ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯವಿಟ್ಟು ಬನ್ನಿ,ಇಲ್ಲದಿದ್ರೆ ಸಾಂವಿಧಾನದ ಕ್ರಮ ಎದುರಿಸಬೇಕಾಗುತ್ತದೆ:ಸಿದ್ದರಾಮಯ್ಯ

Last Updated 9 ಜುಲೈ 2019, 9:59 IST
ಅಕ್ಷರ ಗಾತ್ರ

ಬೆಂಗಳೂರು: ‘ದಯವಿಟ್ಟು ವಾಪಸ್ ಬನ್ನಿ. ಇಲ್ಲದಿದ್ದರೆ ಸಂವಿಧಾನದ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರಾಜೀನಾಮೆ ಕೊಟ್ಟಿರುವ ಶಾಸಕರಿಗೆ ಎಚ್ಚರಿಕೆ ನೀಡಿದರು.

‘ಎಷ್ಟು ಜನ ರಾಜೀನಾಮೆ ಕೊಟ್ಟಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ, ರಾಜೀನಾಮೆ ಕೊಟ್ಟಿರುವ 10 ಜನರನ್ನು ಬಿಟ್ಟು ಉಳಿದವರೆಲ್ಲ ಮಂಗಳವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಹಾಜರಾಗಿದ್ದರು. ರಾಜೀನಾಮೆ ಕೊಟ್ಟು ರೆಸಾರ್ಟ್‌ನಲ್ಲಿರುವ ಶಾಸಕರಿಗೆ ಇದೇ ಡೆಡ್‌ಲೈನ್, ಮಾಧ್ಯಮಗಳ ಮೂಲಕವೂ ಮನವಿ ಮಾಡ್ತಿದ್ದೇನೆ ದಯವಿಟ್ಟು ಬನ್ನಿ’ ಎಂದು ಹೇಳಿದರು.

‘ನಮ್ಮ ಕೆಲವು ಶಾಸಕರಿಗೆ ಕಾನೂನು ಗೊತ್ತಿದೆಯೋ ಇಲ್ಲವೋ, ಪಕ್ಷಾಂತರ ನಿಷೇಧ ಕಾನೂನು ಬಗ್ಗೆ ತಿಳಿದಿದ್ದಾರೋ ಇಲ್ಲವೋ ಗೊತ್ತಿಲ್ಲ. ಕಾನೂನು ಸ್ವಷ್ಟವಾಗಿ ಹೇಳುತ್ತದೆ, ಯಾರೇ ಆಗಲಿ, ಯಾವ ರಾಜಕೀಯ ಪಕ್ಷದ ಚಿಹ್ನೆಯಿಂದ ಗೆದ್ದಿರುತ್ತಾರೊ, ಅದಕ್ಕೆ ರಾಜೀನಾಮೆ ನೀಡಿದರೆ ಅದು ಪಕ್ಷಾಂತರ ಎನಿಸಿಕೊಳ್ಳುತ್ತದೆ. ಅವನ ಸದಸ್ಯತ್ವ ರದ್ದಾಗುತ್ತದೆ. ಅನಂತರ ಅವರು ನಿಗಮ ಮಂಡಳಿ ಅಥವಾ ಸಚಿವರಾಗಿ ಮುಂದುವರಿಯಲು ಆಗುವುದಿಲ್ಲ’ ಎಂದು ವಿವರಿಸಿದರು.

‘ಈಗಲೂ ನಾನು ಶಾಸಕರನ್ನು ವಾಪಸ್ ಬರುವಂತೆ ಮನವಿ ಮಾಡುತ್ತೇನೆ, ರಾಜೀನಾಮೆ ಹಿಂಪಡೆಯಿರಿ ಎಂದು ಮತ್ತೊಮ್ಮೆ ಕೋರುತ್ತೇನೆ. ಈಗಾಗಲೇ ಪಕ್ಷವು ಈ ಕುರಿತು ಸ್ಪಷ್ಟ ನಿಲುವು ತಳೆದಿದೆ. ಸ್ಪೀಕರ್ ಎದುರು ಸ್ಪಷ್ಟ ಮನವಿ ಸಲ್ಲಿಸಿ, ಅವರಸದಸ್ಯತ್ವ ರದ್ದುಪಡಿಸಲು ಕೋರುತ್ತೇವೆ. ಶಾಸಕರು ಕೊಟ್ಟಿರುವ ರಾಜೀನಾಮೆಗಳು ಸ್ವಂತತ್ರವಾಗಿ ಕೊಟ್ಟಿಲ್ಲ ಮತ್ತು ಮೌಲಿಕವಾಗಿಲ್ಲ’ ಎಂದರು.

‘ರಾಜೀನಾಮೆಗಳು ಸ್ವತಂತ್ರವಾಗಿವೆ, ಮೌಲಿಕವಾಗಿವೆ ಎಂದು ಸ್ಪೀಕರ್ ದೃಢಪಡಿಸಬೇಕು. ಅದು ಅವರ ವಿವೇಚನಾಧಿಕಾರ. ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಸ್ಪೀಕರ್‌ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಅಧಿಕಾರವಿದೆ’ ಎಂದು ಹೇಳಿದರು.

‘20 ತಿಂಗಳ ನಂತರ ಸಂಪುಟಪುನರ್‌ರಚನೆ ಮಾಡುತ್ತೇವೆ ಎಂದಿದ್ದೆವು. ಅದಕ್ಕಾಗಿ ಉಪಮುಖ್ಯಮಂತ್ರಿ ಸೇರಿ ಬಹುತೇಕ ಸಚಿವರು ಸೋಮವಾರರಾಜೀನಾಮೆ ಸಲ್ಲಿಸಿದ್ದಾರೆ. ಕೆಲವು ಹಿರಿಯ ಸದಸ್ಯರಿಗೆ ಮೊದಲಹಂತದಲ್ಲಿ ಸಚಿವರನ್ನಾಗಿ ಮಾಡಲು ಆಗಿರಲಿಲ್ಲ. ಕೆಲವರು ಇನ್ನೂ ಅರ್ಹರಿದ್ದಾರೆ, ಅವರಿಗೂ ಅವಕಾಶ ಸಿಕ್ಕಿರಲಿಲ್ಲ. ಈಗ ಅವರನ್ನೆಲ್ಲ ಸಂಪುಟಕ್ಕೆ ಸೇರಿಸಲು ಅವಕಾಶ ಕೊಡುವ ದೃಷ್ಟಿಯಿಂದ ಸ್ವಂತ ನಿರ್ಧಾರದ ಮೇಲೆ ಸಚಿವರು ರಾಜೀನಾಮೆ ಕೊಟ್ಟಿದ್ದಾರೆ’ ಎಂದರು.

‘ಕೆಲವು ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಒಬ್ಬರೆ ಸಂಪುಟದಲ್ಲಿ ಇದ್ದಾರೆ ಎಂದು ಹೇಳುತ್ತಿದ್ದಾರೆ. ರಾಜೀನಾಮೆ ಕೊಟ್ಟಿರುವವರೆಲ್ಲರೂ ಸಂಪುಟದಲ್ಲಿಯೇ ಇದ್ದಾರೆ. ಸಂಪುಟ ಇನ್ನೂ ಅಸ್ಥಿತ್ವದಲ್ಲಿದೆ.ಸಚಿವರ ರಾಜೀನಾಮೆಯನ್ನು ಮುಖ್ಯಮಂತ್ರಿ ಶಿಫಾರಸು ಮಾಡಬೇಕು. ಆ ನಂತರವೇ ಅದು ಅಂಗೀಕಾರಗೊಳ್ಳುವುದು’ ಎಂದು ತಿಳಿಸಿದರು.

‘ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಪ್ರಜಾಪ್ರಭುತ್ವ ವಿರೋಧಿ ಕೆಲಸವನ್ನುಬಿಜೆಪಿ ಆರಂಭಿಸಿದೆ. ನಾನು ನಿನ್ನೆಯೂ ಹೇಳಿದ್ದೆ. ಬಿಜೆಪಿಗೆ 2018ರಲ್ಲಿ ಜನಾದೇಶ ಸಿಕ್ಕಿಲ್ಲ. ರಾಜ್ಯದ ಜನರು ಬಿಜೆಪಿಗೆ ಜನಾದೇಶ ಕೊಟ್ಟಿಲ್ಲ. ಸರ್ಕಾರ ಮಾಡಲು. ನಮಗೆ ಶೇ 38, ಬಿಜೆಪಿಗೆ ಶೇ 37, ಜೆಡಿಎಸ್‌ಗೆ ಶೇ 18–19 ಮತ ಕೊಟ್ಟಿದ್ದಾರೆ. ಶೇಕಡಾವಾರು ತಗೊಂಡ್ರೆ ನಮಗೇ ಶೇ 1ರಷ್ಟು ಮತ ಜಾಸ್ತಿ ಇದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಜೊತೆಗೂಡಿಸಿದರೆ ಮತದ ಪ್ರಮಾಣ ಶೇ 57ರಷ್ಟು ಆಗುತ್ತದೆ. ಹೀಗಿದ್ದೂ ಬಿಜೆಪಿ ಏಕೈಕ ದೊಡ್ಡ ಪಕ್ಷ ಅಂತ ಹೇಳಿಕೊಳ್ಳುತ್ತಿದೆ. ಅದೇ ಕಾರಣಕ್ಕೆ ರಾಜ್ಯಪಾಲರು ಮೊದಲು ಮೈತ್ರಿ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಿದರು’ ಎಂದು ಹೇಳಿದರು.

‘ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ವಿಫಲವಾದ ನಂತರ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದಾದ ನಂತರವೂ ಬಿಜೆಪಿಮೈತ್ರಿ ಸರ್ಕಾರವನ್ನು ಉರುಳಿಸಲಯ ಪ್ರಯತ್ನಿಸುತ್ತಲೇಇದೆ. ಅವರು ಐದು ಬಾರಿ ಸರ್ಕಾರ ಉರುಳಿಸಲು ಯತ್ನಿಸಿದರು. ಇದು ಅವರ 6ನೇ ಯತ್ನ. ಇದರಲ್ಲಿ ಕೇವಲ ಕರ್ನಾಟಕ ಬಿಜೆಪಿ ಘಟಕ ಅಷ್ಟೇ ಅಲ್ಲ, ರಾಷ್ಟ್ರೀಯ ನಾಯಕರಾದ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಪಾಲ್ಗೊಂಡಿದ್ದಾರೆ. ಹಣದ ಬಲದಿಂದ ಮತ್ತು ರಾಜಕೀಯ ಬಲದಿಂದ ಅವರು ಮೈತ್ರಿ ಸರ್ಕಾರವನ್ನು ಅಸ್ಥಿತರಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT