ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಇಳಿಸಲು ಪಿತೂರಿ: ಸಿದ್ದರಾಮಯ್ಯ ಆರೋಪ

Last Updated 3 ಜನವರಿ 2020, 21:55 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಪಿತೂರಿ, ಹುನ್ನಾರಗಳು ಬಿಜೆಪಿಯಲ್ಲಿ ನಡೆದಿವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಆರೋಪಿಸಿದರು.

‘ಯಡಿಯೂರಪ್ಪ ಅವರ ಯಾವುದೇ ಮನವಿಗೂ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸುತ್ತಿಲ್ಲ. ನೆರೆ ಪರಿಹಾರ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಸಮಸ್ಯೆ ಹೇಳಿಕೊಳ್ಳಲು, ನೆರವು ಕೇಳಲು ಸಿ.ಎಂಗೆ ಅವಕಾಶ ನೀಡುತ್ತಿಲ್ಲ.ಅಧಿಕಾರದಿಂದ ಕೆಳಗೆ ಇಳಿಸಲು ಬಿಜೆಪಿಯಲ್ಲಿ ಒಂದು ಗುಂಪು ಕೆಲಸ ಮಾಡುತ್ತಿದೆ. ಈ ಹುನ್ನಾರಕ್ಕೆ ಸಹಕಾರ ನೀಡುವ ರೀತಿಯಲ್ಲಿ ಪ್ರಧಾನಿ ಸಹ ನಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ನೆರೆ ಸಂಕಷ್ಟಕ್ಕೆ ಈವರೆಗೂ ಕೇಂದ್ರ ಸ್ಪಂದಿಸಿಲ್ಲ. ಲೋಕಸಭೆ ಚುನಾವಣೆ ಸಮಯದಲ್ಲಿ ನಮಗೆ ವೋಟು ಕೊಡಬೇಡಿ. ನರೇಂದ್ರ ಮೋದಿಗೆ ವೋಟು ಕೊಡಿ ಎಂದು ಬಿಜೆಪಿ ಅಭ್ಯರ್ಥಿಗಳು ಕೋರಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ರಾಜ್ಯದ ಅಭಿವೃದ್ಧಿಯ ಬಾಗಿಲು ತೆರೆಯುತ್ತದೆ ಎಂದು ಭರವಸೆ ನೀಡಿದ್ದರು. ಇದಕ್ಕೆ ಸ್ಪಂದಿಸಿದ ಜನರು 25 ಸಂಸದರನ್ನು ಆಯ್ಕೆ ಮಾಡಿದ್ದರು. ಈಗ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಬಿಜೆಪಿ ಸಂಸದರು ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ’ ಎಂದು ಟೀಕಿಸಿದರು.

‘ನಮಗೆ ಸೂಜಿ ತಗುಲಿದರೆ ಗೊತ್ತಾಗುತ್ತದೆ. ಕೇಂದ್ರ, ರಾಜ್ಯ ಆಳುತ್ತಿರುವವರಿಗೆ ದಬ್ಬಳದಿಂದ ಚುಚ್ಚಿದರೂ ಎಚ್ಚರವಾಗುತ್ತಿಲ್ಲ. ಹಿಂದೆ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದವರು ತಮಾಷೆ ಪೆಟ್ಟಿಗೆಮೂಲಕ ಸ್ವರ್ಗ ತೋರಿಸುತ್ತಿದ್ದರು. ಈಗ ಮೋದಿ ಅದೇ ರೀತಿ ಮಾತಿನಲ್ಲೇ ಆಕಾಶ, ಸ್ವರ್ಗ ತೋರಿಸುತ್ತಿದ್ದಾರೆ’ ಎಂದರು.

ಹೇಮಾವತಿ, ನೇತ್ರಾವತಿ ನದಿಗಳನ್ನು ಜೋಡಿಸಿ 8 ಜಿಲ್ಲೆಗಳಿಗೆ ನಿರಾವರಿ ಸೌಕರ್ಯ ಕಲ್ಪಿಸುತ್ತೇವೆ ಎಂದು ಮೋದಿ ಹೇಳಿದ್ದರು. ನದಿ ಜೋಡಣೆ ಎಲ್ಲಿ ಆಗಿದೆ ಎಂದರು.

ಹತಾಶೆಯಿಂದ ಟೀಕೆ-ಸವದಿ: ‘ರೈತರ ಬ್ಯಾಂಕ್ ಖಾತೆಗೆ ಕಿಸಾನ್ ಸಮ್ಮಾನ್ ನಿಧಿಯ ಹಣ ಜಮೆಯಾಗಿದ್ದು, ರೈತರು ಸಂತಸದಲ್ಲಿ ಇರುವುದನ್ನು ನೋಡಲಾರದೆ ಹತಾಶೆಯಿಂದ ಮೋದಿ ಅವರನ್ನು ಸಿದ್ದರಾಮಯ್ಯ ಟೀಕಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಪಿಸಿದ್ದಾರೆ.

*
‘ವಿರೋಧ ಪಕ್ಷದ ನಾಯಕನಿಗೆ ಅಗತ್ಯ ಸೌಕರ್ಯಗಳನ್ನು ವಿಧಾನಸಭಾಧ್ಯಕ್ಷರು ಕಲ್ಪಿಸಬೇಕು. ಈವರೆಗೂ ನನಗೆ ಯಾವುದೇ ಸೌಕರ್ಯ ನೀಡಿಲ್ಲ. ಈಗಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ’
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT