ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಂಧೆ’ ವರದಿ: ಜಯಮಾಲಾ ಮೌನ

ಅಳಲು ಆಲಿಸಿ ಸುಮ್ಮನಾದ ರಾಜ್ಯ ಸರ್ಕಾರ– ಲೈಂಗಿಕ ವೃತ್ತಿನಿರತರ ಆಕ್ರೋಶ
Last Updated 17 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದಲ್ಲಿ ‘ದಂಧೆ’ಯಲ್ಲಿ (ಲೈಂಗಿಕ ವೃತ್ತಿ) ತೊಡಗಿರುವ ಒಂದು ಲಕ್ಷಕ್ಕೂ ಹೆಚ್ಚು ದಮನಿತ ಮಹಿಳೆ‌ಯರ ಪುನಶ್ಚೇತನ ಮತ್ತು ಸಶಕ್ತೀಕರಣಕ್ಕೆ ವಾರ್ಷಿಕ ₹733 ಕೋಟಿಯನ್ನು ಮೀಸಲಿಡಬೇಕೆಂಬ ಶಿಫಾರಸನ್ನೊಳಗೊಂಡ ಲೈಂಗಿಕ ಕಾರ್ಯಕತೆಯರ
ಅಧ್ಯಯನ ಸಮಿತಿ ವರದಿ ದೂಳು ತಿನ್ನುತ್ತಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವಿಧಾನಪರಿಷತ್‌ ಸದಸ್ಯೆಯಾಗಿದ್ದ ಜಯಮಾಲಾ ಈ ಸಮಿತಿಯ ನೇತೃತ್ವ ವಹಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ. ತಾನು ಶ್ರಮವಹಿಸಿ ಸಿದ್ಧಪಡಿಸಿದ ವರದಿಯಲ್ಲಿರುವ ಶಿಫಾರಸುಗಳ ಅನುಷ್ಠಾನ ವಿಷಯದಲ್ಲಿ ಅವರು ‘ಮೌನ’ ವಹಿಸಿರುವುದಕ್ಕೆ ಲೈಂಗಿಕ ವೃತ್ತಿನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಚ್ಚರಿಯೆಂದರೆ, 2017ರಲ್ಲಿ ಇಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ‘ನಾನು ನೀಡಿದ ವರದಿದೂಳು ಹಿಡಿಯುವಂತೆ ಮಾಡಬೇಡಿ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದ ಉಮಾಶ್ರೀ ಅವರಲ್ಲಿ ಕೈಮುಗಿದು ಪ್ರಾರ್ಥನೆ ಮಾಡಿದ್ದರು!

‘ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಸಮಿತಿಯ ಸದಸ್ಯರು ದಂಧೆಯಲ್ಲಿರುವ 11 ಸಾವಿರಕ್ಕೂ ಹೆಚ್ಚು ಮಂದಿಯ ಅಳಲು ಆಲಿಸಿದ್ದರು. ಬದುಕು ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು ದೊರಕಿಸಿಕೊಡುವ ಭರವಸೆ ನೀಡಿದ್ದರು. ನಾವೂ ಖುಷಿ ಪಟ್ಟಿದ್ದೆವು. ಎಲ್ಲ ವಿಷಯಗಳನ್ನು ಮುಚ್ಚುಮರೆ ಇಲ್ಲದೆ ಹೇಳಿಕೊಂಡಿದ್ದೆವು. ಆದರೆ, ಏನೂ ಪ್ರಯೋಜನ ಆಗಿಲ್ಲ’ ಎಂದು ಬಳ್ಳಾರಿಯ ಲೈಂಗಿಕ ಕಾರ್ಯಕರ್ತೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕೃತ ಮಾಹಿತಿ ಪ್ರಕಾರ ರಾಜ್ಯದಲ್ಲಿ 1,00,676 ಮಹಿಳೆಯರು ಲೈಂಗಿಕ ವೃತ್ತಿಯಲ್ಲಿ ತೊಡಗಿದ್ದಾರೆ. ಆದರೆ, ಸರ್ಕಾರೇತರ ಸಂಸ್ಥೆಗಳ ಪ್ರಕಾರ ಈ ಸಂಖ್ಯೆ ಏಳೆಂಟು ಪಟ್ಟು ಹೆಚ್ಚು!

‘ವರದಿ ಜಾರಿಗೊಳಿಸುವುದು ಬಿಡಿ. ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್ವಸತಿ ಕಲ್ಪಿಸುವ ‘ಚೇತನ’ ಯೋಜನೆಯಡಿ ವಾರ್ಷಿಕ 1,000 ಮಂದಿಗೆ ನೀಡುತ್ತಿದ್ದ ನೆರವನ್ನೂ ಸರ್ಕಾರ ಅರ್ಧಕ್ಕೆ ಇಳಿಸಿದೆ. ಈ ದಂಧೆಯಲ್ಲಿ ತೊಡಗಿರುವ ಒಂದು ಸಾವಿರಕ್ಕೂ ಹೆಚ್ಚು ಅಪ್ರಾಪ್ತರು ಕಾಂಡೋಮ್‌ ಹಂಚುವ ಜಾಲಕ್ಕೆ ಸಿಕ್ಕು ನರಳುತ್ತಿದ್ದಾರೆ’ ಎಂದು ಸಮಿತಿಯ ಸದಸ್ಯೆಯಾಗಿದ್ದ, ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಹೇಳಿದರು.

‘ಲೈಂಗಿಕ ಕಾರ್ಯಕರ್ತೆಯರ
ಶ್ರೇಯೋಭಿವೃದ್ಧಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ನಾನು ಈಗಾಗಲೇ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇನೆ. ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ಎಚ್‌ಐವಿ ಸೋಂಕು ನಿಯಂತ್ರಣದ ಹೆಸರಿನಲ್ಲಿ ಆರೋಗ್ಯ ಇಲಾಖೆಯಡಿ ಲೈಂಗಿಕ ವೃತ್ತಿನಿರತರನ್ನು ನೇಮಿಸಿಕೊಳ್ಳುವುದು ನಾಚಿಕೆಗೇಡು’ ಎಂದೂ ಅವರು ಸಿಟ್ಟು ಹೊರಹಾಕಿದರು.

‘ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ವಾರ್ಷಿಕ ₹16 ಸಾವಿರ ಕೋಟಿಗೂ ಹೆಚ್ಚು ವೆಚ್ಚ ಮಾಡಿದರೂ ನಮ್ಮ ಸಮುದಾಯಕ್ಕೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ದಂಧೆಯಲ್ಲಿರುವ ಎಚ್‌ಐವಿ ಸೋಂಕಿತರಿಗೆ ಅಂತ್ಯೋದಯ ಅನ್ನ ಭಾಗ್ಯ ಕಾರ್ಡ್‌ ವಿತರಿಸಬೇಕು ಹಾಗೂ ಪೌಷ್ಟಿಕ ಆಹಾರ, ಆರ್ಥಿಕ ಭದ್ರತೆಗಾಗಿ ಮಾಸಿಕ ತಲಾ ₹5 ಸಾವಿರ ನೀಡಬೇಕು. ಇದಕ್ಕೆ ವಾರ್ಷಿಕ ₹ 48 ಕೋಟಿ ಮೀಸಲಿಡುವಂತೆ ಶಿಫಾರಸು ಮಾಡಿದ್ದೇವೆ ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದ್ದರು’ ಎಂದು ಎಚ್‌ಐವಿ ಸೋಂಕಿತ
ಹಾಸನದ ಲೈಂಗಿಕ ಕಾರ್ಯಕರ್ತೆ ತಿಳಿಸಿದರು.

‘ಎಂಎಸ್‌ಎಂ (ಲೈಂಗಿಕ ಅಲ್ಪಸಂಖ್ಯಾತರು) ವರ್ಗದವರಿಗೆ ಮಹಿಳಾ ಅಭಿವೃದ್ಧಿ ನಿಗಮದಿಂದ ನೆರವು ನೀಡಲಾಗುತ್ತಿದೆ. ಆದರೆ, ನಮಗೆ ಯಾವುದೇ ಯೋಜನೆಗಳಿಲ್ಲ. ಮುಖ ಮುಚ್ಚಿಕೊಂಡು, ಅಪಮಾನಗಳಿಂದ ದುಸ್ತರ ಬದುಕು ಸಾಗಿಸಲೇಬೇಕು’ ಎಂದು ಅವರು ಕಣ್ಣೀರಿಟ್ಟರು.

ವರದಿ ಸಲ್ಲಿಸಿ ಒಂದೂವರೆ ವರ್ಷ

ಲೈಂಗಿಕ ವೃತ್ತಿನಿರತರ ಸ್ಥಿತಿಗತಿ ಅಧ್ಯಯನಕ್ಕೆ ಹಿಂದಿನ ಸರ್ಕಾರ 21 ಸದಸ್ಯರ ಸಮಿತಿ ರಚಿಸಿತ್ತು. ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಈ ಸಮಿತಿ, ಹೆಣ್ಣು ಮಕ್ಕಳ ಶೋಷಣೆಯ ಸ್ವರೂಪದ ವಿಶ್ಲೇಷಣೆ, ಅವರು ಎದರಿಸುತ್ತಿರುವ ಅಪಾಯಗಳನ್ನು ಅಧ್ಯಯನ ಮಾಡಿ, ಈ ವರ್ಗದ ಜೀವನಮಟ್ಟ ಸುಧಾರಣೆಗೆ ನೀತಿ ಮತ್ತು ಕಾರ್ಯಸೂಚಿಯನ್ನು ಒಳಗೊಂಡ ವರದಿಯನ್ನು 2017ರ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ವರದಿ ಬಹಿರಂಗವೂ ಆಗಿಲ್ಲ, ಶಿಫಾರಸುಗಳು ಜಾರಿಯೂ ಆಗಿಲ್ಲ!

ಮೀಸಲಿಡಬೇಕಾದ ಮೊತ್ತ

l ಎಚ್‌ಐವಿ ಸೋಂಕಿತರಿಗೆ ವಾರ್ಷಿಕ ₹ 48 ಕೋಟಿ

l ‘ದಂಧೆ’ ತೊರೆಯಲು ಇಚ್ಚಿಸುವವರ ‘ಚೇತನ’ ಯೋಜನೆಗೆ ₹ 100 ಕೋಟಿ

l 45 ವರ್ಷ ಮೀರಿದ ಲೈಂಗಿಕ ಕಾರ್ಯಕರ್ತೆಯರ ಮಾಸಾಶನಕ್ಕೆ ₹120ಕೋಟಿ

l ಎಚ್‌ಐವಿ ಸೋಂಕಿತರ, ಲೈಂಗಿಕ ವೃತ್ತಿನಿರತರ ನಿರ್ಗತಿಕ ಮಕ್ಕಳ ಪಾಲನೆಗೆ ₹ 45 ಕೋಟಿ

l ಲೈಂಗಿಕ ಕಾರ್ಯಕರ್ತೆಯರ ವಸತಿ ಯೋಜನೆಗೆ ₹ 200 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT