ಸೋಮವಾರ, ಆಗಸ್ಟ್ 2, 2021
26 °C
ಹಾಸ್ಟೆಲ್‌ ವಾರ್ಡನ್‌ ಹುದ್ದೆ ದಾಖಲೆ ಪರಿಶೀಲನೆ ಶೀಘ್ರ: ಸಚಿವ ಸುರೇಶ್‌ಕುಮಾರ್

ಎಸ್ಸೆಸ್ಸೆಲ್ಸಿ ಪರೀಕ್ಷೆ: ಪ್ರತಿಷ್ಠೆಯಲ್ಲ, ಭವಿಷ್ಯದ ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಆದರೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದರು. 

‘ಪ್ರಜಾವಾಣಿ’ ವತಿಯಿಂದ ಸೋಮವಾರ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕರೆ ಮಾಡಿದ ಪೋಷಕರಿಗೆ ಅವರು ಈ ಭರವಸೆ ನೀಡಿದರು. ಆಯ್ದ ಪ್ರಶ್ನೋತ್ತರಗಳು ಇಲ್ಲಿವೆ. 

l ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ 8.50 ಲಕ್ಷ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಅಗತ್ಯವಿದೆಯೇ? ಬೇರೆ ರಾಜ್ಯಗಳಲ್ಲಿ ರದ್ದು ಮಾಡಿದ್ದಾರಲ್ಲ. ನೀವೂ ಅದನ್ನೇ ಅನುಸರಿಸಬಹುದಲ್ಲವೆ ?

ವರ್ಷಿಣಿ ಗೌರಿಬಿದನೂರು, ವಿಜಯ್‌ ಬೆಂಗಳೂರು, ಶ್ರೀಧರ್‌ ಚಿಕ್ಕಮಗಳೂರು  

ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ಯಾರೂ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಕಂಟೈನ್‌ಮೆಂಟ್‌ ವಲಯದಲ್ಲಿದ್ದವರು ಅಥವಾ ಅನಾರೋಗ್ಯವುಳ್ಳ ವಿದ್ಯಾರ್ಥಿಗಳು ಈಗ ಪರೀಕ್ಷೆ ಬರೆಯಲು ಆಗದಿದ್ದರೆ ಜುಲೈ ಕೊನೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ದೇಹದಲ್ಲಿ ಉಷ್ಣಾಂಶ ಹೆಚ್ಚು ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ, ವಾಹನ ಸೌಲಭ್ಯವಿಲ್ಲದವರಿಗೆ ಬಸ್‌ ವ್ಯವಸ್ಥೆ ಮಾಡಲಾಗುತ್ತದೆ. ಪರೀಕ್ಷೆ ರದ್ದು ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಡೆತ ಬಿದ್ದಂತಾಗುತ್ತದೆ. ಪಿಯುಸಿಗೆ ಯಾವ ಆಧಾರದ ಮೇಲೆ ಸೀಟು ನೀಡಬೇಕು ಎಂಬ
ಗೊಂದಲವಾಗುತ್ತದೆ.  

l ಹಲವು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದೇವೆ. ವರ್ಗಾವಣೆ ಮಾಡಿದರೆ ಅನುಕೂಲ. 

ತಿಪ್ಪೇಸ್ವಾಮಿ ಚಿಕ್ಕೋಡಿ, ಸಿಂಧೂ ಬೀದರ್, ಮಂಜುನಾಥ್‌ ರಾಮದುರ್ಗ

ಒಂದು ಕೇಡರ್‌ನಲ್ಲಿ ಶೇ 25ರಷ್ಟು ಶಿಕ್ಷಕರ  ವರ್ಗಾವಣೆಗೆ ಸರ್ಕಾರ ನಿರ್ಧರಿಸಿದೆ. ಯಾರು ಅರ್ಹರು ಎಂಬ ಕುರಿತು ಕರಡು ರೂಪಿಸಿದ್ದು, ಅದರ ಆಧಾರದಲ್ಲೇ ವರ್ಗಾವಣೆ ಮಾಡಲಾಗುವುದು. ಈ ಕುರಿತ ಆಕ್ಷೇಪಣೆಗಳಿದ್ದರೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಬೇಕು. ಅವರು ಪರಿಶೀಲಿಸಿ ನಿರ್ಧರಿಸುತ್ತಾರೆ. ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳನ್ನು ಹೊಂದಿರುವ ಶಿಕ್ಷಕರಿಗೆ ವರ್ಗಾವಣೆ ವೇಳೆ ಆದ್ಯತೆ ನೀಡಲಾಗುವುದು.

l ಪರಸ್ಪರ ವರ್ಗಾವಣೆಗೆ (ಮ್ಯೂಚುವಲ್‌ ಟ್ರಾನ್ಸ್‌ಫರ್‌) ಅವಕಾಶ ನೀಡಿದ್ದೀರಿ. ಆದರೆ, ಏಳು ವರ್ಷ ಸೇವೆ ಸಲ್ಲಿಸಿರಬೇಕು ಎಂಬ ಷರತ್ತು ನೀಡಿರುವುದೇಕೆ? 

ನಾಗರಾಜ ಕುಂದಾಪುರ

ಪರಸ್ಪರ ವರ್ಗಾವಣೆ ಎಂದರೆ ಎಷ್ಟು ಸಲ ಬೇಕಾದರೂ ಅವಕಾಶ ನೀಡಲು ಸಾಧ್ಯವೇ? ಏಳು ವರ್ಷಗಳ ಮಿತಿಯೂ ಬೇಡ ಎಂದರೆ ಹೇಗೆ? ಪರಸ್ಪರ ವರ್ಗಾವಣೆ ವೇಳೆಯೂ ಕೆಲವೊಂದು ಮಿತಿಗಳು ಇರುತ್ತವೆ. ಎಲ್ಲರೂ ಪಾಲಿಸಬೇಕು.

l ಎಲ್‌ಕೆಜಿಯಿಂದ ಐದನೆಯ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ರದ್ದುಪಡಿಸಿರುವುದು ಸ್ವಾಗತಾರ್ಹ. ಆದರೆ, 6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳ ಬಳಿಯೂ ಸ್ಮಾರ್ಟ್‌ಫೋನ್‌ ಇರುವುದಿಲ್ಲ. ನೆಟ್‌ವರ್ಕ್‌ ಸಮಸ್ಯೆ ಇರುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ಬೋಧಿಸಲು ಯಾವ ವ್ಯವಸ್ಥೆ ಮಾಡಿಕೊಂಡಿದ್ದೀರಿ ? 

ಪದ್ಮಾ ಬೆಂಗಳೂರು

ಚಿಕ್ಕಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸುವುದು ಸರಿಯಲ್ಲ. 6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಪ್ರಿ-ರೆಕಾರ್ಡಿಂಗ್‌ ವಿಡಿಯೊ ಮೂಲಕ ಬೋಧನೆ ಮತ್ತು ಚಂದನ ವಾಹಿನಿಯಲ್ಲಿ ಪಾಠ ಬೋಧನೆಗೆ ವ್ಯವಸ್ಥೆ ಮಾಡಲಾಗುತ್ತದೆ.

l ಕೆಪಿಎಸ್‌ಸಿಯಿಂದ ಹಾಸ್ಟೆಲ್‌ ವಾರ್ಡನ್‌ ಪರೀಕ್ಷೆ ಬರೆದಾಗಿದೆ. ಕಟ್‌ ಆಫ್‌ ಅಂಕ ಪ್ರಕಟಿಸಿದ್ದಾರೆ. ದಾಖಲೆಗಳ ಪರಿಶೀಲನೆಗೆ ಇನ್ನೂ ಆಹ್ವಾನಿಸಿಲ್ಲ 

ಕೊಟ್ರೇಶ್, ಬಳ್ಳಾರಿ

ಯಾವುದೇ ಹುದ್ದೆ ಭರ್ತಿ ವೇಳೆ ಕೆಪಿಎಸ್‌ಸಿ ಬದಲು ಆಯಾ ಇಲಾಖೆಯೇ ದಾಖಲೆಗಳ ಪರಿಶೀಲನೆ ನಡೆಸಬೇಕು ಎಂದು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಶೀಘ್ರದಲ್ಲಿಯೇ ದಾಖಲೆಗಳ ಪರಿಶೀಲನೆ ನಡೆಸಲಾಗುವುದು 

l ಖಾಸಗಿ ಗ್ರಂಥಾಲಯಗಳನ್ನು ತೆರೆಯಲು ಅವಕಾಶ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಸಹಕಾರಿ.  

ಶ್ರೀಶೈಲ ಧಾರವಾಡ

ಗ್ರಂಥಾಲಯಗಳಿಗೆ ಹೆಚ್ಚಾಗಿ ಹಿರಿಯ ನಾಗರಿಕರೇ ಬರುತ್ತಾರೆ. ಈಗ  ಖಾಸಗಿ ಅಥವಾ ಸರ್ಕಾರಿ ಯಾವುದೇ ಗ್ರಂಥಾಲಯ ತೆರೆದರೂ ತೊಂದರೆಯಾಗುತ್ತದೆ. ಕೇಂದ್ರದ ಸೂಚನೆ ಆಧರಿಸಿ ಗ್ರಂಥಾಲಯಗಳನ್ನು ತೆರೆಯಲಾಗುವುದು. ಪ್ರಮುಖ ಪುಸ್ತಕಗಳ ಡಿಜಿಟಲೀಕರಣ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುವವರು ಮೊಬೈಲ್‌ ಫೋನ್‌ನಲ್ಲಿಯೇ ಈ ಪುಸ್ತಕಗಳನ್ನು ಓದಬಹುದಾಗಿದೆ. 

l ಧಾರವಾಡದಲ್ಲಿ ಶಿಕ್ಷಕರಿಗೂ ಕೊರೊನಾ ಸೋಂಕು ತಗುಲಿದೆಯಲ್ಲ? ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿನ ಶೇ 25ಕ್ಕಿಂತ ಖಾಲಿ ಇರುವ ತಾಲ್ಲೂಕಿನಿಂದ ವರ್ಗಾಯಿಸುವಂತಿಲ್ಲ ಎಂಬ ನಿಯಮ ಕೈಬಿಡಬೇಕು.

ಚಂದ್ರಶೇಖರ್‌ ನುಗ್ಲಿ, ಬೆಂಗಳೂರು

ಶಿಕ್ಷಕರು ಸಹ ಮುನ್ನೆಚ್ಚರಿಕೆ ತೆಗೆದುಕೊಂಡೇ ಕೆಲಸ ಮಾಡಬೇಕು. ಶಿಕ್ಷಕರ ವರ್ಗಾವಣೆ ಕಾಯ್ದೆಯ ಕರಡಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುವುದು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ, ಸರ್ವ ಶಿಕ್ಷಣ ಅಭಿಯಾನದ ನಿರ್ದೇಶಕ ಗೋಪಾಲಕೃಷ್ಣ ಅವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು