ಸೋಮವಾರ, ಮಾರ್ಚ್ 1, 2021
24 °C

ಅತೃಪ್ತ ಶಾಸಕರ ಮನವೊಲಿಸಲು ಮುಂಬೈಗೆ ಹೊರಟ ರಾಜಣ್ಣ, ಮುನಿರತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಅತೃಪ್ತ ಶಾಸಕರ ಮನವೊಲಿಸಲು ಮುಂಬೈಗೆ ಹೊರಟಿದ್ದೇವೆ. ಸಿದ್ಧರಾಮಯ್ಯ ಅಥವಾ ಖರ್ಗೆಯವರು ಮುಖ್ಯಮಂತ್ರಿ ಆದರೆ ಈ ಸರ್ಕಾರ ಉಳಿಯುತ್ತೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಮುನಿರತ್ನ, ರಾಮಲಿಂಗಾರೆಡ್ಡಿ ಸೇರಿದಂತೆ ಕೆಲವರು ಮುಂಬೈಗೆ ಹೊರಟಿದ್ದೇವೆ. ಅತೃಪ್ತ ಶಾಸಕರನ್ನು ಕರೆದುಕೊಂಡು ಬಂದು ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತೇವೆ’ ಎಂದರು.

‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೇಬೇಕು ಎಂಬುದಾದರೆ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಖರ್ಗೆಯವರು ಮುಖ್ಯಮಂತ್ರಿ ಆಗಲು ಯಾರ ಆಕ್ಷೇಪವೂ ಇಲ್ಲ. ಹಿರಿಯ ಮನುಷ್ಯ ಅವರೂ ಆಗಲಿ. ಇಲ್ಲದೇ ಇದ್ದರೆ ನಾಲ್ಕೈದು ದಿನಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ’ ಎಂದು ಎಚ್ಚರಿಸಿದರು.

‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವ ಚಿಂತನೆ ಜೆಡಿಎಸ್ ವರಿಷ್ಠರಾದ ದೇವೇಗೌಡರು ಮಾಡಿದ್ದಾರಂತಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ದೇವೇಗೌಡರು ಹೇಳಿದರೆ ಎಲ್ಲವೂ ಆಗಿಬಿಡುತ್ತಾ. ಅವರು ಹೇಳಿದ್ದು ಭಗವದ್ಗೀತೇನಾ?  ಅವರು ಹೇಳಿದಂತೆ ಎಂದಾದರೂ ನಡೆದುಕೊಂಡಿದ್ದಾರೆಯೇ ಎಂದು ವಾಗ್ದಾಳಿ ನಡೆಸಿದರು.

ಪರಮೇಶ್ವರ ಮೇಲೆ ಪರೋಕ್ಷ ವಾಗ್ದಾಳಿ

ಮುಂಬೈಗೆ ಹೋಗಿರುವ ಶಾಸಕರ ಮನವೊಲಿಸಿ ಕರೆತಂದು ಜೀರೊ ಟ್ರಾಫಿಕ್ ( ಡಾ.ಪರಮೇಶ್ವರ ಅವರನ್ನು ಈಚೆಗೆ ರಾಜಣ್ಣ ಕರೆಯೋದು ಹೀಗೆ) ಅವೂ ಇವು ಎಲ್ಲಾ ಕಂಟಿನ್ಯೂ ಆಗೋ ರೀತಿ ವ್ಯವಸ್ಥೆ ಮಾಡಬೇಕು ಅಂಥಾ ಪ್ರಯತ್ನ ಮಾಡ್ತಿದ್ದೀವಿ ಎಂದು ಕೆ.ಎನ್ರಾಜಣ್ಣ ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಯಾಕೆ, ಜೀರೋ ಟ್ರಾಫಿಕ್ ಕಂಟಿನ್ಯೂ ಆಗೋದು ಅಷ್ಟೊಂದು ಇಷ್ಟಾನಾ ನಿಮ್ಗೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ ಹೌದು ಜೀರೊ ಟ್ರಾಫಿಕ್ ಉಳಿಬೇಕು. ಯಾಕಂದ್ರೆ ಜನ ಮುಖಕ್ಕೆ ಉಗೀತಾರಲ್ಲ. ಅದಿನ್ನೂ ಕಂಟಿನ್ಯೂ ಆಗ್ಲಿ ಅನ್ನೋ ಆಸೆ ಎಂದರು.

ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೇ ರಾಜಣ್ಣ ಅವರು ಡಾ.ಪರಮೇಶ್ವರ ಅವರನ್ನು ಜೀರೊ ಟ್ರಾಫಿಕ್ ಎಂದು ಕರೆದಿದ್ದರು.
ಬೆಂಗಳೂರಿಂದ ತುಮಕೂರಿಗೆ ಒಮ್ಮೆ ಜೀರೊ ಟ್ರಾಫಿಕ್ ಬಂದು ಹೋದರೆ 500 ವೋಟ್ ಹೋಗುತ್ತವೆ ಎಂದು ಹೇಳಿದ್ದರು.

ಈ ಹೇಳಿಕೆಗೆ ತುಮಕೂರು ಜಿಲ್ಲೆಯಲ್ಲಿನ ಪರಮೇಶ್ವರ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಮತ್ತೆ ಆ ಪದ ಬಳಸಿ ವಾಗ್ದಾಳಿ ನಡೆಸಿದ್ದಾರೆ.

ಆಪರೇಷನ್ ಕಮಲ ಅಲ್ಲ: ಇದು ಆಪರೇಷನ್ ಕಮಲ ಅಲ್ಲ. ಸಚಿವರ ಮೇಲಿನ ಅಸಮಾಧಾನ, ಸರ್ಕಾರದ ಮೇಲಿನ ಬೇಸರಕ್ಕೆ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಶಾಸಕರಿಂದಲೇ ಇವರು ಸಚಿವರಾಗಿರೋದು. ಅದನ್ನು ಮರೆತು ಬರೀ ವ್ಯವಹಾರ ಮಾಡಿಕೊಂಡು ಕುಳಿತು ಶಾಸಕರನ್ನು ಮರೆತರೆ ಏನ್ಮಾಡ್ತಾರೆ ಎಂದು ಹೇಳಿದರು.

ಇಂದೂ ಕೂಡಾ ರಾಮಲಿಂಗಾರೆಡ್ಡಿ ಮಗಳು ಸೌಮ್ಯಾರೆಡ್ಡಿ ಸೇರಿದಂತೆ ನಾಲ್ಕೈದು ಶಾಸಕರು ರಾಜೀನಾಮೆ ಕೊಡುವವರಿದ್ದಾರೆ. ಅವರನ್ನು ಪಕ್ಷದ ಮುಖಂಡರು ಮನವೊಲಿಸುವ  ಪ್ರಯತ್ನ ಮಾಡುತ್ತಾರೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.