ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿಯಿಂದ ಬಲಿದಾನ ಸಾಧ್ಯವೇ’: ಸಿದ್ದರಾಮಯ್ಯ ಪ್ರಶ್ನೆ

Last Updated 2 ಜುಲೈ 2020, 18:37 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಕೊರೊನಾ ಬಂದಾಗಿನಿಂದ ಮನೆಯಿಂದ ಮೋದಿ ಹೊರಬಂದಿಲ್ಲ. ಇಂತವರಿಂದ ತ್ಯಾಗ, ಬಲಿದಾನ ಸಾಧ್ಯನಾ?. ದೇಶದಿಂದ ಬಿಜೆಪಿ ಕಿತ್ತೊಗೆಯಲು ಇನ್ನೊಂದು‌ ಸ್ವಾತಂತ್ರ್ಯ ಹೋರಾಟ ನಡೆಯಬೇಕಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಬಿಜೆಪಿಯವರು ದುಡ್ಡು‌ ಖರ್ಚು ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಇಲಾಖೆಗಳಿಂದ ಹಣ ಸಂಗ್ರಹಿಸಲು ಹೊರಟಿದ್ದಾರೆ. ದುಡ್ಡು ಕೊಟ್ಟು ಅನುದಾನ ಹಾಕಿಸಿಕೊಳ್ಳಬೇಕಾಗಿದೆ. ಶಾಸಕರಿಗೆ ಇದು ಬಿಟ್ಟು ಬೇರೆ ವಿಧಿಯಿಲ್ಲ’ ಎಂದು ಆರೋಪಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ದೇಶ ಹಾಳು ಮಾಡಲು ಕೆಟ್ಟ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದಾರೆ’ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

‘ಬಿಜೆಪಿಯವರು ಸುಳ್ಳು ಹೇಳಿ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ಇದರ ಹಿಂದೆ ಆರ್‌ಎಸ್‌ಎಸ್ ಇದೆ. ಎಲ್ಲಿಯವರೆಗೆ ಮೋದಿ ಅವರು ಆರ್‌ಎಸ್‌ಎಸ್ ಅನ್ನು ಹತ್ತಿಕ್ಕುವುದಿಲ್ಲವೋ ಅಲ್ಲಿವರೆಗೂ ದೇಶದ ಯುವಕರಿಗೆ ಭವಿಷ್ಯವಿಲ್ಲ’ ಎಂದರು.

‘ಪಿಎಂ ಕೇರ್ಸ್ ಫಂಡ್‌ಗೆ ಚೀನಾದಿಂದಲೂ ಹಣ ಪಡೆದಿದ್ದಾರೆ. ಗಡಿಯಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ. ಅವರ ಬಗ್ಗೆ ಪ್ರಧಾನಿ ಸತ್ಯ ಹೇಳುತ್ತಿಲ್ಲ’ ಎಂದು ದೂರಿದರು.

ವೇಣುಗೋಪಾಲ್‌ ವಿಶ್ವಾಸ: ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮಾತನಾಡಿ, ‘ಪಕ್ಷಕ್ಕೆ ಕಷ್ಟ ಎದುರಾದಾಗಲೆಲ್ಲ ಸಮರ್ಥವಾಗಿ ಅದನ್ನು ನಿಭಾಯಿಸಿದವರು ಶಿವಕುಮಾರ್‌. ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಅವರಿಗೆ ಹೊಣೆಗಾರಿಕೆ ನೀಡಲಾಗಿದ್ದು, ಪಕ್ಷ ಮತ್ತೆ ಅಧಿಕಾರ ಗಳಿಸುವ ವಿಶ್ವಾಸವಿದೆ’ ಎಂದರು.

ಡಿ.ಕೆ.ಶಿವಕುಮಾರ್‌ ಅವರ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್‌, ಈಶ್ವರ ಖಂಡ್ರೆ ಮತ್ತು ಸತೀಶ‌ ಜಾರಕಿಹೊಳಿ ಅವರೂ ಪದಗ್ರಹಣ ಮಾಡಿದರು.

ಮೈತ್ರಿಯಿಂದಾಗಿ ಸೋಲು: ದಿನೇಶ್‌
‘ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿಕೊಂಡಿದ್ದರಿಂಲೇ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲು ಉಂಟಾಯಿತು. ಇನ್ನು ಮುಂದೆ ಅಂತಹ ಯಾವ ಮೈತ್ರಿಯೂ ಇಲ್ಲದೆ ಪಕ್ಷವು ಒಗ್ಗಟ್ಟಿನಿಂದ ಮುನ್ನಡೆಯಲಿದೆ’ ಎಂದು ನಿಕಟಪೂರ್ವ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಹಿರಿಯರ ಮಾತಿಗೆ ಕಟ್ಟುಬಿದ್ದಿದ್ದೆ: ದಿನೇಶ್‌ ಮಾತಿಗೆ ಪರೋಕ್ಷವಾಗಿ ಸಮ್ಮತಿ ಸೂಚಿಸಿದ ಶಿವಕುಮಾರ್, ‘ಪಕ್ಷದ ಹಿರಿಯರ ಮಾತಿಗೆ ಕಟ್ಟುಬಿದ್ದು ಮೈತ್ರಿಯನ್ನು ಒಪ್ಪಿಕೊಂಡಿದ್ದೆ. ಹಲವರು ಪಕ್ಷಕ್ಕೆ ದ್ರೋಹ ಬಗೆದಾಗಲೂ ಮೈತ್ರಿ ಉಳಿಸಲು ಪ್ರಯತ್ನಪಟ್ಟಿದ್ದೆ’ಎಂದರು.

ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅಧಿಕಾರ ಸ್ವೀಕರಿಸುವ ಸಂದರ್ಭವನ್ನು ಪಕ್ಷದ ಕಾರ್ಯಕರ್ತರು ಹಬ್ಬದಂತೆ ಆಚರಿಸಿದರು. ಕಾರ್ಯಕರ್ತರಲ್ಲದೆ, ಲಕ್ಷಾಂತರ ಜನ ಮನೆಯಲ್ಲಿಯೇ ಕುಳಿತು ಡಿಜಿಟಲ್‌ ಮಾಧ್ಯಮಗಳ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಿದರು.

ನಗರದ ಬೀದಿ–ಬೀದಿಗಳಲ್ಲಿ ಕಾಂಗ್ರೆಸ್‌ ಬಾವುಟಗಳು, ಭಿತ್ತಿಪತ್ರಗಳು ರಾರಾಜಿಸಿದವು. ಬಿಬಿಎಂಪಿಯ ಕಾಂಗ್ರೆಸ್‌ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ, ಎಲ್‌ಇಡಿ ಪರದೆಗಳನ್ನು ಹಾಕಿ ಹಾಗೂ ಕೆಲವೆಡೆ ಟಿವಿಗಳನ್ನು ಅಳವಡಿಸುವ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದರು.ಶಿವಕುಮಾರ್‌ ಅವರ ಸಾಧನೆಗಳನ್ನು ಬಿಂಬಿಸುವ ಆಡಿಯೊ–ವಿಡಿಯೊಗಳನ್ನು ಪ್ರದರ್ಶಿಸ‌ಲಾಯಿತು.

ರಾಜ್ಯದ 7,800ಕ್ಕೂ ಹೆಚ್ಚು ಸ್ಥಳಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿತ್ತು. ಡಿಜಿಟಲ್‌ ಮತ್ತು ಝೂಮ್‌ ಮೂಲಕ ಲಕ್ಷಾಂತರ ಜನ ‘ಪ್ರತಿಜ್ಞಾ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಅಚ್ಚುಕಟ್ಟು ವ್ಯವಸ್ಥೆ
ಪದಗ್ರಹಣ ಸಮಾರಂಭವು ಅಚ್ಚುಕಟ್ಟಾಗಿ ನಡೆಯಿತು. ವೇದಿಕೆಯಲ್ಲಿ ಗುಂಪು–ಗುಂಪಾಗಿ ನಾಯಕರು ಬರುವುದನ್ನು ತಪ್ಪಿಸಿ, ತಂಡಗಳಲ್ಲಿ ಬರುವುದಕ್ಕೆ ಅವಕಾಶ ಕಲ್ಪಿಸಲಾಯಿತು.

ಹಾರ, ತುರಾಯಿಗೆ ಅವಕಾಶ ಇರಲಿಲ್ಲ. ವೇದಿಕೆಯಲ್ಲೂ ಯಾರಿಗೂ ಕುಳಿತುಕೊಳ್ಳಲು ಅವಕಾಶವಿರಲಿಲ್ಲ, ವೇದಿಕೆ ಮುಂಭಾಗವೇ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು.

**
ಮೋದಿ ಏನು ಮಾತನಾಡಿದರೂ ಯುವಕರು ಚಪ್ಪಾಳೆ ಹೊಡೆಯುತ್ತಾರೆ. ತಂತ್ರಜ್ಞಾನ ಬಳಸಿಕೊಂಡು ಬಿಜೆಪಿಯ ದ್ವೇಷ ರಾಜಕಾರಣವನ್ನು ಹತ್ತಿಕ್ಕುವ ಪ್ರಯತ್ನ ಆಗಬೇಕು.
–ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ

**
ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದ್ದು, ನೀವು ಇದನ್ನು ಮಾಡುವ ವಿಶ್ವಾಸ ನನಗಿದೆ. ನಿಮಗೆ ಶುಭವಾಗಲಿ.
–ರಾಹುಲ್ ಗಾಂಧಿ, ಕಾಂಗ್ರೆಸ್‌ ನಾಯಕ

**
ಅತ್ಯಂತ ಸಂಕೀರ್ಣ ಪರಿಸ್ಥಿತಿಯಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದೀರಿ. ಎಂತಹ ಕಠಿಣ ಪರಿಸ್ಥಿತಿ ಬಂದರೂ ನಾವು ನಿಮ್ಮ ಜತೆಗೆ ನಿಲ್ಲುತ್ತೇವೆ. ಧೈರ್ಯದಿಂದ ಮುನ್ನುಗ್ಗಿ.
–ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT