ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದ್ರೋಹ’ ಪ್ರಕರಣ; ಪಾಲಿಕೆ ಸದಸ್ಯನ ವಿಚಾರಣೆ

ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೇಸ್ ಪೊಲೀಸರ ವಿಶೇಷ ತಂಡದಿಂದ ತನಿಖೆ ಚುರುಕು
Last Updated 23 ಫೆಬ್ರುವರಿ 2020, 2:20 IST
ಅಕ್ಷರ ಗಾತ್ರ

ಬೆಂಗಳೂರು:ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಅಮೂಲ್ಯಾ ಲಿಯೋನ್ (19) ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರ ವಿಶೇಷ ತಂಡ, ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಅವರನ್ನು ಶನಿವಾರ ವಿಚಾರಣೆ ನಡೆಸಿತು.

‘ಹಿಂದೂ–ಮುಸ್ಲಿಂ–ಸಿಖ್–ಇಸಾಯಿ ಫೌಂಡೇಷನ್’ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಅನುಮತಿ ಕೋರಿ ಬೆಂಗಳೂರಿನ ಪಾದರಾಯನಪುರ ವಾರ್ಡ್‌ನ ಜೆಡಿಎಸ್‌ ಸದಸ್ಯ ಇಮ್ರಾನ್ ಪಾಷಾ ಅವರೇ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಅನುಮತಿಯೂ ದೊರಕಿತ್ತು. ಪ್ರತಿಭಟನೆಯ ಆರಂಭದಲ್ಲೇ ಅಮೂಲ್ಯಾ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದರು. ಈ ಪ್ರಕರಣದಲ್ಲಿ ಆಯೋಜಕರ ಪಾತ್ರವೇನು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಸಕ್ರಿಯವಾಗಿದ್ದ ಅಮೂಲ್ಯಾ ಅವರನ್ನು ಆಯೋಜಕರೇ ವೇದಿಕೆಗೆ ಆಹ್ವಾನಿಸಿದ್ದರೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇದರ ಆಧಾರದಲ್ಲೇ ಇಮ್ರಾನ್ ಪಾಷಾ ಹಾಗೂ ಎಐಎಂಐಎಂ (ಆಲ್‌ ಇಂಡಿಯಾ ಮಜ್ಲಿಸ್‌– ಎ– ಇತ್ತಹಾದುಲ್‌ ಮುಸ್ಲಿಮಿನ್‌ ) ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಇಬ್ರಾಹಿಂ ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದರು.

ನೋಟಿಸ್‌ ಸ್ವೀಕರಿಸಿದ್ದ ಇಮ್ರಾನ್ ಪಾಷಾ, ಶನಿವಾರ ಮಧ್ಯಾಹ್ನ ಉಪ್ಪಾರಪೇಟೆ ಠಾಣೆಗೆ ಬಂದು ವಿಚಾರಣೆಗೆ ಹಾಜರಾದರು. ಎಸಿಪಿ ಮಹಾಂತರೆಡ್ಡಿ ನೇತೃತ್ವದ ತಂಡ ರಾತ್ರಿಯವರೆಗೂ ಇಮ್ರಾನ್ ಅವರ ವಿಚಾರಣೆ ನಡೆಸಿ ಹೇಳಿಕೆ ಪಡೆಯಿತು.

ಕಸ್ಟಡಿಗೆ ಪಡೆಯಲು ಚಿಂತನೆ: ‘ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

ಅಮೂಲ್ಯಾ ಹಿಂದಿರುವವರ ಪತ್ತೆಗೆ ತನಿಖೆ
‘ಸಿಎಎ ವಿರುದ್ಧದ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಅಮೂಲ್ಯ, ‘ನಾನು ಹೇಳುವ ಮಾತು ನನ್ನದಲ್ಲ. ನಾನು ಮುಖವಾಡ ಮಾತ್ರ. ನನ್ನ ಹಿಂದೆ ಸಲಹಾ ಮಂಡಳಿ ಇದೆ. ವಿದ್ಯಾರ್ಥಿಗಳ ಗುಂಪು ಇದೆ. ಎಲ್ಲಿ? ಏನು? ಮಾತನಾಡಬೇಕು ಎಂಬುದನ್ನೇ ಅವರೇ ಹೇಳುತ್ತಾರೆ. ಅವರು ಹೇಳಿದಂತೆ ನಾನು ಮಾತನಾಡುತ್ತೇನೆ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೊ ಆಧಾರದಲ್ಲಿ ತನಿಖೆ ಆರಂಭಿಸಿರುವ ಪೊಲೀಸರು, ಅಮೂಲ್ಯ ಹಿಂದಿರುವ ವ್ಯಕ್ತಿಗಳು ಯಾರೂ ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ. ಈಗಾಗಲೇ ಹಲವರ ಮಾಹಿತಿ ಸಂಗ್ರಹಿಸಿದ್ದು, ಅವರಿಗೆಲ್ಲ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT