ಇಷ್ಟಲಿಂಗ ಪ್ರಿಯ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ

7

ಇಷ್ಟಲಿಂಗ ಪ್ರಿಯ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ

Published:
Updated:

ತುಮಕೂರು: ಶಿಕ್ಷಣದ ಮೂಲಕ ಲಕ್ಷಾಂತರ ಜನರಿಗೆ ಬದುಕು ರೂಪಿಸಿಕೊಟ್ಟ ತ್ರಿವಿಧ ದಾಸೋಹಿ, ಇಷ್ಟಲಿಂಗ ಪ್ರಿಯರಾದ ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ (111) ಅವರು ಸೋಮವಾರ ಲಿಂಗೈಕ್ಯರಾದರು. ಇಂದು ಪುಷ್ಯ ಶುದ್ಧ ಹುಣ್ಣಿಮೆ.

ಸ್ವಾಮೀಜಿ ಇಂದು ಬೆಳಿಗ್ಗೆ 11.44ಕ್ಕೆ ಶಿವಸಾಯುಜ್ಯವನ್ನು ಹೊಂದಿದರು ಎಂದು ಶ್ರೀಮಠ ಅಧಿಕೃತವಾಗಿ ಪ್ರಕಟಿಸಿತು. ನಾಳೆ ಮಧ್ಯಾಹ್ನ 3 ಗಂಟೆಯ ವರೆಗೆ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಕಟಿಸಿದರು. ಸಂಜೆ 4.30ಕ್ಕೆ ಕ್ರಿಯಾ ಸಮಾಧಿ ನಡೆಯಲಿದೆ ಎಂದು ಮಠದ ಮೂಲಗಳು ಹೇಳಿವೆ.

ಒಂದೂವರೆ ತಿಂಗಳುಗಳಿಂದ ಸ್ವಾಮೀಜಿ ಅವರ ಆರೋಗ್ಯ ಸರಿಯಿರಲಿಲ್ಲ. ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆಯ ನಂತರ ಮಠದಲ್ಲಿಯೇ ಸ್ವಾಮೀಜಿ ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿತ್ತು. ಶ್ವಾಸಕೋಶಕ್ಕೆ ಸೋಂಕು ತಗುಲಿದ ಕಾರಣ ಆರೋಗ್ಯ ಬಿಗಡಾಯಿಸಿತು. ಭಾನುವಾರ ಚೇತರಿಕೆಯ ಲಕ್ಷಣಗಳು ಗೋಚರಿಸಿದರೂ, ಸೋಮವಾರ ಆರೋಗ್ಯ ಸ್ಥಿತಿ ವಿಷಮಿಸಿತು ಎಂದು ಮೂಲಗಳು ಹೇಳಿವೆ.

‘ನಡೆದಾಡುವ ದೇವರು’, ‘ಜಗದ ಸಂತ’, ‘ತ್ರಿವಿಧ ದಾಸೋಹಿ’ ಎಂದೆಲ್ಲ ಭಕ್ತರು ಗೌರವಿಸುತ್ತಿದ್ದ ಸ್ವಾಮೀಜಿಯವರ ಅಗಲಿಕೆಯಿಂದ ಕೋಟ್ಯಂತರ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಶ್ರೀಗಳು ಸನ್ಯಾಸ ಸ್ವೀಕರಿಸಿ 88 ವರ್ಷಗಳೇ ಕಳೆದಿವೆ. ಮಠಾಧ್ಯಕ್ಷರಾಗಿ 77 ವರ್ಷ ಕಾರ್ಯನಿರ್ವಹಿಸಿದ್ದರು. ಈ ಎಲ್ಲವೂ ದಾಖಲೆಯೇ ಸರಿ.

ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದ ಗಂಗಮ್ಮ ಮತ್ತು ಪಟೇಲ್‌ ಹೊನ್ನೇಗೌಡ ದಂಪತಿಯ 13ನೇ ಪುತ್ರರಾಗಿ ಜನಿಸಿದವರು ಶಿವಣ್ಣ (ಪೂರ್ವಾಶ್ರಮದ ಹೆಸರು). ಹುಟ್ಟಿದೂರಿಗೆ ಸಮೀಪದ ಪಾಲನಹಳ್ಳಿ, ತುಮಕೂರು ತಾಲ್ಲೂಕಿನ ನಾಗವಲ್ಲಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ತುಮಕೂರಿನಲ್ಲಿ ಪದವಿ ಪೂರ್ವ ಶಿಕ್ಷಣ (ಆಗ ಎಂಟ್ರನ್ಸ್‌) ಹಾಗೂ ಬೆಂಗಳೂರಿನಲ್ಲಿ ಪದವಿ ಶಿಕ್ಷಣ (ಬಿಎ ಆನರ್ಸ್‌) ಪಡೆದರು.

ಶಿವಣ್ಣ ಅವರಿಗೆ 1930ರಲ್ಲಿ ಸಿದ್ಧಗಂಗಾ ಮಠದ ಉದ್ಧಾನ ಶಿವಯೋಗಿಗಳು ಸನ್ಯಾಸ ದೀಕ್ಷೆ ನೀಡಿ ‘ಶಿವಕುಮಾರ ಸ್ವಾಮಿ’ ಎಂದು ನಾಮಕರಣ ಮಾಡಿದ್ದರು. ತಮ್ಮ ಉತ್ತರಾಧಿಕಾರಿ ಎಂದೂ ಘೋಷಿಸಿದ್ದರು. ಉದ್ಧಾನ ಶಿವಯೋಗಿಗಳು ಲಿಂಗೈಕ್ಯರಾದ ಬಳಿಕ 1941ರಲ್ಲಿ ಪೀಠಾರೋಹಣ ಮಾಡಿದರು.

ಅನ್ನ, ಅರಿವು, ಅಕ್ಷರ, ಅಧ್ಯಾತ್ಮ ದಾಸೋಹಿ ಶ್ರೀಶಿವಕುಮಾರ ಸ್ವಾಮೀಜಿ

‘ಮಠದಿಂದ ಘಟ ಅಲ್ಲ, ಘಟದಿಂದ ಮಠ’ ಎನ್ನುವ ಮಾತಿಗೆ ಅನ್ವರ್ಥದಂತೆ ಜೀವನ ನಡೆಸಿದವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ. ಅಡವೀಸ್ವಾಮಿಗಳ ಪರಂಪರೆಯ ಸಿದ್ಧಗಂಗೆ ಮಠಕ್ಕೆ ತಮ್ಮ ತಪಃಶಕ್ತಿ ಧಾರೆ ಎರೆದವರು ಉದ್ಧಾನ ಶಿವಯೋಗಿಗಳು. ಅವರು ಕಟ್ಟಿದ ಮಹಾಮನೆಯಲ್ಲಿ ಬೆಳಕಿನ ದೀವಿಗೆ ಹಚ್ಚಿ ನಾಡಿನ ಎಲ್ಲೆಡೆಯಿಂದ ಜಾತಿಮತದ ತಾರತಮ್ಯ ಇಲ್ಲದೆ ಮಕ್ಕಳನ್ನು ಕರೆತಂದು ಓದಲು ಕೂರಿಸಿ, ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶನ ಮಾಡಿದವರು ಶಿವಕುಮಾರ ಸ್ವಾಮೀಜಿ. ಶರಣರು ಜನಪ್ರಿಯಗೊಳಿಸಿದ ದಾಸೋಹ ತತ್ವಕ್ಕೆ ಅರಿವು, ಅಧ್ಯಾತ್ಮ, ಅಕ್ಷರವನ್ನೂ ಸೇರಿಸಿದ ಧನ್ಯಜೀವ ಅವರದು. ಮಠದಲ್ಲಿ ವಿದ್ಯೆ ಕಲಿತು ಬದುಕು ಕಟ್ಟಿಕೊಂಡವರ ಸಂಖ್ಯೆಯನ್ನು ಲೆಕ್ಕ ಇಟ್ಟವರಿಲ್ಲ.

ರಾಜ್ಯದಲ್ಲಿ ಮೊದಲ ಬಾರಿಗೆ ಬಸವ ಜಯಂತಿಯನ್ನು ಹಳ್ಳಿಹಳ್ಳಿಗಳಿಗಳಿಗೆ ಕೊಂಡೊಯ್ದ ಕೀರ್ತಿ ಶಿವಕುಮಾರ ಶ್ರೀಗಳದ್ದು. ಆ ಮೂಲಕ ಜಾತಿಯ ಜಾಡ್ಯದಿಂದ ನಲುಗಿದ್ದ ಹಳ್ಳಿಗಳಲ್ಲಿ ಸಮತೆಯ ದೀಪ ಬೆಳಗಿಸಿದರು. 1979ರಲ್ಲಿ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮವನ್ನು ಶ್ರೀಗಳು ಸಂಘಟಿಸಿದರು. ಕಾರ್ಯಕ್ರಮದಲ್ಲಿ ಭಾಷಣ ಅಷ್ಟೇ ಅಲ್ಲ ಕಾವ್ಯವಾಚನವೂ ಇರಬೇಕು ಎಂದು ತೀರ್ಮಾನಿಸಿದರು. ರಾತ್ರಿ ಬಸವೇಶ್ವರರ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದರು. ಇದರಿಂದ ತತ್ವಬೋಧನೆಯ ಜೊತೆಯಲ್ಲಿಯೇ ಜನರಲ್ಲಿ ಸಾಮಾಜಿಕ ಪ್ರಜ್ಞೆಯೂ ಬೆಳೆಯಿತು. ಶ್ರೀಗಳ ಬದುಕಿನ ಪ್ರಮುಖ ಸಾಧನೆಯು ಘಟ್ಟವಾಗಿಯೂ ಈ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮವನ್ನು ಕಾಣಬಹುದು. ಅಂದು ಶ್ರೀಗಳು ಹಾಕಿದ ಬುನಾದಿ ಇಂದಿಗೂ ಮುಂದುವರಿದಿದೆ.

ಅಕ್ಷರ ಜ್ಞಾನದ ಶಿಕ್ಷಣವಷ್ಟೇ ಅಲ್ಲ ಬದುಕಿಗೆ ಅಗತ್ಯವಾದ ಶಿಕ್ಷಣವನ್ನೂ ಸ್ವಾಮೀಜಿ ಮಕ್ಕಳಿಗೆ ಕಲಿಸಿದ್ದಾರೆ. ಮಠದ ಹೊಲ ತೋಟಗಳಲ್ಲಿ ಮತ್ತು ಕೃಷಿ ಚಟುವಟಿಕೆಗಳಲ್ಲಿ ಮಕ್ಕಳನ್ನೂ ತೊಡಗಿಸುವ ಮೂಲಕ ಅವರಿಗೆ ಕಾಯಕ ಮತ್ತು ಶ್ರಮ ಸಂಸ್ಕೃತಿಯ ಪಾಠಗಳನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟರು.

ಉದ್ದಾನ ಶಿವಯೋಗಿಗಳ ಕಾಲದಲ್ಲಿ ಅಂದರೆ 1940–41ರಲ್ಲಿ ಮಠದಲ್ಲಿ 60 ವಿದ್ಯಾರ್ಥಿಗಳು ಮಾತ್ರ ಇದ್ದರು. ಈ ಸಂಖ್ಯೆಯನ್ನು ಸ್ವಾಮೀಜಿ ಹೆಚ್ಚಿಸುತ್ತಲೇ ಹೋದರು. 1979ರಲ್ಲಿ ಮಠಕ್ಕೆ ಸಂಜೆಯ ಪ್ರಾರ್ಥನೆ ವೇಳೆಗೆ ಬಂದಿದ್ದ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ, ‘ಒಂದೇ ಮಠದ ಆಶ್ರಯದಲ್ಲಿ ಉಚಿತ ಊಟ, ವಸತಿ ಪಡೆದು ಇಷ್ಟೊಂದು ಮಕ್ಕಳು ಓದುತ್ತಿರುವುದನ್ನು ನಾನು ಇಲ್ಲಿಯೇ ಮೊದಲು ಕಂಡಿದ್ದು’ ಎಂದು ಉದ್ಗರಿಸಿದ್ದರು. ಆಗ 3800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.

ಶಿವಕುಮಾರ ಸ್ವಾಮೀಜಿ ನುಡಿಮುತ್ತುಗಳು

* ನಾವು ಒಮ್ಮೊಮ್ಮೆ ಯೋಚಿಸುತ್ತೇವೆ, ಶ್ರೀಮಠ ಹೇಗೆ ಇಷ್ಟು ದೊಡ್ಡದಾಗಿ ಬೆಳೆಯಿತು ಎಂದು. ಆಗ ಇದು ಗುರುಗಳ ಶ್ರೀರಕ್ಷೆ ಹಾಗೂ ‘ಶಿವಯೋಗಿಯ ದೇಹ’ ವೃಥಾ ಸವೆಯದಂತೆ ಭಕ್ತರು ನಡೆಸಿಕೊಂಡಿದ್ದರ ಪರಿ ಎನಿಸುತ್ತಿರುತ್ತದೆ.

* ದೇಹಕ್ಕೆ ಹಸಿವಾದರೆ ಪ್ರಸಾದದ ಅಗತ್ಯವುಂಟು, ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾರ್ಥನೆಯ ಅಗತ್ಯವುಂಟು. ಪ್ರಸಾದ ಸೇವನೆಯಲ್ಲೂ, ಪ್ರಾರ್ಥನೆಯಲ್ಲೂ ಏಕಾಗ್ರತೆ ಅತ್ಯವಶ್ಯಕ.

* ಜೀವನದಲ್ಲಿ ಒಳ್ಳೆಯ ಭವಿಷ್ಯ ಉಂಟಾಗಬೇಕಾದರೆ, ಗೌರವವಾದ ಬಾಳ್ವಿಕೆ ಉಂಟಾಗಬೇಕಾದರೆ ಕಾಲವನ್ನು ವ್ಯರ್ಥ ಮಾಡದೆ ಜ್ಞಾನ ಸಂಪಾದನೆ ಮಾಡಬೇಕು.

* ಧರ್ಮ ಅಧರ್ಮಗಳಲ್ಲಿನ ನಂಬುಗೆಗಿಂತ, ಅವರವರ ಭಕುತಿಗೆ ತಕ್ಕಂತೆ ಅವರವರ ಭಾವಕ್ಕೆ ತಕ್ಕಂತೆ ನಡೆದುಕೊಳ್ಳುವುದನ್ನೇ ಧರ್ಮವಾಗಿಸಿಕೊಂಡಿದ್ದೇವೆ.

ಸ್ವಾಮೀಜಿ ಬದುಕು ಸಾಗಿಬಂದ ಹಾದಿ

* 1908ರ ಏಪ್ರಿಲ್ 1ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕು ವೀರಾಪುರ ಗ್ರಾಮದಲ್ಲಿ ಜನನ

* 1913–27: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ, ನಾಗವಲ್ಲಿಯಲ್ಲಿ ಮಾಧ್ಯಮಿಕ, ತುಮಕೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಮೆಟ್ರಿಕ್ಯುಲೇಶನ್ ತೇರ್ಗಡೆ

* 1927–30: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಪದವಿ

* 1930ರ ಮಾ.3ರಂದು ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ. ಶಿವಕುಮಾರ ಸ್ವಾಮಿಗಳೆಂದು ನೂತನ ನಾಮಧೇಯ

* 1941ರ ಜ.11ರಂದು ಉದ್ಧಾನಶಿವಯೋಗಿಗಳು ಲಿಂಗೈಕ್ಯ, ಮಠಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ

* 1963: ಶಿವರಾತ್ರಿ ಜಾತ್ರಾ ಸಂದರ್ಭದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಶ್ರೀಮಠದಲ್ಲಿ ಪ್ರಾರಂಭ, ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ

* 1965: ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್. ಸ್ವೀಕಾರ

* 1970: ಡಿ.27ರಂದು ಬೆಂಗಳೂರಿನಲ್ಲಿ ನಡೆದ 47ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ

* 1978–79: ಗ್ರಾಮಾಂತರ ಬಸವ ಜಯಂತಿ ಯೋಜನೆ ಪ್ರಾರಂಭ

* 1988: ಸಿದ್ಧಲಿಂಗ ಸ್ವಾಮೀಜಿಯವರನ್ನು ಉತ್ತರಾಧಿಕಾರಿಯಾಗಿ ನೇಮಕ

* 1997: ಶ್ರೀಗಳವರ ಪೀಠಾರೋಹಣ, ವಜ್ರಮಹೋತ್ಸವ, ಸಂಸ್ಕೃತ ಕಾಲೇಜಿನ ಅಮೃತ ಮಹೋತ್ಸವ, ವಿದ್ಯಾರ್ಥಿ ನಿಲಯ , ಪ್ರಸಾದ ನಿಲಯ ಉದ್ಘಾಟನೆ.

* 2005: 98ನೇ ಜನ್ಮದಿನೋತ್ಸವ, ಪಟ್ಟಾಧಿಕಾರದ ಅಮೃತ ಮಹೋತ್ಸವ ಹಾಗೂ ಕರ್ನಾಟಕ ರತ್ನ ಪ್ರಶಸ್ತಿ

* 2009: ಶತಮಾನೋತ್ಸವ ಉದ್ಘಾಟನೆ, ಕೃಷಿ ಸಮಾವೇಶ, ಮಹಿಳಾ ಸಾಹಿತ್ಯ ಸಮಾವೇಶ, ಧಾರ್ಮಿಕ ಸಮಾವೇಶ

* 2011: ಸಿದ್ಧಲಿಂಗ ಶ್ರೀಗಳಿಗೆ ಮಠದ ಅಧ್ಯಕ್ಷ ಪದವಿಯ ವರ್ಗಾವಣೆ (ಅಧಿಕಾರ ಹಸ್ತಾಂತರ)

* 2012: ಗುರುವಂದನಾ ಕಾರ್ಯಕ್ರಮ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭಾಗಿ

* 2013: ಪಟ್ಟಾಧಿಕಾರವಾಗಿ 80 ವರ್ಷದ ಅಮೃತ ಮಹೋತ್ಸವ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

* 2015ರ ಜುಲೈ ಪದ್ಮಭೂಷಣ ಪ್ರಶಸ್ತಿ ಪ್ರದಾನ

ಇವನ್ನೂ ಓದಿ... 

‘ಕಾಯಕಕ್ಕೆ ಕಳೆಯಿತ್ತು, ಬದುಕಿಗೇ ಬೆಲೆಯಿತ್ತು’: ಸಿದ್ಧಯ್ಯ ಪುರಾಣಿಕರ ಕವನ

ಹುಟ್ಟಿದ ಊರಿಗೆ 25 ವರ್ಷ ಕಾಲಿಡದ ಸ್ವಾಮೀಜಿ 

ಅನ್ನ ಮತ್ತು ಅಕ್ಷರ ದಾಸೋಹಗಳ ಮಹಾಯೋಗಿ

‘ಸಿದ್ಧ, ಸೇವಾಕ್ಷೇತ್ರ: ನಿತ್ಯ ದಾಸೋಹಕ್ಕೆ’: ಚನ್ನವೀರ ಕಣವಿ ಕವನ

ಸಿದ್ಧಗಂಗಾ ಶ್ರೀ ಎಲ್ಲ ಸಮುದಾಯಗಳ ಗುರು: ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ

ನಾಳೆ ಸ್ವಾಮೀಜಿ ಕ್ರಿಯಾಸಮಾಧಿ, ಸರ್ಕಾರಿ ರಜೆ: ಸಿಎಂ ಕುಮಾರಸ್ವಾಮಿ ಘೋಷಣೆ

ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಗಣ್ಯರ ಸಂತಾಪ

ಬರಹ ಇಷ್ಟವಾಯಿತೆ?

 • 59

  Happy
 • 0

  Amused
 • 9

  Sad
 • 0

  Frustrated
 • 1

  Angry

Comments:

0 comments

Write the first review for this !