ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ: ಬಿಜೆಪಿ ಪ್ರಶ್ನೆ

ಸ್ಮಾರ್ಟ್ ಸಿಟಿ ಹಣ ಬಳಕೆಗೆ ರಾಜ್ಯ ನಿರಾಸಕ್ತಿ
Last Updated 26 ಡಿಸೆಂಬರ್ 2018, 17:51 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್‌ ಸಿಟಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯ ಘಟಕ ಟೀಕಿಸಿದೆ.

ಅಭಿವೃದ್ಧಿಗೆ ಬಂದ ಹಣವನ್ನು ಖರ್ಚು ಮಾಡದ ಮೈತ್ರಿ ಸರ್ಕಾರದಿಂದ ರಾಜ್ಯ ಅಭಿವೃದ್ಧಿಯಾಗುವುದೇ ಎಂದು ಪ್ರಶ್ನಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ನೀಡಿರುವ ಅನುದಾನ, ರಾಜ್ಯ ಖರ್ಚು ಮಾಡಿರುವ ವಿವರದ ಪಟ್ಟಿಯನ್ನು ಗ್ರಾಫಿಕ್ಸ್‌ ಮಾಡಿಸಿ ಮತ್ತೊಮ್ಮೆ ಮೋದಿ ಎಂಬ ಶೀರ್ಷಿಕೆಯಡಿ ಟ್ವೀಟ್‌ ಕೂಡ ಮಾಡಿದ್ದಾರೆ.

ಯೋಜನೆಗೆ ಕೇಂದ್ರ ಸರ್ಕಾರ ₹886 ಕೋಟಿ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಕೇವಲ ₹86.02 ಕೋಟಿಗಳನ್ನಷ್ಟೇ ಬಳಕೆ ಮಾಡಿರುವುದು ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಸಹ ವಕ್ತಾರ ಎ.ಎಚ್.ಆನಂದ್ ಕಿಡಿಕಾರಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ರಾಜ್ಯದ ಏಳು ನಗರಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಇಷ್ಟು ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡಿದ್ದರೂ ಯಾವ ಕಾರಣಕ್ಕಾಗಿ ಬಳಕೆ ಮಾಡಿಕೊಂಡಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಧಾರರಹಿತ ಆರೋಪ ಮಾಡುತ್ತಿದ್ದರು. ಹಣ ಬಳಕೆ ಮಾಡದಿರುವುದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಪ್ರಶ್ನಿಸಿದ್ದಾರೆ.

‘ಬಿಡುಗಡೆ ಮಾಡಲಾದ ಅನುದಾನದಲ್ಲಿ ಶೇ 9.70 ರಷ್ಟು ವಿನಿಯೋಗಿಸಲಾಗಿದ್ದು, ಈ ಪೈಕಿ ಸುಮಾರು ಅರ್ಧದಷ್ಟು ಅಂದರೆ ₹38.47 ಕೋಟಿ ಮೊತ್ತವನ್ನು ಕೇವಲ ಕಚೇರಿ ಮತ್ತು ಆಡಳಿತಾತ್ಮಕ ವೆಚ್ಚಕ್ಕೆ ಬಳಸಲಾಗಿದೆ. ಅಂದಿನ ಹಾಗೂ ಈಗಿನ ಸರ್ಕಾರದ ಸಚಿವರು ಎಷ್ಟರ ಮಟ್ಟಿಗೆ ಯೋಜನೆ ಬಗ್ಗೆ ಆಸಕ್ತಿ ವಹಿಸಿದ್ದಾರೆಂಬುದು ಇದರಿಂದ ಸಾಬೀತಾಗಿದೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT