ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಸುಳ್ಳು ಹೇಳಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ: ಶಿವಪ್ರತಾಪ್‌ ಶುಕ್ಲಾ ಆರೋಪ

Last Updated 5 ಮೇ 2018, 13:58 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರೈತರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಾಡಿರುವ ಸಾಲ ಮನ್ನಾ ಮಾಡುವಂತೆ ನಿಯೋಗದಲ್ಲಿ ಹೋಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರೂ ಮೋದಿ ಅವರು ಸ್ಪಂದಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಕೇಂದ್ರದೊಂದಿಗೆ ವ್ಯವಹರಿಸಿಲ್ಲ’ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವಪ್ರತಾಪ್‌ ಶುಕ್ಲಾ ಆರೋಪಿಸಿದರು.

ನಗರದಲ್ಲಿ ಶನಿವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ‘ಸಿದ್ದರಾಮಯ್ಯ ಅವರು ಸುಳ್ಳು ಹೇಳುವ ಮೂಲಕ ರೈತರ ದಾರಿ ತಪ್ಪಿಸುತ್ತಿದ್ದಾರೆ. ಅವರು ಹೇಳುತ್ತಿರುವುದು ನೂರಕ್ಕೆ ನೂರು ಶುದ್ಧ ಸುಳ್ಳು. ಬೇಕಿದ್ದರೆ ಈ ವಿಚಾರದಲ್ಲಿ ನಾನು ಅವರಿಗೆ ಸವಾಲು ಹಾಕುತ್ತೇನೆ’ ಎಂದು ಹೇಳಿದರು.

‘ಉತ್ತರ ಪ್ರದೇಶ ಚುನಾವಣೆ ಪ್ರಣಾಳಿಕೆಯಲ್ಲಿ ನಾವು ರೈತರಿಗೆ ಸಾಲ ಮನ್ನಾ ಭರವಸೆ ನೀಡಿದ್ದೆವು. ಅದರಂತೆ ಚುನಾವಣೆ ಮುಗಿದ ಮೂರು ತಿಂಗಳಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿದ್ದ ರೈತರ ₹36 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಯಿತು. ಕೇಂದ್ರ ಸರ್ಕಾರ ಅದಕ್ಕೆ ಒಂದೇ ಒಂದು ಪೈಸೆ ಕೊಟ್ಟಿಲ್ಲ. ರಾಜ್ಯ ಸರ್ಕಾರವೇ ತನ್ನ ಹಣಕಾಸು ಕ್ರೂಢೀಕರಣದಲ್ಲಿ ಆ ಕೆಲಸ ಮಾಡಿದೆ’ ಎಂದು ತಿಳಿಸಿದರು.

‘ಉತ್ತರ ಪ್ರದೇಶದ ಮುಖ್ಯಮಂತ್ರಿ ಅವರು ನಾವು ಸ್ವಇಚ್ಛೆಯಿಂದ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಾಲ ಮನ್ನಾ ಮಾಡುತ್ತಿದ್ದೇವೆ ಎಂದು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದರು. ಅದಕ್ಕೆ ನಾವು ಅನುಮೋದನೆ ನೀಡಿದೆವು. ಆ ರೀತಿ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡುತ್ತೇವೆ ಎಂದು ಒಂದು ಮಾತು ಹೇಳಿದ್ದರೆ ನಾವು ಅದಕ್ಕೆ ಆಕ್ಷೇಪ ಮಾಡುತ್ತಿರಲಿಲ್ಲ. ಆದರೆ ಅವರು ಆ ಕೆಲಸ ಮಾಡದೆ ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಮೋದಿ ಅವರು ಕೊಟ್ಟ ಮಾತಿನಂತೆ ಎರಡು ಕೋಟಿ ಉದ್ಯೋಗ ಸೃಷ್ಟಿಸಿಲ್ಲ ಎಂದು ಕೆಲಸವಿಲ್ಲದ ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ಮುದ್ರಾ ಯೋಜನೆಯೊಂದರಲ್ಲೇ ನಾವು ದೇಶದಾದ್ಯಂತ 10 ಕೋಟಿ ಜನರಿಗೆ ಸಾಲ ನೀಡಿದ್ದೇವೆ. ಸಾಲ ತೆಗೆದುಕೊಂಡವರು ಸ್ವಯಂ ಉದ್ಯೋಗ ಆರಂಭಿಸಿ ಒಬ್ಬರು, ಇಬ್ಬರಿಗೆ ಉದ್ಯೋಗ ನೀಡಿದ್ದಾರೆ’ ಎಂದು ಹೇಳಿದರು.

‘ಸ್ಟ್ಯಾಂಡಪ್‌ ಇಂಡಿಯಾ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡಗಳ ಜನರು ಮತ್ತು ಮಹಿಳೆಯರಿಗೆ ₹10 ಲಕ್ಷದಿಂದ ₹1 ಕೋಟಿ ವರೆಗೆ ಸಾಲ ನೀಡಲಾಗುತ್ತಿದೆ. ಈ ಎರಡು ಯೋಜನೆಗಳಿಂದಲೇ ದೇಶದಲ್ಲಿ ಕೋಟಿಗಟ್ಟಲೇ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದು ತಿಳಿಸಿದರು.

‘ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮಾ ಮಾಡುತ್ತೇವೆ ಎಂದು ಮೋದಿ ಅವರು ಹೇಳಿಲ್ಲ. ಕಪ್ಪು ಹಣ ವಾಪಸ್ ತಂದು ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಗರಿಷ್ಠ ಮುಖಬೆಲೆಯ ನೋಟು ರದ್ದು ಮಾಡಿದ ಸಂದರ್ಭದಲ್ಲಿ ದೇಶದಾದ್ಯಂತ ಜನರು ಮನೆಯ ತಿಜೋರಿಯಲ್ಲಿಟ್ಟ ಹಣವನ್ನು ತಂದು ಬ್ಯಾಂಕಿಗೆ ಮಾಡುತ್ತಿದ್ದಂತೆ ದೇಶದ ಪ್ರಗತಿ ಏರುಮುಖವಾಗಿದೆ. ಜತೆಗೆ ಜಿಎಸ್‌ಟಿಯಿಂದ ದಾಖಲೆ ತೆರಿಗೆ ಸಂಗ್ರಹವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT