ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಜ್ಞಾನಕ್ಕಾಗಿ ವಲಸೆ ಬಂದ ಮಕ್ಕಳು

ಸಿದ್ಧಗಂಗಾ ಮಠದಲ್ಲಿ ದಾಖಲಾತಿಗಾಗಿ ವಿದ್ಯಾರ್ಥಿಗಳ ಸಾಲು: ಪೋಷಕರ ದಂಡು
Last Updated 4 ಜೂನ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಾಲೆಗಳ ಬೇಸಿಗೆ ರಜೆಗಳ ಬಳಿಕ ಸಿದ್ಧಗಂಗಾ ಮಠದಲ್ಲಿ ಮಕ್ಕಳ ಕಲರವ ಮತ್ತೆ ಮೊಳಗುತ್ತಿದೆ. ತ್ರಿವಿಧ ದಾಸೋಹದ ನೆಲದಲ್ಲಿ ಅಕ್ಷರ ಜ್ಞಾನದ ಕೃಷಿ ಮಾಡಿ ವಿದ್ಯೆ, ಸದಾಚಾರಗಳ ಫಸಲನ್ನು ಪಡೆಯಲು ಸಾವಿರಾರು ಮಕ್ಕಳು ಮಠದ ವಿದ್ಯಾಸಂಸ್ಥೆಗಳಲ್ಲಿ ದಾಖಲಾತಿ ಪಡೆಯುತ್ತಿದ್ದಾರೆ.

ಮಕ್ಕಳನ್ನು ಶಾಲೆಗೆ ಸೇರಿಸಿ, ಮಠದ ವಸತಿ ನಿಲಯಗಳಿಗೆ ದಾಖಲು ಮಾಡಲು ಪೋಷಕರು ಸಹ ಮಠದಲ್ಲಿ ಮೊಕ್ಕಂ ಹೂಡಿದ್ದಾರೆ. ಮಠದ ಪ್ರಾರ್ಥನಾ ಆವರಣದಲ್ಲಿ ನಿಂತು ಎತ್ತ ನೋಡಿದರತ್ತ ಮಕ್ಕಳು ಮತ್ತು ಪೋಷಕರೆ ಕಾಣುತ್ತಾರೆ. ಮಠದ ಮುಖ್ಯದಾರಿಯ ಎರಡು ಬದಿಗಳಲ್ಲಿನ ವಸತಿ ನಿಲಯಗಳ ಮುಂಭಾಗ, ದಾಸೋಹ ನಿಲಯ, ಆಡಳಿತ ಕಚೇರಿ, ಸಂಸ್ಕೃತ ಪಾಠಶಾಲೆ ಮತ್ತು ಪ್ರೌಢಶಾಲೆಗಳ ಮುಂಭಾಗದ ಪ್ರಾಂಗಣಗಳು ಹೊಸ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ತುಂಬಿ ತುಳುಕುತ್ತಿವೆ. ಅವರೊಂದಿಗೆ ಪಠ್ಯೋಪಕರಣ ಹಾಗೂ ದಿನಬಳಕೆಯ ಪರಿಕರಗಳನ್ನು ಇಡಲು ತಂದ ಟ್ರಂಕ್‌ಗಳು ಜತೆಯಾಗಿವೆ.

ಬಹಳಷ್ಟು ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಬಂದಿದ್ದಾರೆ. ಅವರ ಪೋಷಕರಲ್ಲಿ ಬಹುತೇಕರು ಅನಕ್ಷರಸ್ತರು. ದಾಖಲಾತಿಯ ಅರ್ಜಿಗಳನ್ನು ಭರ್ತಿ ಮಾಡಲು, ಪ್ರವೇಶಾತಿಯ ಪ್ರಕ್ರಿಯೆ ತಿಳಿಸಲು ಹಳೆಯ ವಿದ್ಯಾರ್ಥಿಗಳು ಮತ್ತು ಮಠದ ಸಿಬ್ಬಂದಿ ನೆರವಾಗುತ್ತಿದ್ದಾರೆ.

‘ಊರಲ್ಲಿ 5ನೇ ಕ್ಲಾಸ್‌ ವರೆಗೆ ಶಾಲೆ ಇದೆ. ಹೈಸ್ಕೂಲ್‌ಗೆ ಮಕ್ಕಳು 3 ಕಿ.ಮೀ. ನಡೆದು ಹೊಗಬೇಕು. ಅದಲ್ಲದೆ ಹೆದ್ದಾರಿ ಬೇರೆ ಊರ ಸಮೀಪವೇ ಇದೆ. ಅದರಿಂದ ತೊಂದರೆ ಆಗಬಹುದೆಂದು ಮಕ್ಕಳನ್ನು ಮಠಕ್ಕೆ ಸೇರಿಸುತ್ತಿದ್ದೇನೆ. ಇಲ್ಲಿ ಉನ್ನತ ಶಿಕ್ಷಣದ ವರೆಗೂ ಓದುವ ಅವಕಾಶವಿದೆ’ ಎಂದರು ಇಬ್ಬರು ಮಕ್ಕಳನ್ನು 5ನೇ ಮತ್ತು 3ನೇ ತರಗತಿಗೆ ದಾಖಲು ಮಾಡಲು ಬಂದಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕುಂದನಕುಪ್ಪೆಯ ರವೀಂದ್ರ.

ಕೊಪ್ಪಳದ ಯಲಬುರ್ಗಾ ತಾಲ್ಲೂಕಿನ ತಳಕಲ್‌ ಗ್ರಾಮದ ಗುಡದಪ್ಪ ಮಾಳೆಕೊಪ್ಪ ಅವರನ್ನು ಮಾತಿಗೆಳೆದಾಗ, ‘ಊರಾಗ 2 ಎಕರೆ ಒಣಭೂಮಿ ಇದೆರಿ. ಅದರಾಗ ಹೊಟ್ಟಿಬಟ್ಟಿ ಕಟ್ಟಿಕೊಳ್ಳುವಷ್ಟು ಫಸಲು ಬರಲ್ಲ. ನನಗ ಎಂಟ್‌ ಮಕ್ಳು. ಅದರಲ್ಲಿ ಮೂರು ಗಂಡು. ದೊಡ್ಡ ಮಗ ಸಾಲಿ ಕಲಿಯೋದು ಮುಗಿಸಿ ಕೆಲಸ ಮಾಡಕತ್ತಾನ. ಒಬ್ಬಾವ ಮಠದಲ್ಲೇ ಪಿ.ಯು.ಸಿ. ಓದಕತ್ತಾನ. ಈಗ ಕೊನೆ ಮಗನನ್ನು ಎಂಟನೆತ್ತೆಗೆ ಸೇರಿಸಲು ಬಂದಿದ್ದೀನಿ. ಈ ಮಠದಲ್ಲಿ ಇದ್ರೆ ಹುಡುಗುರು ಶಿಸ್ತು ಕಲಿತಾರ ಅಂತಾ ಬಾಳ ಜನ ಹೇಳ್ಯಾರ. ಹಾಗಾಗಿ ಮಕ್ಕಳನ್ನು ಇಲ್ಲಿ ಓದಿಸ್ತಿದ್ದೀನಿ’ ಎಂದರು.

‘ಊರಾಗಿದ್ದರೆ ಮಕ್ಕಳನ್ನು ಹೊಲಕ್ಕ, ಮೇವು ತರಾಕ ಅಂತ ಕಳುಹಿಸುತ್ತಿವಿ. ಹುಡುಗುರು ಊಡಾಳ್‌ ಆಗುತ್ತಾರಾ. ಇಂತಹ ದೊಡ್ಡ ಮಠದಲ್ಲಿ ಇದ್ದರೆ ಮಕ್ಕಳು ಚನ್ನಾಗಿ ಓದುತ್ತಾರಾ’ ಎಂದು ಧ್ವನಿಗೂಡಿಸಿದರು ಬಿಜಾಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಲಸಂಗಿಯಿಂದ ಬಂದಿದ್ದ ಶಿವಾನಂದ ಗುಂಯ್ಯಾರ.

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಹುಣಕಲ್‌ನ ಕಲ್ಲಮ್ಮ ಕಾಮಣ್ಣನವರ ತೀರಿಹೋದ ತಮ್ಮನ ಮಗನಿಗೆ ಉತ್ತಮ ವಿದ್ಯಾಭ್ಯಾಸ ಸಿಗಲೆಂದು ಮಠಕ್ಕೆ ಸೇರಿಸಲು ಬಂದಿದ್ದರು. ‘ಊರಲ್ಲಿ ಸರಿಯಾಗಿ ಸಾಲಿಗಿ ಹೋಗಲ್ಲ. ತಮ್ಮನ ಇರೋ ಒಬ್ಬ ಮಗ ಶಾಣ್ಯಾ ಆಗಿ, ಅವರ ಅವ್ವನನ್ನು ಚಂದಾಗಿ ನೋಡಿಕೊಳ್ಳಲಿ ಎಂಬ ಆಸಿಯಿಂದ ಇಲ್ಲಿ ಸೇರಿಸಲು ಬಂದಿದ್ದೀನಿ’ ಎಂದು ಹೇಳಿದರು ಕಲ್ಲಮ್ಮ.

ಸ್ವಾಮೀಜಿಯ ಸಹೃದಯ ಸ್ಪಂದನೆ

ಪ್ರತಿ ಹೊಸ ವಿದ್ಯಾರ್ಥಿಯು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ.

ಸ್ವಾಮೀಜಿ ಪ್ರತಿ ವಿದ್ಯಾರ್ಥಿಯನ್ನು ಸಹೃದಯದಿಂದ ಬರಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರವೇಶಾತಿ ಅರ್ಜಿಗಳ ಮೇಲೆ ರುಜು ಹಾಕಿ, ದಾಖಲಾತಿಯನ್ನು ಖಚಿತಪಡಿಸುತ್ತಿದ್ದಾರೆ. ‘ಚನ್ನಾಗಿ ಓದಿ’ ಎಂದು ಮಕ್ಕಳಿಗೆ ಕಿವಿಮಾತು ಹೇಳುತ್ತಿದ್ದಾರೆ. ಮಕ್ಕಳ ಪೋಷಣೆಯ ಹೊಣೆ ಹೊತ್ತುಕೊಂಡು ‘ನೀವು ನಿಶ್ಚಿಂತೆಯಿಂದ ಊರಿಗೆ ತೆರಳಿ’ ಎಂದು ಬಂದಂತ ಪೋಷಕರಿಗೆ ಅಭಯ ನೀಡುತ್ತಿದ್ದಾರೆ.

ಪ್ರವೇಶಾತಿ ಅರ್ಜಿಯನ್ನು ಮುಂಚಿತವಾಗಿ ಪಡೆಯದೆಯೇ ಈಗ ದಾಖಲಾತಿಗಾಗಿ ಮಕ್ಕಳನ್ನು ಕರೆತಂದಿರುವ ಪೋಷಕರ ಪೂರ್ವಾಪರವನ್ನು ತಿಳಿದುಕೊಂಡು, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಈ ಸುಕಾರ್ಯಕ್ಕೆ ಪೋಷಕರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಸ್ವಾಮೀಜಿಯ ಭೇಟಿಗಾಗಿ ಬಂದ ಮಕ್ಕಳು ಮತ್ತು ಪೋಷಕರಿಗೆ ಬಿಸಿಲಿನ ತಾಪ ತಾಗದಂತೆ ಮಠದ ಆವರಣದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ.

ರಸೂಲ್‌ಗೆ ಹೆಚ್ಚು ಅಂಕ ಗಳಿಸುವ ಗುರಿ

ಬಿಜಾಪುರ ಜಿಲ್ಲೆ ಬಸವನ ಬಾಗೇವಾಡಿಯ ಮುಳವಾಡದ ಹಸೀನಾ ಅವರಿಗೆ ತಮ್ಮ ಕಿರಿಯ ಮಗ ರಸೂಲ್‌ ಚನ್ನಾಗಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸುವ ಬಯಕೆ. ಹಾಗಾಗಿ ಮಗನನ್ನು 10 ತರಗತಿಗೆ ದಾಖಲು ಮಾಡಲು ಬಂದಿದ್ದರು.

‘ನಮ್ಮ ಊರಿನ 20 ಮಕ್ಕಳು ಇದೆ ಮಠದಲ್ಲಿ ಓದುತ್ತಾರೆ. ಅವರೇ ಮಠದ ಬಗ್ಗೆ ಹೇಳಿದರು. ಊರಲ್ಲಿ ಮಗ ಸರಿಯಾಗಿ ಓದುತ್ತಿರಲಿಲ್ಲ. ಇಲ್ಲಿ ಸೇರಿಸಿದರೆ, ಬೇರೆಯವರನ್ನು ನೋಡಿಯಾದರೂ ಚನ್ನಾಗಿ ಓದುವುದನ್ನು ಕಲಿತಾನೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ‘ಅಮ್ಮನ ಆಸೆಯಂತೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನೆ ಗಳಿಸುತ್ತೇನೆ’ ಎಂದು ರಸೂಲ್‌ ಆತ್ಮವಿಶ್ವಾಸದಿಂದಲೇ ಹೇಳಿದನು.

‘ಈಗ ಬಂದೋರಿಗೆ ಕೇಳೋರಿಲ್ಲ’

‘ಡೇಟ್‌ ಮುಗುದಾದ ಅಂತ ನಮಗ ಅಪ್ಲಿಕೇಶನ್ ಕೊಡುತ್ತಿಲ್ಲಾರಿ’ ಎಂದು ಬಳ್ಳಾರಿಯ ಕುರುಗೋಡಿನ ಯಂಕಟಲಕ್ಷ್ಮಿ ಮಡಿವಾಳರ ಅಸಮಾಧಾನ ಹೊರಹಾಕಿದರು.

‘ಕಳೆದ ತಿಂಗಳೇ ಎಲ್ಲ ಅಪ್ಲಿಕೇಶನ್‌ ಕೊಟ್ಟಾರಂತೆ. ಮಗಳ ಮದುವಿ ಇತ್ತು. ಹೋದ ತಿಂಗಳು ಬರಕ್ಕೆ ಆಗಲಿಲ್ಲ. ಈಗ ನನ್ನ ಒಬ್ಬ ಮಗ ಮತ್ತು ಅಣ್ಣನ ಇಬ್ಬರು ಮಕ್ಕಳನ್ನು ಮಠಕ್ಕೆ ಸೇರಿಸಲು ಕರಕೊಂಡು ಬಂದಿನ್ರಿ. ಭಾನುವಾರದ ಮುಂಜಾನಿ ಮಠಕ್ಕೆ ಬಂದೆವ್ರಿ. ಆವಾಗಿನಿಂದ ಮಠದವರನ್ನು ಕೇಳುತ್ತಿದ್ದೇವ್ರಿ. ದಾಖಲಾತಿಗೆ ಸ್ವಾಮೀಜಿ ಸಹಿ ಬೇಕು ಅಂತ ನಮ್ಮನ್ನ ಕಾಯಸಕತ್ತಾರ. ನೋಡುವಷ್ಟು ನೋಡಿ, ನಾವು ಊರು ಕಡಿಗೆ ಚುಕ್ಕೊಳನ್ನ ಕರಕೊಂಡು ಹೋಗುತ್ತೇವ್ರಿ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅಂಕಿ–ಅಂಶ

8,500 -ಮಠದ ವಸತಿ ನಿಲಯಗಳ ದಾಖಲಾತಿಗಾಗಿಈ ಶೈಕ್ಷಣಿಕ ಸಾಲಿನಲ್ಲಿ ವಿತರಣೆಯಾದ ಅರ್ಜಿಗಳು

128 - ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು

8,000 ಕ್ಕೂ ಹೆಚ್ಚು -ಮಠದಲ್ಲಿ ಸದ್ಯ ಓದುತ್ತಿರುವ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT