ಗುರುವಾರ , ಸೆಪ್ಟೆಂಬರ್ 19, 2019
21 °C

ಇದು ಹಣ ಬಲ, ಜನ ಬಲದ ನಡುವಿನ ಚುನಾವಣೆ: ಶ್ರೀನಿವಾಸ ಪೂಜಾರಿ

Published:
Updated:

ಹುಬ್ಬಳ್ಳಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಹಣ ಬಲ ಹಾಗೂ ಬಿಜೆಪಿಯ ಜನ ಬಲದ ನಡುವಿನ ಚುನಾವಣೆ ಇದು ಎಂದು ಬಿಜೆಪಿಯ ವಿಧಾನ‌ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಗೋಳದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಅವರ ಗ್ರಾಮ ಅದರಗುಂಚಿಯಲ್ಲಿ ಪ್ರಚಾರ ನಡೆಸಿ ‌ಮಾತನಾಡಿದ ಅವರು, ‘ಚಿಕ್ಕನಗೌಡ್ರ ಅವರ ಜನ ಬಲದ ಮುಂದೆ ಸಚಿವ ಡಿ.ಕೆ.‌ ಶಿವಕುಮಾರ್ ಅವರ ಹಣ ಬಲ ನಡೆಯುವುದಿಲ್ಲ’ ಎಂದರು.

ಶಕ್ತಿ ಕೇಂದ್ರಗಳ ಮೂಲಕ ಬಿಜೆಪಿ ಮನೆ ಮನೆಯನ್ನು ತಲುಪಿ, ಜನರ ನಾಡಿ ಮಿಡಿತ ಅರಿಯಲಾಗುತ್ತಿದ್ದು, ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು.

ರಾಜ್ಯದ 125 ತಾಲ್ಲೂಕುಗಳಲ್ಲಿ ಭೀಕರ ಬರಗಾಲ ಇದ್ದು, ಬರ ಪರಿಹಾರ ಕಾರ್ಯಕ್ರಮಗಳ ಜಾರಿಯಾಗಿಲ್ಲ. ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆ ಜಾರಿಗೆ ತಂದಿಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮೇ 23ರ ಚುನಾವಣೆ ಬಳಿಕ, ಈ ದರಿದ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

23ರಂದು ಸಂಜೆ ಸಿ.ಎಂ‌ ಸ್ಥಾನಕ್ಕೆ ಎಚ್ ಡಿಕೆ ರಾಜೀನಾಮೆ: ಅಬ್ದುಲ್ ಅಜೀಂ
ಹುಬ್ಬಳ್ಳಿ:
ಚುನಾವಣೆ ಫಲಿತಾಂಶದ ದಿನವಾದ ಮೇ 23ರ ಸಂಜೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದರು.

ಕುಂದಗೋಳದ ಅದರಗುಂಚಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ಅಂದೇ ಸಿದ್ದರಾಮಯ್ಯ ಕೂಡ ಜೆಡಿಎಸ್ ಸಹವಾಸ ಸಾಕು. ಅವರೊಂದಿಗೆ ಸೇರಿ ಕಾಂಗ್ರೆಸ್ ದುರ್ಬಲಗೊಂಡಿದೆ.‌ ಪಕ್ಷ ಉಳಿಸಲು ನಮಗೆ ಅನುಮತಿ ಕೊಡಿ. ಜೆಡಿಎಸ್ ಬೆಂಬಲ‌ ವಾಪಸ್ ಪಡೆದು ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎಂದು ಪಕ್ಷದ ಹೈಕಮಾಂಡ್ ಗೆ ಮಾಹಿತಿ ನೀಡಲಿದ್ದಾರೆ. ನಂತರ ರಾಜಭವನಕ್ಕೆ ತೆರಳಿ ಬೆಂಬಲ ವಾಪಸ್ ಪಡೆಯುತ್ತಾರೆ. ಬಳಿಕ, ರಾಜ್ಯಪಾಲರ ಸರ್ಕಾರ ರಚನೆಗೆ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಆಹ್ವಾನಿಸಲಿದ್ದಾರೆ. ನಂತರ ಬಿಜೆಪಿ-ಕಾಂಗ್ರೆಸ್ ನವರು ಪರಸ್ಪರ ಬಾಂಬ್ ಹಾಕಿಕೊಳ್ಳಲಿದ್ದಾರೆ’ ಎಂದರು.

*

ಕುಂದಗೋಳದಲ್ಲಿ ಬಿಎಸ್‌ವೈ ಪ್ರಚಾರ
ಹುಬ್ಬಳ್ಳಿ:
ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕುಂದಗೋಳ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಅದರಗುಂಚಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಪ್ರಚಾರ ನಡೆಸಿದರು.

ಸಂಸದ ಪ್ರಹ್ಲಾದ ಜೋಶಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೋಟಾ ಶ್ರೀನಿವಾಸ ಪೂಜಾರಿ, ಅಬ್ದುಲ್ ಅಜೀಂ ಇದ್ದರು.

Post Comments (+)