ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರ್ಥ ಸಾವು: ಎಲ್ಲ ಆಯಾಮಗಳಲ್ಲಿ ತನಿಖೆ

ಇಂದು ಸಲ್ಲಿಕೆ ಸಾಧ್ಯತೆ: ಸಂದೀಪ್‌ ಪಾಟೀಲ್‌
Last Updated 1 ಆಗಸ್ಟ್ 2019, 20:29 IST
ಅಕ್ಷರ ಗಾತ್ರ

ಮಂಗಳೂರು: ‘ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಸಾವಿನ ಕುರಿತ ತನಿಖೆಯನ್ನು ಎಲ್ಲ ಆಯಾಮಗಳಿಂದ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಶುಕ್ರವಾರ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ಅದನ್ನು ಆಧರಿಸಿ ತನಿಖೆ ಮುಂದುವರಿಸಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್‌ ತಿಳಿಸಿದರು.

‘ಸಿದ್ಧಾರ್ಥ ಅವರ ಕತ್ತು, ಮುಖದ ಭಾಗದಲ್ಲಿ ಗಾಯಗಳಾಗಿವೆ ಎನ್ನುವುದು ಸತ್ಯವಲ್ಲ. ಅವರ ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿದ್ಧಾರ್ಥ ಅವರ ದೇಹದ ಮೇಲೆ ಟೀ–ಶರ್ಟ್‌ ಇಲ್ಲದೇ ಇರುವ ಬಗ್ಗೆ ಹಲವು ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನೀರಿನ ಸೆಳೆತಕ್ಕೆ ಟೀ –ಶರ್ಟ್‌ ಹರಿದು ಹೋಗಿರಬಹುದು. ಟೀ–ಶರ್ಟ್ ಎಲ್ಲಿದೆ ಎಂಬುದು ಈಗ ಅಷ್ಟೊಂದು ಪ್ರಮುಖವಲ್ಲ’ ಎಂದರು.

ಸಿದ್ಧಾರ್ಥ ಹೆಗ್ಡೆ ತಮ್ಮ ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರಿಗೆ ಬರೆದಿದ್ದಾರೆ ಎನ್ನಲಾದ ಪತ್ರದ ಖಚಿತತೆಯನ್ನು ದೃಢಪಡಿಸಿಕೊಳ್ಳುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ತನಿಖೆಗಾಗಿ ಬೆಂಗಳೂರಿಗೆ ತೆರಳಿರುವ ಒಂದು ತಂಡ, ಈಗಾಗಲೇ ಕೆಫೆ ಕಾಫಿ ಡೇ ಕಚೇರಿಗೆ ಭೇಟಿ ನೀಡಿದ್ದು, ಮಾಹಿತಿ ಸಂಗ್ರಹಿಸಿದೆ. ಜತೆಗೆ ಸಂಸ್ಥೆಯ ಕೆಲವು ಅಧಿಕಾರಿಗಳು ವಿದೇಶಕ್ಕೆ ತೆರಳಿದ್ದು, ಅವರ ಹೇಳಿಕೆಗಳನ್ನು ಪಡೆದ ಬಳಿಕವೇ ಪತ್ರದ ಖಚಿತತೆಯ ಕುರಿತು ಸ್ಪಷ್ಟತೆ ಸಿಗಲಿದೆ ಎಂದರು.

ನಗರ ಪೊಲೀಸರು, ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಅಸಹಜ ಸಾವಿನ ಪ್ರಕರಣಗಳನ್ನು ಇನ್‌ಸ್ಪೆಕ್ಟರ್‌ ದರ್ಜೆಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಈ ಪ್ರಕರಣದಲ್ಲಿ ಎಸಿಪಿ ದರ್ಜೆಯ ಅಧಿಕಾರಿಗೆ ತನಿಖೆಯ ಹೊಣೆ ವಹಿಸಲಾಗಿದೆ. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಟಿ. ಕೋದಂಡರಾಮ್‌ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದ್ದು, ವಿಶೇಷ ತಂಡಗಳು ಅವರಿಗೆ ವರದಿ ಸಲ್ಲಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT