಗಬಹುದಾದ ಅನುದಾನವನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಮನೆಗಳ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಕ್ಕಾಗಿ ಬಳಸಲು ತೀರ್ಮಾನಿಸಲಾಗಿದೆ. ವಿವಿಧ ಇಲಾಖೆಗಳಿಂದ ₹1157.55 ಕೋಟಿ ಉಳಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ಎಸ್‌ಸಿಎಸ್‌ಟಿ ಅನುದಾನದಲ್ಲಿ ಶೇ 50 ರಷ್ಟನ್ನು ಈ ವರ್ಗದವರ ಮನೆಗಳ ನಿರ್ಮಾಣಕ್ಕಾಗಿಯೇ ಉಪಯೋಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಹಿಂದಿನ ಸರ್ಕಾರ ಈ ಅನುದಾನವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಿದ್ದನ್ನು ಯಡಿಯೂರಪ್ಪ ಸರ್ಕಾರ ಸರಿಪಡಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ವರದಿ ಕೇಳಿದ ಯಡಿಯೂರಪ್ಪ

ಎಸ್‌ಸಿ ಎಸ್‌ಟಿಗಳಿಗೆ ಅನುದಾನದ ದುರ್ಬಳಕೆ ಆಗಿದೆಯೇ ಎಂಬ ಬಗ್ಗೆ ವರದಿಯನ್ನು ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

‘ಈ ಯೋಜನೆಯಡಿ ಅಕ್ರಮ ನಡೆದಿದೆ ಎಂಬ ದೂರುಗಳು ಕೇಳಿ ಬಂದಿವೆ. ಮೂಲ ಉದ್ದೇಶಕ್ಕೆ ಅನುಗುಣವಾಗಿಯೇ ಅನುದಾನ ಬಳಸಲಾಗಿದೆಯೇ. ಎಲ್ಲೆಲ್ಲಿ ಲೋಪಗಳು ಆಗಿವೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಕಟ್ಟಪ್ಪಣೆ ಮಾಡಿದರು’ ಎಂದು ಮೂಲಗಳು ತಿಳಿಸಿವೆ.

**

ಎಸ್‌ಸಿ ಎಸ್‌ಟಿ ಅನುದಾನವನ್ನು ಬೇರೆ ಯಾವುದೇ ಯೋಜನೆಗಳಿಗೆ ಅಥವಾ ಕಾರ್ಯಕ್ರಮಗಳಿಗೆ ವರ್ಗಾವಣೆ ಮಾಡಿಲ್ಲ
- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)