ಸೋಮವಾರ, ಸೆಪ್ಟೆಂಬರ್ 20, 2021
21 °C
ಮಳೆಗಾಲ ಸಮೀಪಿಸಿದರೂ ಆರಂಭವಾಗದ ಭೂಕುಸಿತ ತಡೆ ಕಾಮಗಾರಿ

ಶಿರಾಡಿ ಘಾಟಿಯಲ್ಲಿವೆ 26 ಅಪಾಯಕಾರಿ ಸ್ಥಳ!

ವಿ.ಎಸ್‌.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಯಲ್ಲಿ ಅಡ್ಡಹೊಳೆಯಿಂದ ಮಾರನಹಳ್ಳಿಯವರೆಗೆ ಕಳೆದ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತದಿಂದ ಸೃಷ್ಟಿಯಾದ 26 ಅಪಾಯಕಾರಿ ಸ್ಥಳಗಳಲ್ಲಿ ಶಾಶ್ವತ ಭೂಕುಸಿತ ತಡೆ ಕಾಮಗಾರಿ ಆರಂಭಿಸಲು ಲೋಕೋ‍ಪಯೋಗಿ ಇಲಾಖೆಗೆ ಈವರೆಗೂ ಸಾಧ್ಯವಾಗಿಲ್ಲ. ಇದರಿಂದಾಗಿ ಈ ಬಾರಿಯ ಮಳೆಗಾಲವೂ ಜನರಿಗೆ ದುಸ್ವಪ್ನವಾಗಿ ಕಾಡುವ ಸಾಧ್ಯತೆ ಇದೆ.

2018ರ ಆಗಸ್ಟ್‌ 13ರಂದು ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿಯಲ್ಲಿ ಗುಡ್ಡ ಕುಸಿದು ಹೆದ್ದಾರಿಯ ಮೇಲೆ ಬಿದ್ದಿತ್ತು. ನಂತರ ನಿರಂತರವಾಗಿ ಭೂಕುಸಿತ ಸಂಭವಿಸುತ್ತಲೇ ಇದ್ದ ಕಾರಣದಿಂದ ಆಗಸ್ಟ್‌ 13ರಿಂದ ನವೆಂಬರ್‌ ಮಧ್ಯ ಭಾಗದವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಪರಿಣಾಮವಾಗಿ ಬೆಂಗಳೂರು– ಮಂಗಳೂರು ನಡುವಿನ ವಾಹನ ಸಂಚಾರ ಮತ್ತು ಸರಕು ಸಾಗಣೆಯ ಮೇಲೆ ಬಲವಾದ ಹೊಡೆತ ಬಿದ್ದಿತ್ತು.

ಅಡ್ಡಹೊಳೆಯಿಂದ ಮಾರನಹಳ್ಳಿಯವರೆಗೆ 10 ಕಡೆಗೆ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದ್ದರೆ, 16 ಕಡೆಗಳಲ್ಲಿ ಹೆದ್ದಾರಿಯ ಬದಿಯ ತಡೆಗೋಡೆ ಕುಸಿದು ಆಳವಾದ ಕಣಿವೆಗೆ ಉರುಳಿತ್ತು. ರಸ್ತೆಯ ಮೇಲೆ ಬಿದ್ದಿದ್ದ ಮಣ್ಣನ್ನು ತೆರವು ಮಾಡಿರುವುದು ಮತ್ತು ತಡೆಗೋಡೆ ಕುಸಿದ ಸ್ಥಳಗಳಲ್ಲಿ ಮರಳಿನ ಚೀಲ ಪೇರಿಸಿ, ಬಣ್ಣದ ರಿಬ್ಬನ್‌ ಕಟ್ಟಿ ಎಚ್ಚರಿಕೆ ನೀಡಿರುವುದರ ಹೊರತಾಗಿ ಯಾವ ಕೆಲಸವೂ ಆಗಿಲ್ಲ.

ಮತ್ತೆ ಉರುಳುವ ಭೀತಿ: ಕಳೆದ ಬಾರಿ ಗುಡ್ಡ ಕುಸಿದಿದ್ದ ಬಹುತೇಕ ಸ್ಥಳಗಳಲ್ಲಿ ಈ ಬಾರಿಯೂ ಅಪಾಯದ ಸ್ಥಿತಿಯೇ ಇದೆ. ಅರ್ಧ ಜರಿದು ನಿಂತಿರುವ ಮಣ್ಣಿನ ರಾಶಿ, ಕಲ್ಲು ಬಂಡೆಗಳು ಕೆಳಕ್ಕೆ ಉರುಳಲು ಕಾದು ಕುಳಿತಿವೆ. ಇತ್ತೀಚೆಗೆ ಸುರಿದ ಸಣ್ಣ ಮಳೆಗೆ ಕೆಲವು ಕಡೆ ಮಣ್ಣಿನ ರಾಶಿ ತುಸು ಕೆಳಕ್ಕೆ ಜಾರಿರುವುದು ಕಂಡುಬರುತ್ತಿದೆ.

ಕಡತಗಳಲ್ಲೇ ಬಾಕಿಯಾದ ಕೆಲಸ: ಹೆದ್ದಾರಿಯುದ್ದಕ್ಕೂ ಮತ್ತೆ ಭೂಕುಸಿತ ಸಂಭವಿಸಿದಂತೆ ತಡೆಯುವ ಸಂಬಂಧ ಅಧ್ಯಯನ ನಡೆಸಿ, ವರದಿ ನೀಡಲು ಎರಡು ಸಮಿತಿಗಳನ್ನು ನೇಮಿಸಲಾಗಿತ್ತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಣ್ಣು ಎಂಜಿನಿಯರಿಂಗ್‌ ವಿಭಾಗದ ಪ್ರೊ.ಬಿ.ಆರ್‌. ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ನೀಡಿದ್ದ ವರದಿ ಆಧರಿಸಿ, ಶಾಶ್ವತವಾಗಿ ಭೂಕುಸಿತ ತಡೆಗೆ ಕಾಮಗಾರಿ ಕೈಗೊಳ್ಳಲು ಪ್ರಸ್ತಾವ ಸಿದ್ಧಪಡಿಸಲಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ವಲಯದ ಮುಖ್ಯ ಎಂಜಿನಿಯರ್‌ ಗಣೇಶ್, ‘ಶಿರಾಡಿ ಘಾಟಿಯಲ್ಲಿ ಭೂಕುಸಿತ ತಡೆ ಕಾಮಗಾರಿಗೆ ₹ 35 ಕೋಟಿ ಅನುದಾನ ಕೋರಿ ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಮಂಜೂರಾತಿ ದೊರಕಿಲ್ಲ. ರಾಜ್ಯ ಸರ್ಕಾರದಿಂದ ಅನುದಾನ ಪಡೆದು ತುರ್ತು ಕಾಮಗಾರಿ ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

ಕೊನೆ ಕ್ಷಣದಲ್ಲಿ ತರಾತುರಿ: ಮುಂಗಾರು ಮಳೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಕೊನೆಯ ಹಂತದಲ್ಲಿ ಶಿರಾಡಿ ಘಾಟಿಯಲ್ಲಿ ಭೂಕುಸಿತ ತಡೆ ಕಾಮಗಾರಿ ಆರಂಭಕ್ಕೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯದ ಸಕಲೇಶಪುರ ಉಪ ವಿಭಾಗದ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಬುಧವಾರ ಸ್ಥಳ ತಪಾಸಣೆಯಲ್ಲಿ ತೊಡಗಿದ್ದುದು ಕಂಡುಬಂತು.

ಡಾಂಬರೀಕರಣಕ್ಕೆ ₹ 10 ಕೋಟಿ: ಕರಾವಳಿ ಮತ್ತು ಘಟ್ಟ ಪ್ರದೇಶದ ನಡುವಿನ ಮತ್ತೊಂದು ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿಯಲ್ಲೂ (ರಾಷ್ಟ್ರೀಯ ಹೆದ್ದಾರಿ 234) ಕಳೆದ ಮಳೆಗಾಲದಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಈ ಮಾರ್ಗದಲ್ಲಿ ಚಾರ್ಮಾಡಿ ಗ್ರಾಮದಿಂದ ಕೊಟ್ಟಿಗೆಹಾರದವರೆಗೆ ಮರು ಡಾಂಬರೀಕರಣಕ್ಕೆ ₹ 10 ಕೋಟಿ ಬಿಡುಗಡೆ ಮಾಡಲಾಗಿದೆ. ತುರ್ತಾಗಿ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು