ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ಪ್ರಕರಣ| ಪೊಲೀಸ್‌ ಅಧಿಕಾರಿ ಹದ್ದು ಮೀರಿದ್ದಾರೆ ಎಂದ ಸಿದ್ದರಾಮಯ್ಯ

Last Updated 21 ಮೇ 2020, 14:51 IST
ಅಕ್ಷರ ಗಾತ್ರ

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಸಾಗರ ಪೊಲೀಸರು ಎಫ್‌ಐಆರ್‌ ದಾಖಲಿಸಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ. ಇದು ಪೊಲೀಸ್‌ ಅಧಿಕಾರಿಯ ಹದ್ದು ಮೀರಿದ ವರ್ತನೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಕಾಂಗ್ರೆಸ್‌ ಅಧ್ಯಕ್ಷರಾದ ಸೋನಿಯಾಗಾಂಧಿಯವರ ವಿರುದ್ಧ ದುರುದ್ದೇಶದಿಂದ ಎಫ್ಐಆರ್ ದಾಖಲಿಸಿದ ಸಾಗರದ ಪೊಲೀಸ್ ಅಧಿಕಾರಿ ಹದ್ದು ಮೀರಿ ವರ್ತಿಸಿದ್ದಾರೆ. ಮುಖ್ಯಮಂತ್ರಿಗಳೇ ಅನಗತ್ಯ ರಾಜಕೀಯ ಸಂಘರ್ಷಕ್ಕೆ ಅವಕಾಶ ನೀಡದೆ ತಕ್ಷಣ ಈ ಎಫ್ಐಆರ್ ರದ್ದುಪಡಿಸಿ ಮತ್ತು ಅಧಿಕಾರಿಯನ್ನು ಅಮಾನತಿನಲ್ಲಿರಿಸಿ,’ ಎಂದು ಅವರು ಆಗ್ರಹಿಸಿದ್ದಾರೆ.
‘ದೇಶದ ಜನರ ದೇಣಿಗೆಯ ಪಿಎಂ ಕೇರ್ಸ್‌ ಹಣ ಯಾರೊಬ್ಬರ ಮನೆಯ ಆಸ್ತಿ ಅಲ್ಲ. ಅದು ಈ ದೇಶದ ಪ್ರಜೆಗಳ ದುಡ್ಡು, ಅದು ಸದುಪಯೋಗವಾಗಬೇಕು ಎಂದು ಹೇಳುವ ಅಧಿಕಾರ ಪ್ರತಿಯೊಬ್ಬರಿಗೆ ಇದೆ. ಅದನ್ನೇ ಸೋನಿಯಾಗಾಂಧಿಯವರು ಹೇಳಿದ್ದಾರೆ ತಪ್ಪೇನಿದೆ,’ ಎಂದು ಅವರು ಪ್ರಶ್ನಿಸಿದ್ದಾರೆ.

‘ಇತ್ತೀಚೆಗೆ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಅಲ್ಲಲ್ಲಿ ಪೊಲೀಸರು ಮೊಕದ್ದಮೆ ದಾಖಲಿಸುತ್ತಿರುವುದು ನಡೆದಿದೆ. ಈ ರೀತಿ‌ ನಮ್ಮ ಬಾಯಿ ಮುಚ್ಚಿಸಬಹುದು ಎಂದು ತಿಳಿದುಕೊಂಡಿದ್ದರೆ ಅದು ಮೂರ್ಖತನ. ಮುಂದಿನ ದಿನಗಳಲ್ಲಿ ನಮ್ಮ ಪ್ರಶ್ನೆಗಳು ಇನ್ನಷ್ಟು ಹರಿತವಾಗಲಿದೆ, ಸಂಘರ್ಷ ಇನ್ನಷ್ಟು ಬಿರುಸು ಪಡೆಯಲಿದೆ,’ ಎಂದು ಅವರು ಎಚ್ಚರಿಸಿದ್ದಾರೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಸಮಯ ಮತ್ತು ಶ್ರಮವನ್ನು ಕೋವಿಡ್ -19 ಸೋಂಕನ್ನು ಎದುರಿಸಲು ಮತ್ತು ನೊಂದವರಿಗೆ ನೆರವಾಗಲು ವ್ಯಯ ಮಾಡಲಿ. ಈ ಕಷ್ಟದ ದಿನಗಳ ಅವಕಾಶವನ್ನು ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಕಾರ್ಯಕರ್ತರನ್ನು ಹಣಿಯಲು ದುರುಪಯೋಗ ಮಾಡಿಕೊಳ್ಳಬೇಡಿ,’ ಎಂದು ಅವರು ಸಲಹೆ ನೀಡಿದ್ದಾರೆ.

‘ಸೋನಿಯಾಗಾಂಧಿಯವರು ವಿರೋಧ ಪಕ್ಷದ ನಾಯಕಿಯಾಗಿ ಜನಾಭಿಪ್ರಾಯವನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಇದಕ್ಕೆ ಸ್ಪಂದಿಸುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ಸೋನಿಯಾ ಗಾಂಧಿಯವರ ವಿರುದ್ಧ ದೂರು ನೀಡಿದವನು ಬಿಜೆಪಿ ಕಾರ್ಯಕರ್ತನಾಗಿದ್ದು ರಾಜಕೀಯ ದುರುದ್ದೇಶದಿಂದಲೇ ಇದನ್ನು ಮಾಡಲಾಗಿದೆ ಎಂಬ ಬಗ್ಗೆ ಅನುಮಾನ ಇಲ್ಲ. ಮುಖ್ಯಮಂತ್ರಿ ಈ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸದಿದ್ದಲ್ಲಿ ರಾಜಕೀಯ ಹೋರಾಟ ಅನಿವಾರ್ಯವಾಗಬಹುದು,’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT