ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೃತ’ ಕುಡಿಯುತ್ತಿರುವ ಕಾಂಗ್ರೆಸ್ಸಿಗರು’

ದೋಸ್ತಿಗಳ ಜಟಾಪಟಿ ತಾರಕಕ್ಕೆ/ ಮೊಯಿಲಿ ಹೇಳಿಕೆಗೆ ವಿಶ್ವನಾಥ್‌, ದೇವೇಗೌಡ ತಿರುಗೇಟು
Last Updated 22 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ವೀರಪ್ಪ ಮೊಯಿಲಿ ಚುನಾವಣಾ ಮೈತ್ರಿಯ ಕುರಿತು ಶನಿವಾರ ಆಡಿದ ಮಾತುಗಳು ‘ದೋಸ್ತಿ’ ಪಕ್ಷಗಳ ನಾಯಕರ ನಡುವೆ ಪರಸ್ಪರ ವಾಕ್ಸಮರಕ್ಕೆ ಕಾರಣವಾಯಿತು.

‘ಒಡಕಿನ ಮಾತುಗಳನ್ನು ಆಡಬೇಡಿ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ನೀಡಿದ್ದ ಸಲಹೆ ಉಭಯ ಪಕ್ಷಗಳ ನಾಯಕರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂಬುದಕ್ಕೆ ಶನಿವಾರದ ಆರೋಪ– ಪ್ರತ್ಯಾರೋಪಗಳೇ ಸಾಕ್ಷಿಯಾಗಿತ್ತು.

‘ಈ ಸರ್ಕಾರದಲ್ಲಿ ‘ಅಮೃತ’ ಕುಡಿಯುತ್ತಿರುವವರೂ ಕಾಂಗ್ರೆಸ್‌ನವರೇ. ಸಚಿವ ಸ್ಥಾನಗಳು, ನಿಗಮ–ಮಂಡಳಿಗಳಲ್ಲಿ ಸಿಂಹಪಾಲು ಅವರಿಗೇ ಸಿಕ್ಕಿದೆ. ಸಂಬಂಧಕ್ಕಿಂತ ಸಂಕಷ್ಟವೇ ಜಾಸ್ತಿಯಾಗಿದೆ’ ಎಂದು ವಿಶ್ವನಾಥ್‌ ಕುಟುಕಿದ್ದಾರೆ.

ಜೆಡಿಎಸ್ ಜತೆ ಮೈತ್ರಿ ಸೋಲಿಗೆ ಕಾರಣ: ಚಿಕ್ಕಬಳ್ಳಾಪುರದಲ್ಲಿ ಬೆಳಿಗ್ಗೆ ಮಾತನಾಡಿದ ವೀರಪ್ಪ ಮೊಯಿಲಿ, ‘ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಹೋದ ಕಾರಣಕ್ಕೇ ನಾವು ಸೋತಿದ್ದೇವೆ. ಅದರಿಂದ ಕಹಿ ಅನುಭವವಾಗಿದೆ. ಅದು ಪುನರಾವರ್ತನೆ ಆಗಬಾರದು. ಮುಂದೆ ನಾವು ನಮ್ಮ ಪಕ್ಷವನ್ನು ಸಂಘಟಿಸಿ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಏಕಾಂಗಿಯಾಗಿ ಎದುರಿಸಬೇಕು’ ಎಂದರು. ಈ ಹೇಳಿಕೆ ಜೆಡಿಎಸ್‌ ನಾಯಕರನ್ನು ಕೆರಳಿಸಿತು.

‘ದೇವೇಗೌಡರು ಒಂದು ದಿನ ಒಂದು ರೀತಿ, ಮಾರನೇ ದಿನ ಮತ್ತೊಂದು ರೀತಿ ಹೇಳುತ್ತಾರೆ. ನಾವು ಆ ರೀತಿ ಹೇಳುವವರಲ್ಲ. ಒಮ್ಮೆ ಹೇಳಿಕೆ ಕೊಟ್ಟರೆ ಅದನ್ನು ಹಿಂಪಡೆಯುವುದಿಲ್ಲ. ಆಲೋಚನೆ ಮಾಡಿಯೇ ಹೇಳುತ್ತೇವೆ. ದೇವೇಗೌಡರು ಪರಿಸ್ಥಿತಿಗೆ ತಕ್ಕಂತೆ ಹೇಳಿರಬಹುದು. ಅವರು ದೊಡ್ಡವರು, ಮಾಜಿ ಪ್ರಧಾನಿಗಳು ಅವರ ಹೇಳಿಕೆ ಬಗ್ಗೆ ವ್ಯಾಖ್ಯಾನ ಮಾಡಲಾರೆ’ ಎಂದೂ ಮೊಯಿಲಿ ವ್ಯಂಗ್ಯವಾಡಿದ್ದರು.

ಮೊಯಿಲಿ ಹೇಳಿಕೆಗೆ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್‌, ‘ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಮುಖಂಡರು ದಿನಕ್ಕೊಬ್ಬರಂತೆ ಸಮ್ಮಿಶ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆಯುವ ಬಯಕೆ ಇದ್ದರೆ ಹಾಗೇ ಮಾಡಲಿ’ ಎಂದರು.

‘ನಮ್ಮ ವರಿಷ್ಠರು ಮತ್ತು ಕಾಂಗ್ರೆಸ್‌ನವರು ಸಾಧಕ–ಬಾಧಕಗಳ ಬಗ್ಗೆ ಆಲೋಚನೆ ಮಾಡದೇ ಮೈತ್ರಿ ಮಾಡಿಕೊಂಡರು. ಇದರಿಂದಾಗಿ ಎರಡೂ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಾಯಿತು. ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೆ ನಮಗೆ ನಾಲ್ಕರಿಂದ ಐದು ಸ್ಥಾನಗಳು, ಕಾಂಗ್ರೆಸ್‌ಗೆ ಏಳರಿಂದ ಎಂಟು ಸ್ಥಾನ ಸಿಗುತ್ತಿತ್ತು. ನಮ್ಮಿಂದ ಅವರು, ಅವರಿಂದ ನಾವು ಸೋತೆವು. ಆತುರದ ನಿರ್ಧಾರವೇ ಹಿನ್ನಡೆಗೆ ಕಾರಣ’ ಎಂದು ಅವರು ಹೇಳಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರೂ ಮೊಯಿಲಿ ಹೇಳಿಕೆ ತಿರುಗೇಟು ನೀಡಿ, ‘ಇನ್ನೊಬ್ಬರ ವಿಚಾರ ನನಗೆ ಬೇಕಾಗಿಲ್ಲ. ನಾನಾಯ್ತು ನನ್ನ ಪಕ್ಷ ಆಯ್ತು. ಕಾಂಗ್ರೆಸ್‌ ಪಕ್ಷವೇ ಸರ್ಕಾರ ಮುನ್ನಡೆಸುವುದು ಬೇಡವೆಂದು ನಾನೆಲ್ಲೂ ಹೇಳಿಲ್ಲ’ ಎಂದಿದ್ದಾರೆ.

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ -ಪ್ರಜಾವಾಣಿ ಚಿತ್ರ
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ -ಪ್ರಜಾವಾಣಿ ಚಿತ್ರ

ಸರ್ಕಾರ ಕಿತ್ತೊಗೆಯುತ್ತೇವೆ: ಮುರಳೀಧರರಾವ್‌
‘ಕರ್ನಾಟಕದಲ್ಲಿ ಜನರಿಂದ ತಿರಸ್ಕೃತವಾಗಿರುವ ಮೈತ್ರಿ ಸರ್ಕಾರವನ್ನು ಕಿತ್ತೊಗೆಯುವುದು ನಮ್ಮ ಗುರಿ. ಎಷ್ಟು ಬೇಗ ಈ ಮೈತ್ರಿ ಸರ್ಕಾರವನ್ನು ಕಿತ್ತೊಗೆಯುತ್ತೇವೋ, ರಾಜ್ಯದ ಭವಿಷ್ಯ ಅಷ್ಟು ಸುರಕ್ಷಿತವಾಗಿರುತ್ತದೆ’ ಎಂದು ಬಿಜೆಪಿ‌ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಹೇಳಿದ್ದಾರೆ.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಜನರು ದೋಸ್ತಿಗಳನ್ನು ತಿರಸ್ಕರಿಸಿದ್ದಾರೆ. ಈಗ ಇಡೀ ಭಾರತದ ಭವಿಷ್ಯ ನಿರ್ಧಾರ ಮಾಡುವ ಜವಾಬ್ದಾರಿ ಬಿಜೆಪಿ ಕೈಯಲ್ಲಿದೆ. ದಕ್ಷಿಣ ಭಾರತವೂ ಈಗ ಬಿಜೆಪಿ ರೆಡಾರ್ ವ್ಯಾಪ್ತಿಯಲ್ಲಿದೆ’ ಎಂದು ಬಿಜೆಪಿ ಕಚೇರಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT